ಅಲ್ಪಸಂಖ್ಯಾತರ ಬಡಾವಣೆಗೆ ಸೌಲಭ್ಯವಿಲ್ಲ
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸಾಡೇ ರಸ್ತೆ, ಸವಾಯ್ ಚೌಕ, ಸುನ್ನಿ ಚೌಕ, ಎಂಕೆಡಿಕೆ ರಸ್ತೆ ಮುಂತಾದ ರಸ್ತೆಗಳು ತುಂಬಾ ದುಸ್ಥಿತಿಯಲ್ಲಿದ್ದು, ಈ ಪ್ರದೇಶಗಳಲ್ಲಿನ ರಸ್ತೆಯ ಡಾಂಬರು ಕಿತ್ತು ಬರುತ್ತಿದೆ. ಬೀದಿ ದೀಪಗಳಿಲ್ಲದೆ, ಒಳಚರಂಡಿ ವ್ಯವಸ್ಥೆ ಇಲ್ಲದೆ ಹದಗೆಟ್ಟಿದೆ. ಕಸದ ವಿಲೇವಾರಿ ಮಾಡದೇ ಜನರು ತುಂಬಾ ತೊಂದರೆ ಪಡುತ್ತಿದ್ದಾರೆ. ಇದೇ ತಿಂಗಳ ರಂಜಾನ್ ಮಾಸ ಆರಂಭವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕಿದೆ. ನಗರಪಾಲಿಕೆಯಂತು ಈ ಪ್ರದೇಶಗಳ ಜವಾಬ್ದಾರಿ ನಿರ್ಲಕ್ಷಿಸಿವೆ. ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಕೇವಲ ಹೊಸ ಬಡಾವಣೆಗಳಿಗೆ ಭೇಟಿ ನೀಡುವ ಮೇಯರ್ ಮತ್ತು ಅಧಿಕಾರಿ ವರ್ಗ ಈ ಪ್ರದೇಶಗಳತ್ತ ಮುಖ ಮಾಡಿಲ್ಲ. ಆದ್ದರಿಂದ ಸಂಬಂಧ ಅಧಿಕಾರಿಗಳು ಕೂಡಲೇ ಈ ಸ್ಥಳಕ್ಕೆ ಆಗಮಿಸಿ ಕ್ರಮ ವಹಿಸಬೇಕಾಗಿದೆ.
ಟಿ ಅಲ್ಲಾ ಭಕ್ಷ್, ಕಾಂಗ್ರೆಸ್ ಮುಖಂಡ
ಬಾರ್, ವೈನ್ ಸ್ಟೋರ್ ತಡೆಯಿರಿ
ಮೈಸೂರಿನ ಹೆಬ್ಬಾಳ್ ಬಡಾವಣೆಯ ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ಶ್ರೀಚಾಮುಂಡಿ ದೇವಸ್ಥಾನದ ಮುಂಭಾಗದಲ್ಲಿ ಬಾರ್ ಅಥವಾ ವೈನ್ ಸ್ಟೋರ್ ತೆರೆಯುವುದರ ಬಗ್ಗೆ ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಸರ್ಕಾರಕ್ಕೆ ಮನವಿ ಮಾಡುವುದಿಷ್ಟೆ, ಈ ಜಾಗದ ಮುಂಭಾಗದಲ್ಲಿ ದೇವಸ್ಥಾನ ಹಾಗೂ ಅಕ್ಕ- ಪಕ್ಕದಲ್ಲಿ ಶಾಲಾ- ಕಾಲೇಜುಗಳು ಇರುವುದು ಸರಿಯಷ್ಟೆ. ಈಗಾಗಲೇ ರಸ್ತೆಯಲ್ಲಿ ಅಧಿಕವಾದ ವಾಹನ ದಟ್ಟಣೆ ಮತ್ತು ಜನಸಂಖ್ಯೆಯಿಂದ ಕೂಡಿರುವುದರಿಂದ ಇಲ್ಲಿನ ಸಾರ್ವಜನಿಕರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ದಯಮಾಡಿ ಈ ಸ್ಥಳಕ್ಕೆ ಯಾವುದೇ ಬಾರ್ ಅಥವಾ ವೈನ್ ಸ್ಟೋರ್ ಶಾಪನ್ನು ತೆರೆಯಲು ಅನುಮತಿ ನೀಡಬಾರದೆಂದು ಕೇಳಿಕೊಳ್ಳುತ್ತೇನೆ.
ಟಿ ಕೆ.ವಿ. ಶ್ರೀಧರ, ಅಧ್ಯಕ್ಷರು, ನವಭಾರತ ನಿರ್ಮಾಣ ಸೇವಾ ಟ್ರಸ್ಟ್
ಯುವಜನರ ಕೈಯಲ್ಲಿ ದೇಶ ಕಾಪಾಡುವ ಶಕ್ತಿ
ಮೈಸೂರು: ದೇಶ ಕಾಪಾಡುವ ಶಕ್ತಿ ಈಗಿನ ಯುವಜನರ ಕೈಯಲ್ಲಿದೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು. ನೆಹರು ಯುವಕೇಂದ್ರ ಹಾಗೂ ಸ್ನೇಹ ಸ್ಪಂದನ ಮಹಿಳಾ ಮಂಡಳಿ ಸಂಯುಕ್ತವಾಗಿ ಭಾನುವಾರ ಕುವೆಂಪುನಗರದಲ್ಲಿ ಆಯೋಜಿಸಿದ್ದ ಶ್ಯಾಮಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ಯಾಮಪ್ರಸಾದ್ ಮುಖರ್ಜಿಯವರು ಜಾತಿ, ಮತ, ಸ್ವಾರ್ಥಗಳನ್ನು ಬಿಟ್ಟು ಮತ್ತೊಬ್ಬರಿಗಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದರು. ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಮುಖರ್ಜಿ, ಯುವಜನರನ್ನು ಒಗ್ಗೂಡಿಸುತ್ತಿದ್ದರು. ಅಖಂಡ ಭಾರತ ಕಲ್ಪನೆಯ ಕನಸು ಕಂಡಿದ್ದರು. ದೇಶಕ್ಕೆ ಅವರು ಅಪಾರ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು. ಈಗಿನ ಜನ ಸಮಾಜದಲ್ಲಿ ಜಾತಿ, ಹಣಕ್ಕಾಗಿ ಸ್ವಾರ್ಥಿಗಳಾಗುತ್ತಿದ್ದಾರೆ. ಇದನ್ನು ತೊರೆದು ಸತ್ಯ ಮಾರ್ಗದಲ್ಲಿ ನಡೆಯಬೇಕು. ಈ ಮೂಲಕ ಯುವಕರು ದೇಶದ ಸೇವೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ರಾಷ್ಟ್ರೀಯ ಪರಿಷತ್ ಸದಸ್ಯ ಬಿ.ಪಿ.ಮಂಜುನಾಥ್, ಜಿಲ್ಲಾ ನೆಹರು ಯುವ ಕೇಂದ್ರದ ಸಮನ್ವಯಧಿಕಾರಿ ಎಂ.ಎನ್.ನಟರಾಜ್, ಕೆ.ವಿ.ಮಲ್ಲೇಶ್, ಅನಂತನಾರಾಯಣ್, ವಿಜಯ ರಾಧಾಕೃಷ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

