ಮೈಸೂರು

ತಾಯಿ ಚಾಮುಂಡೇಶ್ವರಿಗೆ ಉಘೇ... ಉಘೇ...

Published On :

ಮೈಸೂರು: ನಾಡ ಅಧಿದೇವತೆ ಚಾಮುಂಡಿಬೆಟ್ಟದಲ್ಲಿ ನೆಲೆಸಿರುವ ತಾಯಿ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ (ಜನ್ಮೋತ್ಸವ) ಮಹೋತ್ಸವ ಅದ್ಧೂರಿಯಾಗಿ ಮೂರನೇ ಆಷಾಢ ಶುಕ್ರವಾರವಾದಂದು ನೆರವೇರಿತು.
ಪ್ರಾತಃಕಾಲ 5.30 ಗಂಟೆಗೆ ಮಹಾನ್ಯಾಸ ಪೂರ್ವಕ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ನಾಮಾರ್ಚನೆ, ಮಂಗಳಾರತಿ ನೆರವೇರಿಸಲಾಯಿತು. ನಂತರ ಬೆಳಗ್ಗೆ 8.30 ರಿಂದ ಭಕ್ತ ಸಮೂಹಕ್ಕೆ ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಬೆಳಗ್ಗೆ 10.20ಕ್ಕೆ ದೇವಸ್ಥಾನದ ಮುಖ್ಯದ್ವಾರದ ಎದುರು ಹೂವಿನಲಂಕಾರದಿಂದ ಅಲಂಕೃತಗೊಂಡು ನಿಂತಿದ್ದ ಚಿನ್ನದ ಪಲ್ಲಕ್ಕಿ ಮಂಟಪೋತ್ಸವದಲ್ಲಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿ ಅಲಂಕರಿಸಿ ದೇವಸ್ಥಾನದ ಸುತ್ತಲೂ ಮೆರವಣಿಗೆ ಮಾಡಲಾಯಿತು.
ಇಷ್ಟು ವರ್ಷಗಳ ಕಾಲ ಯದುವಂಶದ ತಲಾತಲಾಂತರಿಂದ ನಡೆದು ಬಂದಂತೆ ಮಹಾರಾಜರು ಚಿನ್ನದ ಪಲ್ಲಕ್ಕಿ ಮಂಟಪೋತ್ಸವಕ್ಕೆ ಚಾಲನೆ ನೀಡುತ್ತಿದ್ದು ವಾಡಿಕೆ. ಅದು ಈ ಹಿಂದಿನ ರಾಜ ವಂಶಸ್ಥರಾಗಿದ್ದ ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ತನಕವೂ ನಡೆದುಕೊಂಡು ಬಂದಿತ್ತು. ಕಳೆದ ವರ್ಷದ ಡಿ.10 ರಂದು ಒಡೆಯರ್ ನಿಧರರಾದ ನಂತರ ಅವರ ಸ್ಥಾನವನ್ನು ಯಾರು ತುಂಬುತ್ತಾರೋ ಎಂಬ ಕುತೂಹಲ, ಮೈಸೂರಿನ ಜನರಿಗೆ ಇದ್ದರೂ ಪ್ರಮೋದಾದೇವಿ ಒಡೆಯರ್ ಇನ್ನೂ ಯಾವ ನಿರ್ಧಾರಕ್ಕೆ ಬಾರದ ಹಿನ್ನೆಲೆಯಲ್ಲಿ ಈ ಬಾರಿ ರಾಜವಂಶಸ್ಥರ ಗೈರಿನಲ್ಲಿ ಚಿನ್ನದ ಪಲ್ಲಕ್ಕಿ ಉತ್ಸವ ಸರ್ಕಾರಿ ಉತ್ಸವವಾಗಿ ನೆರವೇರಿತು.
ಮೈಸೂರು ಅರಮನೆಯಿಂದ ಪ್ರಮೋದಾದೇವಿ ಒಡೆಯರ್ ಅವರ ಕೋರಿಕೆ ಮೇರೆಗೆ ನಗರದ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತಿರುವ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಅವರು ಸಕಲ ಸಿದ್ಧತೆಯೊಂದಿಗೆ ಮಂಟಪೋತ್ಸವ ನಡೆಸಿಕೊಟ್ಟರು. ಅರಮನೆ ಅರ್ಚಕರು, ಚಾಮುಂಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶಶಿಶೇಖರ ದೀಕ್ಷಿತರ ಮುಂದಾಳತ್ವದಲ್ಲಿ ಅರ್ಚಕರು, ಆಗಮಿಕರು ಉತ್ಸವ ನಡೆಸಿಕೊಟ್ಟರು.
ಭಕ್ತರ ದಂಡು ಮೆರವಣಿಗೆಯುದ್ದಕ್ಕೂ ತಾಯಿ ಚಾಮುಂಡೇಶ್ವರಿಗೆ ಜಯವಾಗಲಿ, ಚಾಮುಂಡೇಶ್ವರಿಗೆ ಉಘೇ.. ಉಘೇ.. ಎಂಬಿತ್ಯಾದಿ ಘೋಷಣೆಗಳನ್ನು ಕೂಗುತ್ತ ಭಕ್ತಿ ಸಮರ್ಪಿಸಿದರು. ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ಆಚರಣೆ ಎಂದರೆ ಮೈಸೂರಿನ ಜನತೆಗೆ ಹರ್ಷವೋ ಹರ್ಷ. ವರ್ಷವಿಡಿ ಕೆಲಸ ಕಾರ್ಯದಲ್ಲಿ ತಲ್ಲೀನರಾಗುವ ಇವರು ಆಷಾಢ ಶುಕ್ರವಾರದಂದು ಬೆಟ್ಟಕ್ಕೆ ಆಗಮಿಸಿ ದೇವಿಗೆ ಪುಷ್ಪರಾಶಿ ಅಲಂಕಾರ, ಬರುವ ಭಕ್ತರಿಗೆ ಅನ್ನಸಂಪರ್ತಣೆ ಏರ್ಪಡಿಸುವುದನ್ನು ಬಹಳ ಸೊಗಸಾಗಿ ಮಾಡುತ್ತಾರೆ. ಅದರಂತೆ ಈ ಬಾರಿ ದೇವಸ್ಥಾನದ ಪ್ರಾಂಗಣದ ಸುತ್ತ ಸುಗಂಧರಾಜ, ಗುಲಾಬಿ ಸೇರಿದಂತೆ ತರಹೇವಾರಿ ಹೂವುಗಳಿಂದ ವಿವಿಧ ವಿನ್ಯಾಸದಲ್ಲಿ ಅಲಂಕರಿಸಿದ್ದು ಜನರನ್ನು ಆಕರ್ಷಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.