ಕಸ ವಿಲೇವಾರಿ ಆಗದಿರುವುದು ಅನೈರ್ಮಲ್ಯಕ್ಕೆ ಕಾರಣ
ನಂಜನಗೂಡು: ಪಟ್ಟಣದಲ್ಲಿ ಎಲ್ಲೆಂದರಲ್ಲಿ ಕಸ, ಮಣ್ಣಿನ ರಾಶಿ, ಅನೈರ್ಮಲ್ಯತೆ ಹಾಗೂ ಸ್ವಚ್ಛತೆ ಇಲ್ಲದೆ ಘನ ತ್ಯಾಜ್ಯ ವಸ್ತುಗಳು ಸಮರ್ಪಕವಾಗಿ ವಿಲೇವಾರಿ ಆಗದೆ, ಪಟ್ಟಣದ ಸೌಂದರ್ಯ ಕಳೆಗುಂದಿದ್ದು, ಜಿಲ್ಲೆಯಲ್ಲೇ ನಂಜನಗೂಡು ಪಟ್ಟಣ ಸ್ವಚ್ಛತೆಯಲ್ಲಿ ಹಿನ್ನಡೆಯಾಗಿದೆ ಎಂದು ಜಿಲ್ಲಾ ಯೋಜನಾಧಿಕಾರಿ ಲಿಂಗಣ್ಣಯ್ಯ ಹೇಳಿದರು.
ಶನಿವಾರ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಮನೆ ಮುಂದೆ ಬರುವ ತಳ್ಳುವ ಗಾಡಿ-ಅಥವಾ ಕಸ ಸಂಗ್ರಹಿಸುವ ಡಬ್ಬಗಳಿಗೆ ಹಾಕುವುದರಿಂದ ಸ್ವಚ್ಛತಾ, ನೈರ್ಮಲ್ಯ ಕಾಪಾಡಬಹುದು. ಪ್ರತಿ ತಿಂಗಳಿಗೊಮ್ಮೆ ಸ್ವಚ್ಛತಾ ಆಂದೋಲನ ಕಾರ್ಯ ನಡೆಸುವಂತೆ ಹಾಗೂ ಸ್ವಚ್ಛತೆಗೆ ಹೆಚ್ಚುವರಿಯಾಗಿ 50 ಮಂದಿ ಹಂಗಾಮಿ ನೌಕರರನ್ನು ನೇಮಕ ಮಾಡಿಕೊಳ್ಳುವಂತೆ ಮುಖ್ಯಾಧಿಕಾರಿ ಕರಿಬಸವಯ್ಯ ಅವರಿಗೆ ಸೂಚಿಸಿದರು. ಅಧಿಕಾರಿಗಳು ಪಟ್ಟಣದಲ್ಲೆ ವಾಸ್ತವ್ಯ ಮಾಡಿ, ಪ್ರತಿದಿನ ಬೆಳಗ್ಗೆ ಬಡಾವಣೆಗಳಿಗೆ ಭೇಟಿ ನೀಡಿ, ಸಮಸ್ಯೆ ಆಲಿಸಿ ಸುಂದರ ನಗರವನ್ನಾಗಿ ಪರಿವರ್ತಿಸಲು ಸನ್ನದ್ಧರಾಗಿ ಎಂದು ಕರೆ ನೀಡಿದರು.
ಪುರಸಭೆ ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರು, ಅಧಿಕಾರಿಗಳು ಬೆಳಗ್ಗೆ ಕೈಯಲ್ಲಿ ಪೊರಕೆ ಹಿಡಿದು ರಸ್ತೆಗಳಲ್ಲಿ ಕಸಗುಡಿಸುವ ಮೂಲಕ ಪಟ್ಟಣ ಸ್ವಚ್ಛತೆಗೆ ಸಾಕ್ಷಿಯಾದರು.
ಖಾಸಗಿ ಬಸ್ ನಿಲ್ದಾಣ, ಪುರಸಭೆ ಹಿಂಭಾಗ, ನೆಹರು ವೃತ್ತ, ಆನಂದಪುರ, ಶ್ರೀಕಂಠೇಶ್ವರಸ್ವಾಮಿ ದೇಗುಲದ ಸುತ್ತಮುತ್ತ, ಕೆ.ಎಚ್.ಬಿ. ಕಾಲೋನಿ ಸೇರಿದಂತೆ ಹಲವು ಬಡಾವಣೆಗಳಲ್ಲಿ ಕಸ, ಮಣ್ಣು ಮತ್ತು ಇತರೆ ತ್ಯಾಜ್ಯ ವಸ್ತುಗಳನ್ನು ಗುಡಿಸಿ ಸಂಗ್ರಹಿಸಿ, ವಿಲೇವಾರಿ ಮಾಡಿದರು.
