ನಿಮ್ಗೆ ಹೇಳೋರು ಕೇಳೋರು ಇಲ್ವಾ?
ಕೆ.ಆರ್. ನಗರ: ಪಟ್ಟಣಕ್ಕೆ ಮೂಲ ಸವಲತ್ತು ಕಲ್ಪಿಸಲು ಅಧಿಕಾರಿಗಳು ವಿಫಲರಾಗಿದ್ದು ಇದರಿಂದ ಸಾರ್ವಜನಿಕವಾಗಿ ತಿರುಗಾಡಲು ಸಾಧ್ಯವಾಗುತ್ತಿಲ್ಲ ಎಂದು ಪುರಸಭಾ ಸದಸ್ಯರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪುರಸಭಾ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಮಾತನಾಡಿದ ಸದಸ್ಯ ಎನ್.ಶಿವಕುಮಾರ್, ವಾರ್ಡ್ನ ಸಮಸ್ಯೆಗಳನ್ನು ಸದಸ್ಯರೇ ಬಂದು ಹೇಳಿದರೂ ಎರಡು ದಿನಗಳವರೆಗೆ ಯಾರು ತಿರುಗಿಯೂ ನೋಡುವುದಿಲ್ಲ. ನಿಮಗೆ ಹೇಳುವವರು ಕೇಳುವವರು ಯಾರು ಇಲ್ಲವೇ? ಮೊದಲು ಈ ಸಮಸ್ಯೆ ಬಗೆಹರಿಸಿ ಮುಂದಿನ ಚರ್ಚೆ ಮಾಡಿ ಎಂದು ಪಟ್ಟುಹಿಡಿದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ಮುಂದೆ ಹೀಗಾಗದಂತೆ ಗಮನಹರಿಸಿ ಆದ್ಯತೆ ಮೇಲೆ ವಾರ್ಡ್ನಲ್ಲಿ ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಇತರೆ ಕೆಲಸಗಳನ್ನು ಮಾಡಿಸುವುದಾಗಿ ಭರವಸೆ ನೀಡಿದರು. ಮುಂದೆ ಇದೇ ರೀತಿ ಪುನರಾವರ್ತನೆಯಾದರೆ ಗಂಭೀರ ಪರಿಣಾಮ ಎದುರುಸಬೇಕಾಗುತ್ತದೆ ಎಂದು ಸದಸ್ಯರಾದ ಉಮೇಶ್ ಮತ್ತು ಎಚ್.ಸಿ. ರಾಜು ಅಧಿಕಾರಿಗಳಿಗೆ ಎಚ್ಚರಿಸಿದರು.
ಪಟ್ಟಣದಲ್ಲಿ ಕೆಲವು ಕಾಮಗಾರಿಗಳನ್ನು ಮಾಡಲು ಟೆಂಡರ್ ಹಾಕಿರುವ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಲು ಶೇಕಡಾವಾರು ಹೆಚ್ಚುವರಿಯಾಗಿ ನಮೂದಿಸಿದ್ದು ಇದರಿಂದ ಪುರಸಭೆಗೆ ಆರ್ಥಿಕ ನಷ್ಟವಾಗಲಿದೆ. ಈ ಎಲ್ಲ ಕಾಮಗಾರಿಗಳನ್ನು ತಿರಸ್ಕರಿಸಿ ಎಂದು ಸದಸ್ಯರಾದ ಕೆ.ಎಲ್. ಕುಮಾರ್, ಕೆ.ಎಲ್. ಜಗದೀಶ್, ಗೀತಾಮಹೇಶ್, ಸುಬ್ರಹ್ಮಣ್ಯ ಅವರು ಆಗ್ರಹಿಸಿದಾಗ ಇದಕ್ಕೆ ಬಹುತೇಕ ಸದಸ್ಯರು ದನಿಗೂಡಿಸಿದರು.
ಪಟ್ಟಣದ ಸುತ್ತ ಮುತ್ತ ಹೊಸದಾಗಿ ನಾಲ್ಕು ಬಡಾವಣೆಗಳನ್ನು ನಿರ್ಮಾಣ ಮಾಡಲು ಪುರಸಭೆಯಿಂದ ಅನುಮತಿ ಕೋರಿ ನಾಲ್ಕು ಅರ್ಜಿಗಳು ಬಂದಿದ್ದು ಈ ಬಗ್ಗೆ ಆಡಳಿತ ಮಂಡಳಿ ತೀರ್ಮಾನ ಕೈಗೊಳ್ಳಬೇಕೆಂದು ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಕೋರಿದಾಗ, ಕಾಂಗ್ರೆಸ್ ಸದಸ್ಯರು ಇದಕ್ಕೆ ಸಮ್ಮತಿದರು. ಆದರೆ, ಜೆಡಿಎಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಜೆಡಿಎಸ್ ಸದಸ್ಯ ಉಮೇಶ್ ಮತ್ತು ಕಾಂಗ್ರೆಸ್ ಸದಸ್ಯ ಸುಬ್ರಹ್ಮಣ್ಯ ಅವರ ನಡುವೆ ಮಾತಿನ ಚಕಮಕಿ ನಡೆಯಿತು.
