ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ
ಕೆ.ಆರ್. ನಗರ: ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಡಳಿತ ವೈಫಲ್ಯ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಪಟ್ಟಣದ ಮಿನಿ ವಿಧಾನಸೌಧದ ಎದುರು ಸೋಮವಾರ ರಸ್ತೆತಡೆ ನಡೆಸಿ ಪ್ರತಿಭಟಿಸಲಾಯಿತು.
ಕಳೆದ ಎರಡು ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಕೂಡಲೇ ಪುನರಾರಂಭಿಸಬೇಕು. ಜು. 10 ರೊಳಗೆ ತಾಲೂಕಿನ ಎಲ್ಲಾ ನಾಲೆಗಳಿಗೂ ನೀರು ಹರಿಸಬೇಕು, ಕೆರೆ ಕಟ್ಟೆಗಳಿಗೆ ನೀರು ತುಂಬಿಸಬೇಕು, ಎಲ್ಲಾ ಗ್ರಾಮಗಳಿಗೂ ಕಾವೇರಿ ನದಿಯಿಂದ ಕುಡಿಯುವ ನೀರನ್ನು ಸಮರ್ಪಕವಾಗಿ ಸರಬರಾಜು ಮಾಡುವುದು ಸೇರಿದಂತೆ ಇತರ 17 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ರೈತರು ಘೋಷಣೆ ಕೂಗಿದರು.
ನೆರವಿಗೆ ಬಾರದ ಸರ್ಕಾರ: ರೈತ ಸಂಘದ ಗೌರವಾಧ್ಯಕ್ಷ ವೆಂಕಟರಮಣೇಗೌಡ ಮಾತನಾಡಿ, ಸಂಕಷ್ಟದಲ್ಲಿರುವ ರೈತರ ನೆರವಿಗೆ ಬಾರದ ಸರ್ಕಾರಗಳು ಕೇವಲ ಭರವಸೆಗಳಲ್ಲೇ ಕಾಲ ಕಳೆಯುತ್ತಿವೆ. ಕೂಡಲೇ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು. ಕೇಂದ್ರ ಸರ್ಕಾರ ತಂಬಾಕು ಬೆಳೆಗಾರರ ವಿರುದ್ದ ಸೇಡಿನ ಕ್ರಮಕ್ಕೆ ಮುಂದಾಗಿದ್ದು ಅನಗತ್ಯ ಕಾನೂನು ರೂಪಿಸಿ
ಬೆಳೆಗಾರರ ಜೀವನದ ಜತೆ ಚೆಲಾಟವಾಡುತ್ತಿವೆ. ಕೂಡಲೇ ಇದನ್ನು ಕೈಬಿಟ್ಟು ಸಾಲದ ಸುಳಿಯಲ್ಲಿ ಸಿಲುಕಿರುವ ಇವರ ನೆರವಿಗೆ ಬಂದು ತೆರಿಗೆ ವಿದಿಸುವುದನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಘೋಷಣೆ: ಪ್ರತಿಭಟನೆಗೂ ಮುನ್ನಾ ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಗರುಡಗಂಭದ ವೃತ್ತ, ಪುರಸಭಾ ವೃತ್ತದ ಮೂಲಕ ನೂರಾರು ರೈತರು ತಮ್ಮ ವಿವಿಧ ಬೇಡಿಕೆಗನ್ನು ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ನಂತರ ತಹಸೀಲ್ದಾರ್ ಆರ್.ಬಿ. ಶಿವಶಂಕರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಸರಗೂರು ನಟರಾಜು, ರೈತ ಮುಖಂಡ ಸಾಲಿಗ್ರಾಮ ಪ್ರಕಾಶ್, ಸರ್ವೋದಯ ಪಕ್ಷದ ತಾಲೂಕು ಅಧ್ಯಕ್ಷ ಗರುಡಗಂಭದಸ್ವಾಮಿ, ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ಎಸ್. ನಟರಾಜು, ಗೌರವಾಧ್ಯಕ್ಷ ಮೂಡಲಬೀಡು ಮಹದೇವು, ಕಾರ್ಯಾಧ್ಯಕ್ಷ ಚೀರ್ನಹಳ್ಳಿ ಶ್ರೀನಿವಾಸ್, ಜಿಲ್ಲಾ ಸಂಚಾಲಕರಾದ ಸಿ.ಜಿ. ಕರ್ಮವೀರ್, ಎಚ್.ಎನ್. ರಾಮೇಗೌಡ, ಎಸ್.ಆರ್. ಶಿವರಾಂ, ರೈತ ಮುಖಂಡರಾದ ಹೊಂಬಾಳೇಗೌಡ, ಎ.ಆರ್. ತ್ರಿಪುರಾಂಭ, ಕೆ.ಪಿ. ಯೋಗಾನಂದ, ರಾಮ್ಪ್ರಸಾದ್, ಗಿರೀಶ್, ಕುಬೇರ, ಚಲುವರಾಜು, ಕಾಳೇಗೌಡ ಇದ್ದರು.
ಪೊಲೀಸ್ ಬಂದೋಬಸ್ತ್
ರೈತ ಸಂಘದವರು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದ ಹಿನ್ನೆಲೆಯಲ್ಲಿ ಕೆಲ ಹೊತ್ತು ಹಾಸನ- ಮೈಸೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ಪಿಎಸ್ಐ ಎಂ. ಷಣ್ಮುಗಂ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

