ರಂಗಸಮುದ್ರದಲ್ಲಿ ಜೈವಿಕ ಕೇಂದ್ರ
ಮೈಸೂರು: ಜಿಲ್ಲೆಯ ಟಿ. ನರಸೀಪುರ ತಾಲೂಕಿನ ರಂಗಸಮುದ್ರದಲ್ಲಿ ಜೈವಿಕ ಕೇಂದ್ರ ಹಾಗೂ
ಎಚ್.ಡಿ. ಕೋಟೆ ತಾಲೂಕಿನ ಭೀಮನಕೊಲ್ಲಿಯಲ್ಲಿ ಬಾಳೆ ಬೆಳೆ ಉತ್ಕೃಷ್ಟ ಕೇಂದ್ರ ತಲೆ ಎತ್ತಲಿವೆ.
ವಿಧಾನಮಂಡಲ ಅಧಿವೇಶನ ಮುಗಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸುವ ಸಾಧ್ಯತೆ ಇದೆ. ಜೂ.28 ರಂದೇ ಈ ಎರಡೂ ಕೇಂದ್ರಗಳ ಶಂಕುಸ್ಥಾಪನೆಗೆ ಚಾಲನೆ ನೀಡಬೇಕಾಗಿತ್ತಾದರೂ ಅದೇ ದಿನ ಬೆಂಗಳೂರಿಗೆ ಎಐಸಿಸಿ ರಾಜ್ಯ ಉಸ್ತುವಾರಿ ದಿಗ್ವಿಜಯ ಸಿಂಗ್ ಅವರು ಆಗಮಿಸಿದ್ದರಿಂದ ಕೊನೆ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿತ್ತು.
ಮೊದಲಿಗೆ ಮೈಸೂರು ವಿವಿಯ ಕುಕ್ಕರಹಳ್ಳಿ ಕೆರೆ ಸಸ್ಯಕ್ಷೇತ್ರದ ಆವರಣದಲ್ಲಿ ಜೈವಿಕ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿತ್ತಾದರೂ ಜಾಗದ ಸಮಸ್ಯೆಯಿಂದ ಕಾರ್ಯಗತವಾಗಲಿಲ್ಲ. ನಂತರ ನಗರದ ಹೆಬ್ಬಾಳಿನಲ್ಲಿ ಜೈವಿಕ ಕೇಂದ್ರ ಆರಂಭಿಸಲು ಯತ್ನಿಸಲಾಯಿತು. ಅಲ್ಲಿ ಕೂಡ ಜಾಗದ ಸಮಸ್ಯೆ ಎದುರಾಗಿದ್ದರಿಂದ ಅಂತಿಮವಾಗಿ ರಂಗಸಮುದ್ರದ ತೋಟಗಾರಿಕಾ ಇಲಾಖಾ ಜಾಗದಲ್ಲಿ ಜೈವಿಕ ಕೇಂದ್ರ ನಿರ್ಮಿಸಲು ನಿರ್ಧರಿಸಲಾಗಿದೆ.
