ಮಕ್ಕಳೇ ಶಿಕ್ಷಕರ ಮೌಲ್ಯಮಾಪನ ಮಾಡಲಿ
ನಂಜನಗೂಡು: ಭಾರತದಲ್ಲಿಯೂ ಮಕ್ಕಳು ಶಿಕ್ಷಕರನ್ನು ಮೌಲ್ಯಮಾಪನ ಮಾಡುವ ಕ್ರಮ ಬಂದರೆ ಶಿಕ್ಷಣದಲ್ಲಿ ಕ್ರಾಂತಿಯಾಗಬಹುದು ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ.ಸತೀಶ್ ಪಿ.ರಾವ್ ಅಭಿಪ್ರಾಯಪಟ್ಟರು. ಎಸ್ಸೆಸ್ಸೆಲ್ಸಿ ತರಗತಿಗೆ 2014ನೇ ಸಾಲಿನಿಂದ ಹೊಸ ಪಠ್ಯಪುಸ್ತಕಗಳನ್ನು ಜಾರಿಗೊಳಿಸಿರುವುದರಿಂದ, ತಾಲೂಕಿನ ಸುತ್ತೂರಿನ ಜೆಎಸ್ಎಸ್ ಶೈಕ್ಷಣಿಕ ತರಬೇತಿ ಸಂಸ್ಥೆಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೋಧಿಸುವ ಕನ್ನಡ ಭಾಷಾ ಶಿಕ್ಷಕರಿಗೆ ಕನ್ನಡ ವಿಷಯ ತಜ್ಞರಿಂದ ಪಠ್ಯಪುಸ್ತಕದ ಪರಿಚಯ ಮತ್ತು ಬಳಕೆ ಕುರಿತು ಎರಡು ದಿನಗಳ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಮೆರಿಕದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ವಾಸ್ತವವಾಗಿ ಒಂದು ತರಗತಿಯಲ್ಲಿ ಮಕ್ಕಳ ಗರಿಷ್ಠ ಸಂಖ್ಯೆ ಕ್ರಮವಾಗಿ 30 ಮತ್ತು 50 ಇರುತ್ತದೆ. ಆದರೆ ನಮ್ಮಲ್ಲಿ ಸುಮಾರು 60 ರಿಂದ 80 ಮಕ್ಕಳು ಇರುತ್ತಾರೆ. ಅಲ್ಲಿ ಮಕ್ಕಳೂ ಶಿಕ್ಷಕರನ್ನು (ಎ ಯಿಂದ ಇ ಗ್ರೇಡ್ವರೆಗೆ) ಮೌಲ್ಯಮಾಪನ ಮಾಡುತ್ತಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜೆಎಸ್ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಎಚ್.ವಿ.ಶೇಷಗಿರಿರಾವ್ ಮಾತನಾಡಿ, ಭಾಷೆಯು ಎಲ್ಲ ವಿಷಯಗಳ ತಾಯಿ, ಹಾಗಾಗಿ ಎಳವೆಯಿಂದಲೇ ಮಕ್ಕಳಿಗೆ ಮಾತೃಭಾಷೆಯಾದ ಕನ್ನಡದಲ್ಲಿ ಪ್ರೌಢಿಮೆ ಸಾಧಿಸುವೆಡೆಗೆ ಶಿಕ್ಷಕ ಪ್ರೇರೇಪಿಸಬೇಕು, ವಿದ್ಯಾರ್ಥಿಗಳ ಉತ್ತಮ ಏಳಿಗೆ ಬಯಸುವವನೇ ನಿಜವಾದ ಶಿಕ್ಷಕ ಎಂದು ಹೇಳಿದರು. ಕಾರ್ಯಾಗಾರದಲ್ಲಿ ರಾಜ್ಯಮಟ್ಟದ ವಿಷಯ ತಜ್ಞರಾದ ದಾರುಕಾರಾಧ್ಯ, ರವೀಶ್ಕುಮಾರ್, ರಾಮನಾಥ ಹೆಗಡೆ, ಎಚ್.ಶಿವಣ್ಣ ಪಾಲ್ಗೊಂಡಿದ್ದರು. ಎಚ್.ಎಸ್. ನಾಗರಾಜ್ ಸ್ವಾಗತಿಸಿದರು. ವೀಣಾ ಪ್ರಾರ್ಥಿಸಿದರು. ಡಾ.ಎಂ.ಸಿ. ನಟರಾಜ ವಂದಿಸಿದರು, ಕೆ.ವಿ. ಯೋಗೇಶ್ ಕಾರ್ಯಕ್ರಮ ನಿರೂಪಿಸಿದರು.
