ಸಂಗೀತ ವಿದ್ವಾನ್ ಸಂಪತ್ಕುಮಾರಾಚಾರ್ಯ ಇನ್ನಿಲ್ಲ
ಮೈಸೂರು: ಸಂಗೀತ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತ ಡಾ. ವಿ.ಎಸ್. ಸಂಪತ್ಕುಮಾರಾಚಾರ್ಯ(90) ಶನಿವಾರ ಮೈಸೂರಿನಲ್ಲಿ ನಿಧನರಾದರು.
ಸಂಪತ್ಕುಮಾರಾಚಾರ್ಯರು ಚಾಮರಾಜನಗರ ತಾಲೂಕಿನ ವೆಂಕಟಯ್ಯನ ಗ್ರಾಮದಲ್ಲಿ 1925ರಲ್ಲಿ ಜನಿಸಿದ್ದರು. ಮಹಾರಾಜ ಕಾಲೇಜಿನಲ್ಲಿ 1947ರಲ್ಲಿ ಬಿ.ಎ.(ಆನರ್ಸ್ ಪದವಿ) ಪಡೆದು, ಕಾಶಿ ವಿವಿಯಿಂದ 1962ರಲ್ಲಿ ಎಂ.ಎ. ಪದವಿ ಪಡೆದರು. ಹೊಯ್ಸಳರ ಯುಗದ ಜನಜೀವನ- ಕ್ರಿ.ಶ. 1000-1300 ಎಂಬ ಪ್ರೌಢ ಪ್ರಬಂಧ ರಚನೆಗೆ ಮೈಸೂರು ವಿವಿ 1971ರಲ್ಲಿ ಪಿಎಚ್.ಡಿ ನೀಡಿ ಗೌರವಿಸಿತ್ತು.
ತಮಿಳುನಾಡಿನ ತಮ್ಮ ಪ್ರೌಢಶಾಲೆಯೊಂದರಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಆಚಾರ್ಯರು ಕರ್ನಾಟಕ ಹಲವು ಪ್ರೌಢಶಾಲೆಗಳಲ್ಲಿ ಮತ್ತು ಪಿಯು ಕಾಲೇಜುಗಳಲ್ಲಿ ಶಿಕ್ಷಕರಾಗಿ, ಕೆಲಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ 1981 ರಲ್ಲಿ ನಿವೃತ್ತರಾದರು. ಸಂಗೀತದ ಬಗ್ಗೆ ವಿಶೇಷ ಆಸಕ್ತಿಯನ್ನು ಬೆಳೆಸಿಕೊಂಡು ಸಂಗೀತಶಾಸ್ತ್ರ ಮತ್ತು ಸಂಗೀತ ವಿದ್ವಾಂಸರ ಕುರಿತ ಲೇಖನಗಳನ್ನು ಪ್ರಕಟಿಸಿದ್ದಾರೆ.
ಆಚಾರ್ಯರು ಸಂಗೀತ ಕ್ಷೇತ್ರದಲ್ಲಿ ಮಾಡಿದ ಸಾಧನೆ ಗುರುತಿಸಿ ರಾಜ್ಯ ಸರ್ಕಾರ ಕಳೆದ ಬಾರಿ ನಡೆದ ದಸರಾ ಮಹೋತ್ಸವದಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಇವರು ಮಾಡಿದ ಸಾಧನೆಗಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ(1994), ಲಲಿತ ಕಲಾಶ್ರೇಯ(2001), ಸಂಗೀತ ವಿದ್ಯಾನಿಧಿ, ಶಸ್ತ್ರ ಕೌಸ್ತುಭ(2006) ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಜಿಲ್ಲಾ ಸಚಿವರ ಸಂತಾಪ: ಸಂಗೀತ ವಿದ್ವಾನ್ ಡಾ.ವಿ.ಎಸ್. ಸಂಪತ್ಕುಮಾರಾಚಾರ್ಯರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ತೀವ್ರ ಸಂತಾಪ ಸೂಚಿಸಿದ್ದಾರೆ. ಆಚಾರ್ಯರು ಕರ್ನಾಟಕ ಕಲಾತಿಲಕ, ಲಲಿತ ಕಲಾಶ್ರೇಯ ಸೇರಿದಂತೆ ಇನ್ನು ಮುಂತಾದ ಪ್ರಶಸ್ತಿ ಪಡೆದಿದ್ದಾರೆ. ಇವರ ನಿಧನದಿಂದಾಗಿ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಚಿವರು ಸಂದೇಶದಲ್ಲಿ ತಿಳಿಸಿದ್ದಾರೆ.
ಸಂಪತ್ಕುಮಾರಾಚಾರ್ಯರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

