ಸಾಗರಕಟ್ಟೆ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣ: ಸಚಿವ ಡಾ.ಮಹದೇವಪ್ಪ
ಕೆ.ಆರ್. ನಗರ: ಅಪೂರ್ಣಗೊಂಡಿರುವ ತಾಲೂಕಿನ ಸಾಗರಕಟ್ಟೆ ಸೇತುವೆ ಕಾಮಗಾರಿಯನ್ನು ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಚಾಲನೆ ನೀಡಿದ ಸಾಗರಕಟ್ಟೆ ಸೇತುವೆ ಕಾಮಗಾರಿ ಈವರೆಗೆ ಪೂರ್ಣವಾಗದಿರುವ ಬಗ್ಗೆ ಜೆಡಿಎಸ್ನ ಸಾ.ರಾ.ಮಹೇಶ್ ವಿಧಾನಸಭೆಯಲ್ಲಿ ನಿಯಮ 73ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಗಮನ ಸೆಳೆದಾಗ, ಚರ್ಚೆ ನಂತರ ಅವರು ಉತ್ತರಿಸಿದರು.
ಸೂಚನೆ ಸಂಖ್ಯೆ 199ರ ಮೇರೆಗೆ ಜಿಲ್ಲೆಯ ಕೆ.ಆರ್.ನಗರ ತಾಲೂಕು ಮೂಲೆಪೆಟ್ಲು ಗ್ರಾಮದಿಂದ ಹೊಸಕೋಟೆ, ಗುಂಗ್ರಾಲ್ಛತ್ರ ಮುಖಾಂತರ ಮೈಸೂರು ತಲುಪುವ ರಸ್ತೆಗೆ ಕಾವೇರಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಗುದ್ದಲಿಪೂಜೆ ಮಾಡಿ, ಏಳು ವರ್ಷಗಳಾಗಿದ್ದರೂ ಈವರೆಗೆ ಪೂರ್ಣಗೊಳ್ಳದೆ ನನೆಗುದಿಗೆ ಬಿದ್ದಿದೆ ಎಂದು ಶಾಸಕರು ಹೇಳಿದರು. ಕಾಮಗಾರಿ ಬಗ್ಗೆ ಪೂರ್ಣ ಮಾಹಿತಿಯನ್ನು ಸಭೆಗೆ ಮಂಡಿಸಿ ವಿವರಣೆ ನೀಡಿ, ಅತಿ ಶೀಘ್ರವಾಗಿ ಕ್ರಮ ಕೈಗೊಂಡು ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದರು. ಕೆಆರ್ಎಸ್ ಅಣೆಕಟ್ಟೆ ಹಿನ್ನೀರಿನಲ್ಲಿ ಲಕ್ಷ್ಮಣತೀರ್ಥ ನದಿಗೆ ಅಡ್ಡಲಾಗಿ ಸಾಗರಕಟ್ಟೆ ಬಳಿ ಹೊಸಕೋಟೆ-ಗುಂಗ್ರಾಲ್ ಛತ್ರ ಮುಖಾಂತರ ಮೈಸೂರಿಗೆ ಸಂಪರ್ಕಿಸುವ ಸೇತುವೆಯನ್ನು ಗುತ್ತಿಗೆದಾರರಾದ ಮೆ.ಗ್ಯಾಮನ್ ಇಂಡಿಯಾ ಲಿಮಿಟೆಡ್ ಮುಂಬಯಿ ಇವರಿಂದ 27.31 ಕೋಟಿಗಳ ಅಂದಾಜಿನೊಂದಿಗೆ ಡಿಸೆಂಬರ್ 2006ರಲ್ಲಿ ಹೆಚ್ಚುವರಿ ಸೇತುವೆಯಾಗಿ ನೀಡಿ ಪ್ರಾರಂಭಿಸಲಾಗಿದೆ. ಕಾಮಗಾರಿಯನ್ನು ಗುತ್ತಿಗೆದಾರರು ಮೂಲ ಕರಾರಿನಂತೆ ಅಕ್ಟೋಬರ್ 2009ಕ್ಕೆ ಪೂರ್ಣಗೊಳಿಸಬೇಕಾಗಿತ್ತು. ಆದರೆ ಕಾಮಗಾರಿಯನ್ನು ಇಲ್ಲಿಯವರೆಗೂ ಪೂರ್ಣಗೊಳಿಸಲಾಗಿರುವುದಿಲ್ಲ.