ಹುಳಿಮಾವು ಮಾದರಿಯಲ್ಲಿ: ರಂಗಸಮುದ್ರದಲ್ಲಿ ಜೈವಿಕ ಕೇಂದ್ರವು ಬೆಂಗಳೂರಿನ ಹುಳಿಮಾವಿನಲ್ಲಿರುವ ಜೈವಿಕ ಕೇಂದ್ರದ ಮಾದರಿಯಲ್ಲಿಯೇ ತಲೆ ಎತ್ತಲಿದೆ. ಸುಮಾರು 6 ಕೋಟಿ ರು.ಗಳ ಈ ಯೋಜನೆಗೆ ಸಂಪೂರ್ಣ ಹಣ ಬಿಡುಗಡೆಯಾಗಿದೆ. ಈಗಾಗಲೇ ನಿರ್ಮಾಣದ ಹೊಣೆ ಹೊತ್ತಿರುವ ಕೆಆರ್ಐಡಿಎಲ್ಎಲ್ ಸಂಸ್ಥೆಗೆ ಶೇ.75 ರಷ್ಟು ಹಣ ಬಿಡುಗಡೆ ಮಾಡಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಚ್.ಎಂ. ನಾಗರಾಜ್ ಕನ್ನಡಪ್ರಭ ಕ್ಕೆ ತಿಳಿಸಿದರು. ಬಾಳೆ ಬೆಳೆ ಅಂಗಾಂಶ ಕೃಷಿ, ಮಣ್ಣು ಮತ್ತು ನೀರಿನ ಗುಣಮಟ್ಟ ಪರೀಕ್ಷೆ, ಎಲೆಗಳ ವಿಶ್ಲೇಷಣೆ, ಜೈವಿಕ ಗೊಬ್ಬರ ತಯಾರಿಕೆ, ಅಣಬೆ ಪ್ರಯೋಗಾಲಯ, ರೈತರು ಮತ್ತು ಕೃಷಿ ಇಲಾಖೆ ಅಧಿಕಾರಿಗಳಿಗೆ ತರಬೇತಿ ಮತ್ತಿತರ ಕಾರ್ಯಚಟುವಟಿಕೆಗಳು ಈ ಕೇಂದ್ರದಲ್ಲಿ ನಡೆಯುತ್ತಿವೆ ಎಂದು ಅವರು ವಿವರಿಸಿದರು.
ಭೀಮನಕೊಲ್ಲಿಯ ತೋಟಗಾರಿಕೆ ಕ್ಷೇತ್ರದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ 1.44 ಕೋಟಿ ರು. ವೆಚ್ಚದಲ್ಲಿ ತಾಳೆ ಬೆಳೆ ಉತ್ಕೃಷ್ಟ ಕೇಂದ್ರ ನಿರ್ಮಿಸಲಾಗುತ್ತಿದೆ. ಈಗಾಗಲೇ ಹಣವನ್ನು ನಿರ್ಮಾಣದ ಉಸ್ತುವಾರಿ ಹೊತ್ತಿರುವ ನಿರ್ಮಿತಿ ಕೇಂದ್ರಕ್ಕೆ ಬಿಡುಗಡಜೆ ಮಾಡಲಾಗಿದೆ ಎಂದು ಈ ಹಿಂದೆ ಅಲ್ಲಿ ಹಿರಿಯ ಸಹಾಯಕ ನಿರ್ದೇಶಕರಾಗಿದ್ದ ಸಿ.ಆರ್. ಕೃಷ್ಣಕುಮಾರ್ ತಿಳಿಸಿದರು. ಭೀಮನಕೊಲ್ಲಿಯಲ್ಲಿ ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 300 ಎಕರೆ ಪ್ರದೇಶವಿದೆ. ಆ ಪ್ರದೇಶವನ್ನು ತಾಳೆ ಬೆಳೆಯಲು ಅನುಕೂಲವಾಗುವಂತೆ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. 6000 ತಾಳೆ ಗಿಡಗಳನ್ನು ಬೆಳೆಸಲಾಗುತ್ತಿದೆ. ತಾಳೆ ಬೆಳೆ ಬಗ್ಗೆ ತರಬೇತಿ ನೀಡಲು ಕಟ್ಟಡ, ಆಡಳಿತ ವಿಭಾಗದ ಕಟ್ಟಡ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಲಾಗುತ್ತದೆ ಎಂದರು. ತಾಳೆ ಬೆಳೆ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ, ಹನಿ ಮತ್ತು ತುಂತುರು ನೀರಾವರಿ, ಅಂತರ ಬೆಳೆ, ಕೋಕೋ ಬೆಳೆ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡುವ ಉದ್ದೇಶವಿದೆ ಎಂದು ಅವರು ಹೇಳಿದರು.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