ಭುವನದ ಭಾಗ್ಯ ಎಂ.ಎಸ್. ಪುಸ್ತಕ ಬಿಡುಗಡೆ
ಮೈಸೂರು: ಎಂ.ಎಸ್. ಸುಬ್ಬಲಕ್ಷ್ಮೀ ಅವರ ಸಂಗೀತದಲ್ಲಿ ಶುದ್ಧತೆಗೆ ಆದ್ಯತೆ ನೀಡಲಾಗಿತ್ತು ಎಂದು ಬರಹಗಾರ ಎಸ್. ದಿವಾಕರ್ ಹೇಳಿದರು. ಕುವೆಂಪುನಗರದ ಗಾನಭಾರತಿಯಲ್ಲಿ ರಾಗಮಾಲಾ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಎಂ.ಎಸ್. ಸುಬ್ಬಲಕ್ಷ್ಮಿ ಕುರಿತ ಭುವನದ ಭಾಗ್ಯ ಎಂಎಸ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವ ವಿದ್ಯೆಯನ್ನಾದರೂ ಗುರು ಇಲ್ಲದೆ ಕಲಿಯಬಹುದು. ಆದರೆ ಸಂಗೀತವನ್ನು ಗುರು ಇಲ್ಲದೆ ಕಲಿಯುವುದು ಕಷ್ಟ. ಆದರೆ ಎಂ.ಎಸ್. ಸುಬ್ಬಲಕ್ಷ್ಮೀ ಅವರು ಸ್ವಾಭಾವಿಕವಾಗಿ ಸಂಗೀತ ಕಲಿತರೂ ಶುದ್ಧವಾಗಿ ಹಾಡುತ್ತಿದ್ದರು. ಅವರ ಕುರಿತಾದ ಕೃತಿಗಳು ಕಡಿಮೆ ಇದೆ ಎಂದರು.
ಎಂಎಸ್ ಅವರು ಸಂಗೀತವನ್ನು ಹೃದಯಸ್ಪರ್ಶಿಯಾಗಿ ಹಾಡುತ್ತಿದ್ದ ಏಕೈಕ ಗಾಯಕಿ. ತಮ್ಮನ್ನು ತಾವೆ ಮರೆತು ಹಾಡುತ್ತಿದ್ದ ಅವರು, ಕೇಳುಗರನ್ನು ಸಂಗೀತದಲ್ಲಿಯೆ ತಲ್ಲೀನಗೊಳಿಸುತ್ತಿದ್ದರು. ಯಾವುದೆ ಒಂದು ಕೃತಿಯನ್ನೂ ಅವರು ಆರು ತಿಂಗಳ ಕಾಲ ಅಭ್ಯಾಸ ಮಾಡಿ ಸುಲಲಿತವಾಗಿ ಹಾಡುತ್ತಿದ್ದರು ಎಂದು ಹೇಳಿದರು.
ಕೃತಿ ಬಿಡುಗಡೆಗೊಳಿಸಿದ ಪತ್ರಕರ್ತ ವಿ.ರಾಮನಾರಾಯಣ್ ಮಾತನಾಡಿ, ಸುಬ್ಬಲಕ್ಷ್ಮೀ ಅವರು ಸರಳ ಮತ್ತು ಸುಂದರ ಜೀವನ ನಡೆಸಿದರು. ತಮಿಳುನಾಡಿನ ಮನೆ ಮನೆಯಲ್ಲೂ ಅವರು ಹಾಡಿದ ಸುಪ್ರಭಾತ ಪ್ರತಿದಿನ ಮೊಳಗುತ್ತಿತ್ತು. ಅವರು ಬಡವರ ಸೇವೆಗೆ ಹೆಚ್ಚು ಆದ್ಯತೆ ನೀಡಿದ್ದಾಗಿ ತಿಳಿಸಿದರು.
ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ
ಮೈಸೂರು: ಕುವೆಂಪುನಗರ ಉಪ ವಿಭಾಗ ವ್ಯಾಪ್ತಿಯಲ್ಲಿರುವ ಬಡಾವಣೆಗಳಲ್ಲಿ ವಿದ್ಯುತ್ ಸಮಸ್ಯೆ ನಿವಾರಿಸಲು ಸುಧಾರಣೆ ಕ್ರಮವಾಗಿ ಹಲವು ಕಾಮಗಾರಿ ಹಮ್ಮಿಕೊಳ್ಳಲಾಗಿದೆ ಎಂದು ಸೆಸ್ಕ್ ಎಇಇ ಸಿ. ಉಮೇಶ್ ತಿಳಿಸಿದರು.
ಮಂಗಳವಾರ ಉಪವಿಭಾಗ ಕಚೇರಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಗ್ರಾಹಕ ನರಸಿಂಹಮೂರ್ತಿ ಅವರ ದೂರಿಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಆರ್ಎಪಿಡಿಆರ್ಪಿ ಯೋಜನೆಯಡಿ 1 ಕೋಟಿ ಬಿಡುಗಡೆಯಾಗಿದ್ದ ಅದರಲ್ಲಿ ಕಳೆದೊಂದು ವರ್ಷದ 52 ಲಕ್ಷ ಖರ್ಚಾಗಿದೆ. ಈ ಹಣದಲ್ಲಿ 473 ವಿದ್ಯುತ್ ಕಂಬ, 34 ಟ್ರಾನ್ಸ್ಫಾರ್ಮರ್ ಅಳವಡಿಕೆ, 3 ಕಿ.ಮೀ. ಉದ್ದದ ಲೈನ್ ಬದಲಾಯಿಸಲಾಗುತ್ತಿದೆ ಎಂದರು.
ನರಸಿಂಹಮೂರ್ತಿ ದೂರು ಸಲ್ಲಿಸಿ, ತಮ್ಮ ಮನೆ ಮುಂದೆ ಹಾದು ಹೋಗಿರುವ ಲೈನ್ಗಳು ದುರ್ಬಲಗೊಂಡಿವೆ. ಯಾವಾಗ ಕಿತ್ತು ಬೀಳುತ್ತವೋ ಎಂಬ ಭಯದಲ್ಲೆ ದಿನ ದೂಡುತ್ತಿದ್ದೇವೆ ಎಂದಾಗ, ಕೂಡಲೇ ಈ ಲೈನ್ಗಳನ್ನು ಬದಲಾಯಿಸುವಂತೆ ಎಇಇ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೆ ಆದೇಶಿಸಿದರು. ುತ್ತೊಬ್ಬರಾದ ಸುದರ್ಶನ್ಕುಮಾರ್ ಮಾತನಾಡಿ, ಅನಿಕೇತನ ರಸ್ತೆಯಲ್ಲಿ ವಿದ್ಯುತ್ ಬಿಲ್ ಪಾವತಿಸಲು ಅನುಕೂಲ ಮಾಡಿಕೊಡುವಂತೆ ಕೋರಿದರು. ಇದಕ್ಕೆ ಉತ್ತರಿಸಿ ಎಇಇ, ಗ್ರಾಹಕರು ಸುಲಭವಾಗಿ ಬಿಲ್ ಪಾವತಿಸಲು ಅನುವಾಗುವಂತೆ ಇನ್ಫೋಸಿಸ್ ಜತೆಗೂಡಿ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದ್ದು, ಕೂಡಲೇ ಪರಿಚಯಿಸುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