ಕಾವೇರಿ ಚರ್ಚೆ: ಪುರಸಭೆಗೆ ಸೇರಿದ ವಾಣಿಜ್ಯ ಮಳಿಗೆಗಳನ್ನು ಜೂ.23 ರಂದು ಬಹಿರಂಗ ಹರಾಜು ಮಾಡಿದ್ದು ಅವುಗಳನ್ನು ಅನುಮೋದಿಸಿ ಜಿಲ್ಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದು ಮುಖ್ಯಾಧಿಕಾರಿಗಳು ಪ್ರಕಟಿಸಿದಾಗ ಸಭೆಯಲ್ಲಿ ವಾಗ್ವಾದ ಮತ್ತು ಪರಸ್ಪರ ಮಾತಿನ ಚಕಮಕಿ ನಡೆಯಿತಲ್ಲದೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ಮಾತಿನ ಸಮರವೇ ನಡೆದುಹೋಯಿತು.
ಮಳಿಗೆಗಳು ನಿಯಮಾನುಸಾರ ಹರಾಜಾಗಿಲ್ಲ. ಹಾಗಾಗಿ ಇವುಗಳ ಅನುಮೋದನೆಗೆ ನಮ್ಮ ವಿರೋಧವಿದೆ ಎಂದು ಕಾಂಗ್ರೆಸ್ ಸದಸ್ಯರಾದ ಕೆ.ಪಿ.ಪ್ರಭುಶಂಕರ್ ಮತ್ತು ಸುಬ್ರಹ್ಮಣ್ಯ ಅವರು ಹೇಳಿದಾಗ ಇದನ್ನು ತೀವ್ರವಾಗಿ ವಿರೋಧಿಸಿದ ಜೆಡಿಎಸ್ ಸದಸ್ಯರು ಮಾಸಿಕ 6 ಲಕ್ಷ ಬಾಡಿಗೆ ಬರುವ ಹರಾಜನ್ನು ಯಾವ ಕಾರಣಕ್ಕೆ ವಿರೋಧಿಸುತ್ತೀರಿ ಎಂದು ಕೆಣಕಿದರು.
ಈ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಸಭೆಗೆ ಆಗಮಿಸಿದ ಶಾಸಕ ಸಾ.ರಾ. ಮಹೇಶ್ ಕೇವಲ ವಿರೋಧಕ್ಕಾಗಿ ವಿರೋಧ ಮಾಡುವುದು ಬೇಡ. ಹೀಗಾದರೆ ಪಟ್ಟಣದ ಅಭಿವೃದ್ಧಿ ಸಾಧ್ಯವೇ ಎಂದು ಸದಸ್ಯರನ್ನು ಪ್ರಶ್ನಿಸಿದರಲ್ಲದೆ, ನಿಯಮಾನುಸಾರ ಮಳಿಗೆಗಳು ಹರಾಜಾಗಿವೆ. ಪರಸ್ಪರ ಸಾಮರಸ್ಯದಿಂದ ಕೆಲಸ ಮಾಡಿ ಒಪ್ಪಿಗೆ ಸೂಚಿಸಿ ಎಂದಾಗ ಆವರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಕಾಂಗ್ರೆಸ್ ಸದಸ್ಯರು ಮೌನವಾಗಿ ಸಮ್ಮತಿ ಸೂಚಿಸಿದರು.
ಅಧ್ಯಕ್ಷೆ ಪಾರ್ವತಿ, ಉಪಾಧ್ಯಕ್ಷೆ ಕವಿತಾ ವಿಜಯಕುಮಾರ್, ಕೆ.ಬಿ.ಸುಬ್ರಹ್ಮಣ್ಯ, ಕೆ.ಜಿ. ಸುಬ್ರಹ್ಮಣ್ಯ, ಫರಿದಾಖಾನಂ, ನಂಜುಂಡ, ಟಿ.ಸಿ. ಪ್ರಕಾಶ್, ನಟರಾಜು, ಹರ್ಷಲತಾ ಶ್ರೀಕಾಂತ್, ಸರೋಜಾ, ಮಹಾಲಕ್ಷ್ಮೀ, ಸಲಿಮಾಬಿ, ಫಿರ್ದೋಶ್ ಖಾನಂ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

