ಮಾರ್ಚ್ ಅಂತ್ಯಕ್ಕೆ ಜೋಡಿ ಮಾರ್ಗ
ಮೈಸೂರು- ಬೆಂಗಳೂರು ನಡುವಿನ ರೈಲು ಜೋಡಿ ಮಾರ್ಗ ಏಪ್ರಿಲ್ನಲ್ಲಿ ಬಳಕೆ: ಸಚಿವ ಡೀವಿ
ಮೈಸೂರು: ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಕಾಮಗಾರಿ 2015ರ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.
ಮೈಸೂರಿನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೋಡಿ ರೈಲು ಮಾರ್ಗ ಕಾಮಗಾರಿಗೆ ಅಡ್ಡಿಯಾಗಿದ್ದ ಶ್ರೀರಂಗಪಟ್ಟಣ ಮತ್ತು ಪಾಂಡವಪುರ ಬಳಿಯ ಭೂ ಸ್ವಾಧೀನ ಸಮಸ್ಯೆ ಪರಿಹಾರಕ್ಕೆ ಕ್ರಮ ವಹಿಸಲಾಗಿದೆ. ಜೋಡಿ ರೈಲು ಮಾರ್ಗ ಪೂರ್ಣಗೊಳಿಸಲು ಅಗತ್ಯ ಕ್ರಮ ವಹಿಸಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸಿ ಏಪ್ರಿಲ್ನಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಲೋಕಾರ್ಪಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.
ಮೈಸೂರು- ಕುಶಾಲನಗರದವರೆಗೆ ರೈಲು ಮಾರ್ಗಕ್ಕೆ ಸರ್ವೆ ಕಾರ್ಯ ಆಗಿದೆ. ಕುಶಾಲನಗರದಿಂದ ಮಡಿಕೇರಿವರೆಗೆ ರೈಲು ಮಾರ್ಗಕ್ಕೆ ಸರ್ವೆ ಮಾಡಿಸಲು ಸೂಚಿಸಲಾಗಿದೆ. ಚಾಲ್ತಿಯಲ್ಲಿರುವ ರೈಲ್ವೆ ಕಾಮಗಾರಿಗಳಿಗೆ ಅನುದಾನ ನೀಡಲು ನಿರ್ಧರಿಸಲಾಗಿದೆ. ಪೂರಕ ಬಜೆಟ್ನಲ್ಲೂ ಹೆಚ್ಚುವರಿ ಅನುದಾನ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿಯ ರೈಲು ಬಜೆಟ್ನಲ್ಲಿ ಕಠೋರ ನಿಲುವು ತೆಗೆದುಕೊಂಡು ಹೊಸ ಯೋಜನೆಗಳನ್ನು ನೀಡಿಲ್ಲ. ಬದಲಿಗೆ ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಿಗೆ ಅನುದಾನ ನೀಡಲಾಗಿದೆ. ತೀರಾ ಹಳೆಯದು ಹಾಗೂ ತುಂಬಾ ಅವಶ್ಯಕವಾದ 30 ಯೋಜನೆಗಳಿಗೆ ಒತ್ತು ನೀಡಿ, ಶೇ.54 ಅನುದಾನ ಹೆಚ್ಚಿಸಲಾಗಿದೆ ಎಂದರು. ರೈಲು ಪ್ರಯಾಣ ದರದಲ್ಲಿ ಶೇ.10, ಸರಕು ಸಾಗಾಣಿಕೆ ದರದಲ್ಲಿ ಶೇ.5 ಹೆಚ್ಚಿಸುವ ಪ್ರಸ್ತಾವ ಮಾತ್ರವಿತ್ತು. ಇದರ ಜೊತೆಗೆ ಡೀಸೆಲ್ ದರ ಹೆಚ್ಚಳ ಸೇರಿದ್ದರಿಂದ ಪ್ರಯಾಣ ದರ ಶೇ.14, ಸರಕ ಸಾಗಣೆ ದರ ಶೇ.6.5 ಹೆಚ್ಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ರೈಲ್ವೆ ಇಲಾಖೆಯಲ್ಲಿ ಸುರಕ್ಷತೆ, ರಕ್ಷಣೆ, ಸೇವೆಗೆ ಮೊದಲ ಆದ್ಯತೆ ನೀಡಲಾಗಿದ್ದು, ನಂತರ ವೇಗವನ್ನು ಪರಿಗಣಿಸಲಾಗಿದೆ. ಬಯೋ ಟಾಯ್ಲೆಟ್, ಅಂಡರ್ ಬ್ರಿಡ್ಜ್, ಓವರ್ ಬ್ರಿಡ್ಜ್ಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ರಕ್ಷಣೆಗೆ ಒತ್ತು ನೀಡಿ 7 ಸಾವಿರ ಆರ್ಪಿಎಫ್ ಸಿಬ್ಬಂದಿ ನೇಮಿಸಲಾಗುತ್ತಿದೆ. ಅಲ್ಲದೆ, ಮಹಿಳೆಯರ ರಕ್ಷಣೆಗಾಗಿ ಹೆಚ್ಚುವರಿಯಾಗಿ 4 ಸಾವಿರ ಮಹಿಳಾ ಪೇದೆಗಳನ್ನು ನೇಮಿಸಲಾಗುವುದು. ಆರ್ಪಿಎಫ್ ಸಿಬ್ಬಂದಿಗೆ ಮೊಬೈಲ್ ಒದಗಿಸಿ, ಅವರ ಮೊಬೈಲ್ ಸಂಖ್ಯೆಗಳನ್ನು ರೈಲು ನಿಲ್ದಾಣ ಮತ್ತು ರೈಲುಗಳನ್ನು ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ರೈಲು ನಿಲ್ದಾಣ, ಆಯ್ದ ರೈಲುಗಳಲ್ಲಿ ವೈಫೈ ಸೌಲಭ್ಯ ಅಳವಡಿಕೆ, ರೈಲ್ವೆ ಕಚೇರಿಗಳನ್ನು ಗಣಕೀಕರಣ, ಮಹಿಳೆಯರಿಗಾಗಿ ಪ್ರತಿ ರೈಲಿನಲ್ಲೂ ಪ್ರತ್ಯೇಕ ಕೋಚ್ ಸೇರಿದಂತೆ ಹಲವಾರು ಕ್ರಮ ವಹಿಸಲಾಗಿದೆ ಎಂದರು.
ಕರ್ನಾಟಕಕ್ಕೆ 1543 ಕೋಟಿ: ಈ ಬಾರಿ ರೈಲ್ವೆ ಬಜೆಟ್ನಲ್ಲಿ ಕರ್ನಾಟಕಕ್ಕೆ 1543 ಕೋಟಿ ಅನುದಾನ ನೀಡಲಾಗಿದೆ. ಗೇಜ್ ಪರಿವರ್ತನೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಈ ಹಣ ನೀಡಲಾಗಿದೆ. ವಾರಕ್ಕೊಮ್ಮೆ ರೈಲು ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲು ಚಿಂತಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ 1 ಸಾವಿರಕ್ಕೂ ಹೆಚ್ಚಿನ ಜಮೀನನ್ನು ಸ್ವಾಧೀನಪಡಿಸಿ, ರೈಲ್ವೆ ಇಲಾಖೆಗೆ ನೀಡಿದ್ದೇನೆ. ಭೂಸ್ವಾಧೀನ ಪ್ರಕ್ರಿಯೆ ವಿಳಂಬದಿಂದ ರೈಲ್ವೆ ಯೋಜನೆಗಳು ಸಹ ಪೂರ್ಣಗೊಳಿಸಲು ತೊಡಕಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನನ್ನು ಭೇಟಿಯಾದಾಗ ರೈಲ್ವೆ ಕಾಮಗಾರಿಗಳಿಗೆ ಭೂ ಸ್ವಾಧೀನ ಮಾಡುವ ಪ್ರಕ್ರಿಯೆ ಚುರುಕುಗೊಳಿಸಲು ಕೇಳಿರುವುದಾಗಿ ಸದಾನಂದಗೌಡ ತಿಳಿಸಿದರು.
ಸಂಸದರಾದ ಪ್ರತಾಪ್ ಸಿಂಹ, ಸಿ.ಎಸ್.ಪುಟ್ಟರಾಜು, ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪ್ಕುಮಾರ್ ಸಕ್ಸೇನಾ, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಜ್ಕುಮಾರ್ ಲಾಲ್ ಇದ್ದರು.
