ಬೇರೆ ಜಾತಿ ಕುಹಕ ಮಾಡಬೇಡಿ: ರಾಜಶೇಖರ
ಮೈಸೂರು: ವಿದ್ವಾಂಸ ನಾರಾಯಣಾಚಾರ್ಯರು ತಮ್ಮ ಬ್ರಾಹ್ಮಣ ಸಮಾಜವನ್ನು ಶ್ರೇಷ್ಠ ಎಂದು ಹೇಳಿಕೊಳ್ಳಲಿ. ಆದರೆ ಅದೇ ಧಾಟಿಯಲ್ಲಿ ಬೇರೆ ಜಾತಿಗಳನ್ನು ಕುಹುಕ ಮಾಡಿ ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಆಗ್ರಹಿಸಿದರು.
ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ನಡೆದ ಸಮಾರಂಭದಲ್ಲಿ ಕಡೆಮನೆ ಪ್ರಕಾಶನವು ಹೊರತಂದ ಪ್ರೊ.ಎಚ್. ಸಿದ್ದಲಿಂಗಯ್ಯ ರಚಿಸಿರುವ ಮಹರ್ಷಿ ವಾಲ್ಮೀಕಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು, ನಾರಾಯಣಾಚಾರ್ಯರಲ್ಲಿ ವಿದ್ವತ್ತಿದೆ. ಅದನ್ನು ಸರಿಯಾದ ಕೆಲಸಕ್ಕೆ ಬಳಸಿಕೊಳ್ಳಬೇಕೆ ವಿನಃ ಅನ್ಯ ಜಾತಿಗಳನ್ನು ಹೀಯಾಳಿಸುವುದಕ್ಕಲ್ಲ. ಮಹರ್ಷಿ ವಾಲ್ಮೀಕಿಯನ್ನು ಬ್ರಾಹ್ಮಣ ಎನ್ನುವ ಮೂಲಕ ನಾಯಕ ಜನಾಂಗವನ್ನು ಅಪಮಾನ ಮಾಡಿರುವುದು ಸಮಾಜದ ಸೌಹಾರ್ದ ಕದಡಿದಂತಾಗಿದೆ ಎಂದರು. ವಾಲ್ಮೀಕಿ ಯಾರು ಎಂಬ ನಾರಾಯಣಾಚಾರ್ಯರ ಪ್ರಶ್ನೆಗೆ ಪ್ರೊ.ಎಚ್.ಸಿದ್ದಲಿಂಗಯ್ಯ ಅವರು ತಮ್ಮ ಕೃತಿಯಲ್ಲಿ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ಜಾತಿಯಲ್ಲಿ ಕೀಳಾಗಿದ್ದು ವಿದ್ವತ್ತಿನಲ್ಲಿ ಮೇಲಾದ ವ್ಯಕ್ತಿಯನ್ನು ಯಾರೂ ಕೀಳು ಮಾಡಬಾರದು ಎಂದು ಸ್ವತಃ ನಾರಾಯಣಾಚಾರ್ಯರೇ ವಾಲ್ಮೀಕಿ ಯಾರು ಎಂಬ ಕೃತಿಯಲ್ಲಿ ಪ್ರಸ್ತಾಪಿಸಿದ್ದಾರೆ. ದುರಾದೃಷ್ಟವಶಾತ್ ಅದೇ ಕೃತಿಯಲ್ಲಿ ವಾಲ್ಮೀಕಿಯನ್ನು ಬ್ರಾಹ್ಮಣ ಎನ್ನುವ ಮೂಲಕ ತಾವೇ ಸಣ್ಣವರಾಗಿದ್ದಾರೆ. ಅವರ ಎಲ್ಲಾ ಪ್ರಶ್ನೆಗಳಿಗೆ ಮಹರ್ಷಿ ವಾಲ್ಮೀಕಿ ಕೃತಿ ಉತ್ತರ ನೀಡಬಲ್ಲದು. ನಾಯಕ ಜನಾಂಗದವರು ನಾರಾಯಣಾಚಾರ್ಯರ ಭಾವಚಿತ್ರ ಸುಡುವುದರಿಂದ ಪ್ರಯೋಜನವಿಲ್ಲ. ಬದಲಾಗಿ ಮಹರ್ಷಿ ವಾಲ್ಮೀಕಿ ಕೃತಿಗಳನ್ನು ಲಕ್ಷ ಲಕ್ಷ ಸಂಖ್ಯೆಯಲ್ಲಿ ಮುದ್ರಿಸಿ ಎಲ್ಲರಿಗೂ ನೀಡಿ ಅಭಿಮಾನ ತೋರಿಸಬೇಕು ಎಂದು ಕರೆ ನೀಡಿದರು.
