ಸುದ್ದಿ ಸಂಕ್ಷೇಪ
ನಾಳೆ ಚಹ ವ್ಯಾಪಾರಿಗಳ ಸಂಘ ಉದ್ಘಾಟನೆ
ಮೈಸೂರು: ಮೈಸೂರು ನಗರ ಟೀ ಸ್ಟಾಲ್ ವ್ಯಾಪಾರಿಗಳ ಸಂಘವನ್ನು ಫೆ. 2 ರಂದು ಮಧ್ಯಾಹ್ನ 2ಕ್ಕೆ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಮಾಜಿ ಸಚಿವ ಎಸ್. ಎ. ರಾಮದಾಸ್ ಉದ್ಘಾಟಿಸುವರು ಎಂದು ಸಂಘದ ಸಂಚಾಲಕ ಸುನಿಲ್ ರೈ ಹೇಳಿದರು. ನಗರದಲ್ಲಿ ಸುಮಾರು 2500 ಚಹಾ ಅಂಗಡಿಗಳಿದ್ದು, 6 ಸಾವಿರಕ್ಕೂ ಅಧಿಕ ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರನ್ನು ಸಂಘಟಿಸುವುದು ಹಾಗೂ ವ್ಯಾಪಾರಗಾರರ ಶ್ರೇಯಸ್ಸಿಗೆ ಶ್ರಮಿಸುವುದು ಸಂಘದ ಉದ್ದೇಶವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಬಾಲ್ಯದಲ್ಲಿ ಟೀ ಮಾರುತ್ತಿದ್ದರು.
ಇದು ಹೆಮ್ಮೆಯ ಸಂಗತಿ. ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡುವುದು ಸಂಘದ ಉದ್ದೇಶವಲ್ಲ ಎಂದರು.ಮುಖಂಡರಾದ ಕೆ.ಎನ್. ಚಂದ್ರಶೇಖರ್, ಪ್ರತಾಪ್ಸಿಂಗ್, ಚಂದ್ರಶೇಖರ್ ಶೆಟ್ಟಿ, ಶಾಂತಿಲಾಲ್ ಪುರೋಹಿತ್ ಇದ್ದರು.
'ಕನ್ನಡ ಕಟ್ಟುವ ಕೆಲಸಕ್ಕೆ ಸಹಭಾಗಿತ್ವ ಅಗತ್ಯ'
ಮೈಸೂರು: ಕನ್ನಡವನ್ನು ಕಟ್ಟಲು, ಬೆಳೆಸಲು, ಮಾನಸಿಕವಾಗಿ ಎಲ್ಲರೂ ಸಿದ್ದರಿರಬೇಕು, ಈ ಕೆಲಸ ಕೇವಲ ಒಬ್ಬರಿಂದ ಸಾಧ್ಯವಿಲ್ಲ. ಎಲ್ಲರೂ ಕೈಜೋಡಿಸಬೇಕು ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಹೇಳಿದರು.
ಕೆನರಾ ಬ್ಯಾಂಕ್ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಬ್ಯಾಂಕಿನ ವೃತ್ತ ಕಚೇರಿಯ ಉಪ ಮಹಾಪ್ರಬಂಧಕ ಡಾ.ಎಸ್.ಟಿ. ರಾಮಚಂತ್ರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರೀಯ ಬಾಷೆಯ ಜೊತೆಗೆ ಪ್ರಾಂತೀಯ ಭಾಷೆಯ ಬೆಳವಣಿಗೆಗೆ ಬ್ಯಾಂಕ್ ನೌಕರರ ವರ್ಗದವರು ಸ್ಪಂದಿಸಬೇಕು ಎಂದು ಹೇಳಿದರು. ಪ್ರೊ. ನೀಲಗಿರಿ ತಳವಾರ್ ಹಾಗೂ ಡಾ.ಎಸ್.ಟಿ. ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ರಾಜೇಶ್ ಪಡಿಯಾರ್ ಮತ್ತು ಬಳಗವು ಲಘು ಸಂಗೀತ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಎಂ.ಎನ್. ರಮೇಶ್ ಹಾಗೂ ಇತರ ಪದಾಧಿಕಾರಿಗಳು ಭಾಗವಹಿಸಿದ್ದರು. ಪ್ರಬಂಧಕ ಜಯರಾಜ್ ಸ್ವಾಗತಿಸಿದರು. ಗಾಯಿತ್ರಿ ವಂದಿಸಿದರು.
ರಸ್ತೆ ಬದಿ ವರ್ತಕರಿಗೆ ಸಮಿತಿ ಸೂಚನೆ
ಮೈಸೂರು: ರಸ್ತೆ ಬದಿ ವ್ಯಾಪಾರಿಗಳು ನೋಂದಣಿ ಮಾಡಿಸಿಕೊಳ್ಳುವಂತೆ ಶ್ರೀ ಚಾಮುಂಡೇಶ್ವರಿ ಶ್ರಮಜೀವಿ ರಸ್ತೆಬದಿ ವ್ಯಾಪಾರಿಗಳ ರಕ್ಷಣಾ ಸಮಿತಿ ಅಧ್ಯಕ್ಷ ಮಂಜುನಾಥ್ ದೊಡ್ಮನೆ ಕೋರಿದ್ದಾರೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಂತೆ ಆಹಾರ ಪದಾರ್ಥಗಳನ್ನು ಮಾರುವವರು ಗ್ರಾಹಕರ ಸುರಕ್ಷತೆಗಾಗಿ ನೋಂದಣಿ ಮಾಡಿಸಿಕೊಳ್ಳಬೇಕಿದೆ. ಈ ಕಾರ್ಯಕ್ರಮವು ಜ.30 ರಿಂದ ಫೆ.3 ರವರೆಗೆ ಛತ್ರಿಮರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಐಟಿಡಿಸಿ ಕಚೇರಿಯಲ್ಲಿ ಸಂಘದ ವತಿಯಿಂದ ಸಂಬಂಧಪಟ್ಟ ಅಧಿಕಾರಿಗಳ ಮುಖಾಂತರ ಸ್ಥಳದಲ್ಲಿಯೇ ನೋಂದಣಿ ಮಾಡಿಕೊಡಲಾಗುವುದು. ನೋಂದಣಿ ಮಾಡಿಸಲು ಪಾಸ್ಪೋರ್ಟ್ ಅಳತೆಯ 2 ಭಾವಚಿತ್ರ, ಯಾವುದಾದರೊಂದು ಗುರುತಿನ ಚೀಟಿ, 100 ನೋಂದಣಿ ಶುಲ್ಕ ತರಬೇಕು ಎಂದು ಅವರು ತಿಳಿಸಿದ್ದಾರೆ.
