ಮೈಸೂರು

ಜನಸಂಖ್ಯೆ ಸಂಪನ್ಮೂಲವಾಗಿ ಬಳಕೆಯಾಗಲಿ

Published On :

ಮೈಸೂರು: ಜನಸಂಖ್ಯೆಯು ಮಾನವ ಸಂಪನ್ಮೂಲವಾಗಿ ಬಳಕೆಯಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಮೈಸೂರು ತಾಪಂ ಅಧ್ಯಕ್ಷ ಜಿ.ಕುಮಾರ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಬಡತನ, ಅಜ್ಞಾನ, ಅನಕ್ಷರತೆ, ಮಾಹಿತಿ ಕೊರತೆ ಜನಸಂಖ್ಯಾ ಸ್ಫೋಟದ ಪ್ರಮುಖ ಕಾರಣಗಳಾಗಿದ್ದು, ಇದರ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನಸಂಖ್ಯಾ ಸ್ಫೋಟದಿಂದಾಗುವ ಅನಾನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದರು.
ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಟಿ.ಪುಟ್ಟಸ್ವಾಮಿ, ವಿಶ್ವದ ಜನಸಂಖ್ಯೆಯು 1987ರ ಜು.11 ರಂದು 500 ಕೋಟಿ ತಲುಪಿತ್ತು. ಅಂದಿನಿಂದ ಆ ದಿನವನ್ನು ವಿಶ್ವ ಜನಸಂಖ್ಯಾ ದಿನಾಚರಣೆಯನ್ನಾಗಿ ಆಚರಿಸಲು ವಿಶ್ವ ಸಂಸ್ಥೆ ತೀರ್ಮಾನಿಸಿತು. ಅಂದಿನಿಂದ ಈ ದಿನ ಆಚರಿಸಲಾಗುತ್ತಿದೆ ಎಂದರು.
240 ಕೋಟಿ ಜನಸಂಖ್ಯೆ?: ಭಾರತದ ಜನಸಂಖ್ಯೆಯು 1951 ರಲ್ಲಿ 39 ಕೋಟಿ ಇತ್ತು. 2011ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆಯು 121 ಕೋಟಿ ಆಗಿದೆ. ಪ್ರತಿ ವರ್ಷ 1 ಕೋಟಿ 81 ಲಕ್ಷಕ್ಕೂ ಹೆಚ್ಚಾಗಿ ಜನ ಸೇರುತ್ತಿದ್ದಾರೆ. ಇದೇ ರೀತಿ ಜನಸಂಖ್ಯೆ ಬೆಳವಣಿಗೆ ಮುಂದುವರಿದಲ್ಲಿ ಮುಂದಿನ 40- 50 ವರ್ಷಗಳಲ್ಲಿ ಭಾರತದ ಜನಸಂಖ್ಯೆಯು 240 ಕೋಟಿ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕರ್ನಾಟಕದ ಜನಸಂಖ್ಯೆಯು 1951 ರಲ್ಲಿ ಕೇವಲ 1 ಕೋಟಿ 94 ಲಕ್ಷ ಇತ್ತು. 2011ರ ಜನಗಣತಿಯ ಪ್ರಕಾರ 6 ಕೋಟಿ 11 ಲಕ್ಷ ಆಗಿದೆ. ಪ್ರತಿ ವರ್ಷ 8 ಲಕ್ಷ 40 ಸಾವಿರ ಜನ ಹೆಚ್ಚಾಗಿ ಸೇರುತ್ತಿದ್ದಾರೆ. ಈ ವೇಗದಲ್ಲಿ ಜನಸಂಖ್ಯೆಯು ಬೆಳೆಯುತ್ತಿದ್ದರೆ ಮುಂದಿನ 40- 50 ವರ್ಷಗಳಲ್ಲಿ ಕರ್ನಾಟಕದಲ್ಲಿ 12  ಕೋಟಿ 25 ಲಕ್ಷ ಆಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
ಜನಸಂಖ್ಯಾ ಸ್ಫೋಟದಿಂದಾಗಿ ಆಹಾರ, ನೀರು, ಬಟ್ಟೆ, ವಸತಿ, ಖನಿಜಗಳ ಕೊರತೆ, ಅರಣ್ಯ ನಾಶ, ಸಸ್ಯ ಸಂಪತ್ತಿನ ನಾಶ, ಬಡತನ ಹಾಗೂ ನಿರುದ್ಯೋಗ ಹೆಚ್ಚಳ, ಶಿಕ್ಷಣ, ಆರೋಗ್ಯ ಸೇವೆಗಳು ಹಾಗೂ ಇತರೇ ಸಂಪನ್ಮೂಲಗಳ ಕೊರತೆ, ಪರಿಸರ ಮಾಲಿನ್ಯ, ಸಾಮಾಜಿಕ ಅಸಮಾನತೆ, ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಹರಡುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.
ತಾಪಂ ಉಪಾಧ್ಯಕ್ಷೆ ಲೋಕಮಣಿ, ವಾಜಪೇಯಿ ಆರೋಗ್ಯಶ್ರೀ ವಿಭಾಗದ ಮುಖ್ಯಸ್ಥ ಟಿ.ಆರ್. ಜಯರಾಂ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಲಕ್ಷ್ಮಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ.ಪದ್ಮರಾಜ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ರವಿಕುಮಾರ್ ಇದ್ದರು.
ಈ ಸಂದರ್ಭದಲ್ಲಿ ಬನುಮಯ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಹಿರಣ್ಣಯ್ಯ ಉಪನ್ಯಾಸ ನೀಡಿದರು.
ದ್ವಾರಕೀಶ್ ಚಾಲನೆ: ಇದಕ್ಕೂ ಮುನ್ನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದ ಮುಂದೆ ಏರ್ಪಡಿಸಿದ್ದ ಜಾಥಾಗೆ ಜಿಪಂ ಅಧ್ಯಕ್ಷ ಸಿ.ಜೆ.ದ್ವಾರಕೀಶ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎಸ್. ಪಾಲಯ್ಯ ಇದ್ದರು. ವಿವಿಧ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.