ಬ್ರಾಹ್ಮಣರೇ ಶ್ರೇಷ್ಠರಲ್ಲ: ಬ್ರಾಹ್ಮಣನಾಗಿ ಹುಟ್ಟಿದ ಮಾತ್ರಕೆ ಅವನು ಶ್ರೇಷ್ಠನಲ್ಲ. ಸಮಾಜದಲ್ಲಿ ಎಲ್ಲರೂ ಶ್ರೇಷ್ಠರೇ. ಅವರು ಬೆಳೆಯುವ ವಾತಾವರಣದಲ್ಲಿ ವಿದ್ವತ್ತು ಪಡೆಯಲಿಕ್ಕೆ ಸಾಧ್ಯವಾಗುತ್ತದೆಯೇ ಹೊರತು ಹುಟ್ಟಿನಿಂದ ವಿದ್ವತ್ತು ಬರುವುದಿಲ್ಲ. ಧಾರವಾಡದಲ್ಲಿ ನನ್ನ ಇಂಗ್ಲಿಷ್ ಗುರುಗಳಾಗಿದ್ದ ನಾರಾಯಣಾಚಾರ್ಯರು ಈ ರೀತಿ ಅಪವಾದಕ್ಕೆ ಗುರಿಯಾಗಬಾರದು. ಅನ್ಯ ಜಾತಿಗಳನ್ನು ಕುಹಕ ಮಾಡಬಾರದು ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು. ಮಹರ್ಷಿ ವಾಲ್ಮೀಕಿ ಕೃತಿಯ ಕರ್ತೃ ಪ್ರೊ.ಎಚ್. ಸಿದ್ದಲಿಂಗಯ್ಯ ಮಾತನಾಡಿ, ಯಾವುದೇ ಜನಾಂಗದಲ್ಲಿ ಹುಟ್ಟಿದರೂ ರಾಮನಾಮದಿಂದ ಮಹರ್ಷಿಯಾಗುತ್ತಾರೆ. ಈ ಸತ್ಯವನ್ನು ಒಪ್ಪಿಕೊಳ್ಳದ ನಾರಾಯಣಾಚಾರ್ಯರು ರಾಮನಾಮದ ಮಹತ್ವ ಅರಿಯದೆ ಅಲಕ್ಷಿಸಿದ್ದಾರೆ. ವಾಲ್ಮೀಕಿ ಬೇಡನಾಗಿ ನಂತರ ರಾಮನಾಮದಿಂದ ತಪಸ್ಸಿಗೆ ಕುಳಿತು ಮಹರ್ಷಿಯಾದರು. ಇದನ್ನು ಐತಿಹ್ಯಗಳೇ ಸಾರುತ್ತವೆ. ಅಂದ ಮೇಲೆ ರಾಮಾಯಣವನ್ನು ಅರೆದು ಕುಡಿದಿರುವ ನಾರಾಯಣಾಚಾರ್ಯರೇ ಈ ರೀತಿ ಸುಳ್ಳು ಹೇಳಬಾರದು. ಕೇವಲ ಬ್ರಾಹ್ಮಣರೆ ಮಹರ್ಷಿಗಳಾಗಬೇಕೆಂದಿಲ್ಲ. ಅನ್ಯರು ಮಹರ್ಷಿಗಳಾಗಬಹುದು. ಯಾರಿಗೆ ರಾಮನಾಮ ಒಲಿಯುತ್ತದೋ ಅವರೆಲ್ಲರೂ ಮಹರ್ಷಿಗಳೆ ಎಂದು ತಿಳಿಸಿದರು. ನಿವೃತ್ತ ಪ್ರಾಧ್ಯಾಪಕ ಬಿ.ಸೋಮಶೇಖರ ಅಧ್ಯಕ್ಷತೆ ವಹಿಸಿದ್ದರು. ಕಡೆಮನೆ ಪ್ರಕಾಶನದ ಪ್ರಕಾಶಕ ಪ್ರೊ.ಎಚ್.ಜಿ. ಕೃಷ್ಣಪ್ಪ ಇದ್ದರು. ನಂತರ ಸಪ್ತಸ್ವರ ಬಳಗದವರು ಸುಗಮ ಸಂಗೀತ ಕಛೇರಿ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