ನಾಳೆ, ನಾಡಿದ್ದು ಗ್ರಾಹಕರ ಹಬ್ಬ
ಮೈಸೂರು: ಪಾಠಕ್ ಡೆವೆಲ್ಪರ್ಸ್ ವತಿಯಿಂದ ಫೆ. 1 ಮತ್ತು 2 ರಂದು ಗ್ರಾಹಕರ ಹಬ್ಬವನ್ನು ಯಾದವಗಿರಿಯ ಪ್ರಥಮ್ ದಿಯಾ ವಸತಿ ಸಮುಚ್ಚಯದಲ್ಲಿ ಏರ್ಪಡಿಸಿದೆ.
ಪ್ರತಿಯೊಬ್ಬರು ಸ್ವಂತ ಮನೆ ೊಂದುವುದು ಬಹುಮುಖ್ಯ ಕನಸಾಗಿರುತ್ತದೆ. ಅವರ ಬೇಡಿಕೆಯನ್ನು ಈಡೇರಿಸುವ ಸಲುವಾಗಿ ಕಳೆದ ವರ್ಷ ನಾಲ್ಕು ಯೋಜನೆಗಳನ್ನು ಪೂರೈಸಲಾಯಿತು ಎಂದು ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕಿ ಕೆ. ಮೇರಿ ತಿಳಿಸಿದರು.
ಕಟ್ಟಡ ನಿರ್ಮಾಣ ಸಮಯ ಕಡಿಮೆಗೊಳಿಸುವುದು, ಗ್ರಾಹಕರಿಗೆ ಕಡಿಮೆ ಅವಧಿಯಲ್ಲಿ ಮನೆ ಹಸ್ತಾಂತರಿಸುವುದು, ಗುಣಮಟ್ಟದ ಸೇವೆ ಒದಗಿಸುವುದು ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಅಂದು ಗ್ರಾಹಕರ ಹಬ್ಬದ ಅಂಗವಾಗಿ ಎರಡು ದಿನವೂ ಬೆಳಗ್ಗೆ 10 ರಿಂದ ಸಂಜೆ 6 ರವರೆಗೆ ವಸತಿ ಯೋಜನೆ ಮಾಹಿತಿಸಾರ್ವಜನಿಕರಿಗೆ ವಿವರಿಸಲಾಗುವುದು ಎಂದರು.
ಸಿಎಫ್ಟಿಆರ್ಐ ವಿಜ್ಞಾನಿಗೆ ಇಮ್ಮಡಿ ಫೆಲೋಶಿಪ್
ಮೈಸೂರು: ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯ (ಸಿಎಫ್ಟಿಆರ್ಐ) ವಿಜ್ಞಾನಿ ಡಾ.ಕೆ.ಎಸ್ಎಂ.ಎಸ್. ರಾಘವರಾವ್ ಅವರಿಗೆ ರಾಷ್ಟ್ರೀಯ ಕೃಷಿ ವಿಜ್ಞಾನ ಅಕಾಡೆಮಿಯು ಇಮ್ಮಡಿ ಫೆಲೋಶಿಪ್ ನೀಡಿ ಗೌರವಿಸಿದೆ.
ಈ ಮೊದಲು ಸಿಎಫ್ಟಿಆರ್ಐ ಕೂಡ ರಾವ್ ಅವರನ್ನು ಫೆಲೋವನ್ನಾಗಿ ಚುನಾಯಿಸಿ ಗೌರವಿಸಿತ್ತು. ಆಹಾರ ಮತ್ತು ಜೈವಿಕ ಸಂಸ್ಕರಣಾ ಎಂಜಿನಿಯರಿಂಗ್ ಕ್ಷೇತ್ರಕ್ಕೆ ನೀಡಿದ ಕೊಡುಗಾಗಿ ಈ ಗೌರವ ಸಂದಿದೆ. ಡಾ. ರಾಘವರಾವ್ ಆಹಾರ ಮತ್ತು ಜೈವಿಕ ತಂತ್ರವಿಧಿಗಳ ವಿನ್ಯಾಸ ಕ್ಷೇತ್ರದಲ್ಲಿ ಸಂಸ್ಕರಣೆ, ತಂತ್ರವಿಧಿಗಳ ವಿನ್ಯಾಸ, ಉತ್ಪನ್ನಗಳ ಅಭಿವೃದ್ಧಿ ಹಾಗೂ ಆಹಾರ ಸಂಸ್ಕರಣೋಪಕರಣಗಳ ಅಭಿವೃದ್ಧಿಯಲ್ಲಿ ಸಂಶೋಧನೆಗಳನ್ನು ಕೈಗೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಎಂಜಿನಿಯರ್- ವಿಜ್ಞಾನಿಯಾಗಿರುವ ರಾವ್ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ 155ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