ಕಾಮಗಾರಿಯಲ್ಲಿ 32 ಮೀಟರ್ಗಳ 12 ಸ್ಟ್ಯಾನ್ಗಳು ಹಾಗೂ 8.5 ಮೀ. ಅಗಲದ ಸೇತುವೆಯನ್ನು ನಿರ್ಮಿಸಲು ಯೋಜಿಸಲಾಗಿರುತ್ತದೆ. ಈ ಯೋಜನೆಯಲ್ಲಿ ಮೈಸೂರು ಕಡೆಗೆ 1.10 ಕಿ.ಮೀ ಮತ್ತು ಕೆ.ಆರ್. ನಗರದ ಕಡೆಗೆ 600 ಮೀ. ಉದ್ದದ ಕೂಡು ರಸ್ತೆಗಳನ್ನು ನಿರ್ಮಿಸಲು ಯೋಜಿಸಲಾಗಿರುತ್ತದೆ.
ಕಾಮಗಾರಿಯ ವಿಳಂಬಕ್ಕೆ ಕೆಆರ್ಎಸ್ ಹಿನ್ನೀರಿನ ಮಟ್ಟ ಹೆಚ್ಚಾಗಿರುವ ಕಾರಣ ಹಾಗೂ ಗುತ್ತಿಗೆದಾರನ ವಿಳಂಬದಿಂದ ಕಾಮಗಾರಿಯು ಸ್ಥಗಿತಗೊಂಡಿರುತ್ತದೆ. ಈ ಬಗ್ಗೆ ಹಲವಾರು ಬಾರಿ ಗುತ್ತಿಗೆದಾರರೊಂದಿಗೆ ಸಭೆಗಳನ್ನು ನಡೆಸಿ ಕಾಮಗಾರಿ ಪೂರ್ಣಗೊಳಿಸುವ ಬಗ್ಗೆ ಸೂಚನೆ ನೀಡಿದ್ದರೂ, ಕಾಮಗಾರಿ ಪ್ರಾರಂಭಿಸಿಲ್ಲ. ಆದ್ದರಿಂದ ಗುತ್ತಿಗೆ ರದ್ದುಗೊಳಿಸಿ ಮೇ 23ರಂದು ನೋಟಿಸ್ ಜಾರಿ ಮಾಡಿದ್ದು, ಮೆ.ಗ್ಯಾಮನ್ ಇಂಡಿಯಾ ಲಿ. ಅವರು ಸೇತುವೆ ಕಾಮಗಾರಿ ಮೂಲ ಸೇತುವೆಗಳ ಒಟ್ಟು ಪ್ಯಾಕೇಜ್ನಲ್ಲಿ ನೀಡದೇ ಹೆಚ್ಚುವರಿಯಾಗಿ ಸೇರಿಸಿರುವುದರಿಂದ ಕಾಸ್ಟ್ ಮತ್ತು ರಿಸ್ಕ್ರಂತೆ ರದ್ದುಪಡಿಸಬಾರದೆಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ತಾಂತ್ರಿಕ ತಜ್ಞರ ಸಲಹೆ ಪಡೆಯಲಾಗುತ್ತಿದ್ದು, ಕಾಮಗಾರಿಯ ಉಳಿಕೆ ಕೆಲಸಗಳಿಗೆ ಪ್ರಸ್ತುತ ದರ ಪಟ್ಟಿಯಂತೆ ದರಗಳನ್ನು ನೀಡುವ ಸಾಧ್ಯತೆ ಬಗ್ಗೆ ಯೋಜಿಸಲಾಗುತ್ತಿದೆ ಹಾಗೂ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸುವ ಬಗ್ಗೆ ಎಲ್ಲ ಸೂಕ್ತ ಕ್ರಮಗಳನ್ನು ವಹಿಸಲು ಯೋಜಿಸಲಾಗುತ್ತಿದೆ ಎಂದು ಸಚಿವರು ಉತ್ತರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

