ಮೈಸೂರು

ಮೊಬೈಲಿನಲ್ಲಿ ಮಾತನಾಡುತ್ತ ವಾಹನ ಚಲಾಯಿಸಿದರೆ ದಂಡ ಗ್ಯಾರೆಂಟಿ

Published On :

ಮೈಸೂರು: ಹೆಲ್ಮೆಟ್ ರಹಿತ, ಸೀಟ್ ಬೆಲ್ಟ್ ರಹಿತ ವಾಹನ ಚಾಲನೆ ಹಾಗೂ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸುತ್ತಿದ್ದ ನಗರ ಪೊಲೀಸರು ಮಂಗಳವಾರದಿಂದ ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತ ವಾಹನ ಚಾಲನೆ ಮಾಡುವವರಿಗೆ ದಂಡ ವಿಧಿಸಲು ಸಜ್ಜಾಗಿದ್ದಾರೆ.
ವಾಹನ ಚಾಲನೆ ಮಾಡುವಾಗ ಮೊಬೈಲ್ ಉಪಯೋಗಿಸುವುದನ್ನು ನಿಯಂತ್ರಿಸಲು ನಗರ ಪೊಲೀಸರು ಹಮ್ಮಿಕೊಂಡಿರುವ ಒಂದು ತಿಂಗಳ ಜಾಗೃತಿ ಅಭಿಯಾನಕ್ಕೆ ಸೋಮವಾರ ಚಾಲನೆ ದೊರಕಿತು. ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಬೇಡಿ ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂಬಂಧ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಜಾಥಾ, ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು ಸೇರಿದಂತೆ ಹಲವು ಕಾರ್ಯಕ್ರಮ ನಡೆಯಲಿದೆ. ಮೊಬೈಲ್ ಬಳಕೆ ತಡೆಗಟ್ಟಲು ಕೋಬ್ರಾ, ಇಂಟರ್‌ಸೆಪ್ಟರ್ ವಾಹನ ನಿಯೋಜಿಸಲಾಗುವುದು. ದೇವರಾಜ, ಲಷ್ಕರ್, ನರಸಿಂಹರಾಜ, ಕೃಷ್ಣರಾಜ ವಿಭಾಗದ ಸಂಚಾರ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಇದು ನಡೆಯಲಿದೆ. ಅಪಘಾತ ಮುಕ್ತ ನಗರವನ್ನಾಗಿ ಮಾಡುವ ಪ್ರಯತ್ನದಲ್ಲಿ ಇದು ಒಂದಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದರು.
ಕರ್ನಾಟಕ ಮೋಟಾರು ವಾಹನ ನಿಯಮ- 1989 (ಎ)ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಹಾಗೂ ವಾಹನ ಓಡಿಸುವಾಗ ಮೊಬೈಲ್ ಬಳಕೆ ನಿಷಿದ್ಧ. ಇದರ ಜತೆಗೆ ಕಿವಿಗೆ ಹಿಯರ್ ಫೋನ್ ಮತ್ತು ಬ್ಲೂ ಟೂತ್ ಬಳಸಿ ಮಾತನಾಡುವುದು ಕೂಡ ನಿಷಿದ್ಧ. ಈ ನಿಯಮ ಉಲ್ಲಂಘಿಸುವವರ ವಿರುದ್ಧ ದಂಡ ಪ್ರಯೋಗ ಆರಂಭವಾಗಿದೆ.
ನಿಯಮ ಉಲ್ಲಂಘಿಸಿದವರಿಗೆ ಮೊದಲು ರು. 100, ನಂತರದ ಉಲ್ಲಂಘನೆಗೆ ರು. 300 ಮತ್ತು 3ನೇ ಬಾರಿ ಉಲ್ಲಂಘಿಸಿದರೆ, ಲೈಸೆನ್ಸ್ ಅಮಾನತುಪಡಿಸಲು ಕ್ರಮ ಜರುಗಿಸಲಾಗುತ್ತದೆ. ನಿಮ್ಹಾನ್ಸ್ ಆಸ್ಪತ್ರೆಯ ತಜ್ಞ ವೈದ್ಯರ ತಂಡ ನಡೆಸಿರುವ ಸಮೀಕ್ಷೆ ಪ್ರಕಾರ ಶೇ.20 ರಷ್ಟು ಅಪಘಾತಗಳು ಮೊಬೈಲ್ ಫೋನ್ ಬಳಸುವ ವಿಚಾರದಲ್ಲಿ ನಡೆಯುತ್ತಿದೆ ಎಂದು ಗೊತ್ತಾಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಉಪಯೋಗಿಸಿದವರ ವಿರುದ್ಧ ಪ್ರಸ್ತುತ ವರ್ಷದಲ್ಲಿ 2,783 ಪ್ರಕರಣ, ಕಳೆದ ವರ್ಷ 5,178 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.