ಕಾಶ್ಮೀರದಿಂದ ಮೈಸೂರಿನವರೆಗೆ ರೈಲ್ವೆ ಸರ್ಕಿಟ್
ಮೈಸೂರು: ಪ್ರವಾಸೋದ್ಯಮ ಅಭಿವೃದ್ಧಿ ಹಾಗೂ ಪ್ರವಾಸಿ ತಾಣಗಳನ್ನು ಬೆಸೆಯಲು ಕಾಶ್ಮೀರದಿಂದ ಮೈಸೂರಿನವರೆಗೆ ರೈಲ್ವೆ ಟೂರಿಸ್ಟ್ ಸರ್ಕ್ಯೂಟ್ ನಿರ್ಮಿಸಲಾಗುವುದು ಎಂದು ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
ಮೈಸೂರಿನ ಚನ್ನಮ್ಮ ಚನ್ನಬಸಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ನಗರ ಮತ್ತು ಜಿಲ್ಲಾ ಘಟಕ ಏರ್ಪಡಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮೈಸೂರು ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಬೆಸೆಯುವ ಉದ್ದೇಶದಿಂದ ರೈಲ್ವೆ ಟೂರಿಸ್ಟ್ ಸರ್ಕ್ಯೂಟ್ ಯೋಜನೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಈ ಯೋಜನೆ ಅನುಷ್ಠಾನದಿಂದ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಕಾಣಲಿದೆ ಎಂದರು.
ಚೆನ್ನೈ- ಬೆಂಗಳೂರು ನಡುವೆ ಹೈಸ್ಪೀಡ್ ರೈಲು ಆರಂಭಿಸಲು ಉದ್ದೇಶಿಸಲಾಗಿತ್ತು. ಆದರೆ, ಮೈಸೂರಿನ ಜನ ನನ್ನ ಮೇಲೆ ಇರಿಸಿರುವ ಅಭಿಮಾನದಿಂದ ಹೈಸ್ಪೀಡ್ ರೈಲು ಸೇವೆಯನ್ನು ಚೆನ್ನೈನಿಂದ ಮೈಸೂರಿನವರೆಗೆ ಕಲ್ಪಿಸಲು ಬಜೆಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ. ಮೈಸೂರು- ಮಡಿಕೇರಿ ರೈಲು ಮಾರ್ಗ ನಿರ್ಮಾಣಕ್ಕೆ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಕೊಡಗು ನನ್ನ ಮಾವನ ಮನೆ ಎಂಬ ಕಾರಣಕ್ಕೆ ರೈಲು ಮಾರ್ಗ ನಿರ್ಮಿಸುತ್ತಿಲ್ಲ. ಕೊಡಗು ರೈಲು ಸಂಪರ್ಕ ಇಲ್ಲದ ರಾಜ್ಯದ ಏಕೈಕ ಜಿಲ್ಲೆಯಾಗಿರುವ ಹಿನ್ನೆಲೆಯಲ್ಲಿ ಮೈಸೂರು- ಮಡಿಕೇರಿ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಬೇಕಿದ್ದ ನಾನು ಅನಿವಾರ್ಯವಾಗಿ ಬೆಂಗಳೂರಿನಲ್ಲಿ ಸ್ಪರ್ಧಿಸಬೇಕಾಯಿತು. ಆದರೆ, ಬೆಂಗಳೂರಿನಲ್ಲಿ ಗೆದ್ದರೂ ನಾನು ಮೈಸೂರಿನ ಹುಡುಗ. ಮೈಸೂರಿನ ಜೊತೆ ನನಗೆ ಭಾವನಾತ್ಮಕ ಸಂಬಂಧವಿದೆ ಎಂದು ತಿಳಿಸಿದರು.
ಮತ್ತಷ್ಟು ಜನಪರ ಯೋಜನೆಗಳು: ಸಂಸದ ಪ್ರತಾಪ್ ಸಿಂಹ ಮಾತನಾಡಿ, ಡಿ.ವಿ.ಸದಾನಂದಗೌಡ ಅವರಿಗೆ ರೈಲ್ವೆ ಖಾತೆ ಸಿಕ್ಕಿರುವುದು ಹೆಮ್ಮೆಯ ವಿಚಾರ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಜನಪರ ಯೋಜನೆಗಳು ರಾಜ್ಯಕ್ಕೆ ಲಭಿಸಲಿವೆ ಎಂದರು. ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎಂ.ಮಹದೇವ್, ವಿಧಾನಪರಿಷತ್ ಸದಸ್ಯ ಗೋ. ಮಧುಸೂದನ್, ಮಾಜಿ ಸದಸ್ಯರಾದ ಸಿದ್ದರಾಜು, ಸಿ.ರಮೇಶ್, ತೋಂಟದಾರ್ಯ, ಬಿಜೆಪಿ ಸ್ಲಂ ಮೋರ್ಚಾ ರಾಜ್ಯಾಧ್ಯಕ್ಷ ಎಲ್.ನಾಗೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ಗೌಡ, ನಗರಾಧ್ಯಕ್ಷ ಇ.ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಪ್ಪಗೌಡ, ಯಶಸ್ವಿ ಸೋಮಶೇಖರ್, ವಿ. ಸೋಮಸುಂದರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