ಬೆಳಗ್ಗೆ ಖಾಸಗಿ ಬಸ್ ನಿಲ್ದಾಣದ ಮುಂಭಾಗ ಸ್ವಚ್ಛತಾ ಕಾರ್ಯ ನೆರವೇರಿಸಿ ಕೆ.ಎಚ್.ಬಿ. ಕಾಲೋನಿಯ ಪಾರ್ಕ್ನಲ್ಲಿ ಸಸಿ ನೀಡುವ ಕಾರ್ಯಕ್ರಮಕ್ಕೆ ಅಧ್ಯಕ್ಷೆ ಮೀನಾಕ್ಷಿ, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸಿ.ಎಂ. ಶಂಕರ್ ಹಾಗೂ ಪ್ರದೀಪ್, ವಿಜಯಾಂಬಿಕ, ನಟೇಶ್, ಮಹದೇವಸ್ವಾಮಿ ಸೇರಿದಂತೆ ಸದಸ್ಯರು ಕೆ.ಎಚ್.ಬಿ. ಕಾಲೋನಿಯ ಪಾರ್ಕಿಗೆ ತೆರೆಳಿದರು. ಸುಮಾರು ಒಂದೂವರೆ ಗಂಟೆ ಕಾದರೂ ಯೋಜನಾಧಿಕಾರಿ, ಮುಖ್ಯಾಧಿಕಾರಿಯಾಗಲಿ ತಲೆ ಹಾಕಲಿಲ್ಲ. ಇದರಿಂದ ಬೇಸರಗೊಂಡ ಪುರಸಭಾ ಅಧ್ಯಕ್ಷೆ ಮೀನಾಕ್ಷಿ ಸೇರಿದಂತೆ ಇತರೆ ಸದಸ್ಯರು ಗಿಡನೆಟ್ಟು ನೇರವಾಗಿ ಪುರಸಭೆ ಹಿಂಭಾಗದಲ್ಲಿ ಕಸ ವಿಲೇವಾರಿ ಮಾಡುತ್ತಿದ್ದ ಯೋಜನಾಧಿಕಾರಿ ಲಿಂಗಣ್ಣಯ್ಯನವರ ವಿರುದ್ಧ ವಾಗ್ದಾಳಿ ನಡೆಸಿದರು. ಜಿಲ್ಲಾ ಯೋಜನಾಧಿಕಾರಿ ಲಿಂಗಣ್ಣಯ್ಯ, ಅಧ್ಯಕ್ಷೆ ಮೀನಾಕ್ಷಿ, ಉಪಾಧ್ಯಕ್ಷ ದೊರೆಸ್ವಾಮಿ, ಎಇಇಗಳಾದ ಕುಬೇರಪ್ಪ, ಶಿವಪ್ರಕಾಶ್, ಮುಖ್ಯಾಧಿಕಾರಿ ಕರಿಬಸವಯ್ಯ, ಜಿಪಂ ಮಾಜಿ ಅಧ್ಯಕ್ಷ ಧರ್ಮೇಂದ್ರ, ಯೋಜನಾಧಿಕಾರಿ ವೆಂಕಟನಾಯಕ್, ಮಾಜಿ ಅಧ್ಯಕ್ಷರಾದ ಸಿ.ಎಂ. ಶಂಕರ್, ಎಂ. ಶ್ರೀಧರ್, ಸದಸ್ಯರಾದ ಎನ್.ಎಂ. ಮಂಜುನಾಥ್, ಚಂದ್ರಶೇಖರ್, ಪ್ರದೀಪ್, ರಾಜೇಶ್ವರಿ ಗಣೇಶ್, ಅನುಸೂಯ, ರಾಜೇಶ್, ನಟೇಶ್, ಮಹದೇವಸ್ವಾಮಿ, ಸುಂದರರಾಜ್, ವಿಜಯಾಂಬಿಕ, ವರದರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

