ಸಮಸ್ಯೆಗಳ ನಡುವೆ ಸ್ವಚ್ಛತಾ ಕಾರ್ಯ
ಮಾ. ವೆಂಕಟೇಶ್
ಮೈಸೂರು: ಚಾಮರಾಜ ಕ್ಷೇತ್ರ ವ್ಯಾಪ್ತಿಯ ಒಂಟಿಕೊಪ್ಪಲು, ಜಯಲಕ್ಷ್ಮೀಪುರಂ, ಗೋಕುಲಂ ಹಾಗೂ ಪಡುವಾರಹಳ್ಳಿ ಪ್ರದೇಶಗಳ ಕಸ ಸಂಸ್ಕರಿಸಲು ಗೋಕುಲಂ ಸ್ಮಶಾನದಲ್ಲಿ ಶೂನ್ಯ ಕಸ ನಿರ್ವಹಣೆ ಘಟಕ ನಿರ್ಮಿಸಲಾಗಿದೆ. ಆದರೆ, ಅದರ ಆರಂಭಕ್ಕೆ ವಿಘ್ನ ಎದುರಾಗಿದೆ.
ಒಂಟಿ ಕೊಪ್ಪಲು ಹೆಸರಿನ ವಾರ್ಡ್ ಸಂಖ್ಯೆ 32ರಲ್ಲಿ ಇರುವ ಗೋಕುಲಂ ಸ್ಮಶಾನದಲ್ಲಿ ಈ ಘಟಕ ಸ್ಥಾಪಿಸಲಾಗಿದೆ. ಈಗಾಗಲೇ ಇಲ್ಲಿ ಸ್ಮಶಾನ ಇರುವುದರಿಂದ, ಅಲ್ಲಿ ಕಟ್ಟಿಗೆಯಲ್ಲಿ ಹೆಣ ಸುಡುವ ಕಾರಣ ಸುತ್ತ ಮುತ್ತಲಿನ ನಿವಾಸಿಗಳು ಅದರ ಹೊಗೆ ಹಾಗೂ ದೂರ್ವಾಸನೆಯಿಂದ ಬೇಸತ್ತಿತ್ತು, ಇದೀಗ ಕಸ ಸಂಗ್ರಹಿಸಿ ಸಂಸ್ಕರಣೆಗೆ ಮುಂದಾದರೆ ಮತ್ತಷ್ಟು ವಾಸನೆಯಿಂದ ಬಳಲಬೇಕಾಗುತ್ತದೆ ಎಂಬುದು ಇಲ್ಲಿನ ನಾಗರಿಕರ ದೂರು.
ನರ್ಮ್ ಯೋಜನೆಯಡಿ ವರ್ಷದ ಹಿಂದೆಯೇ ನಗರ ಪಾಲಿಕೆಯ ಎಲ್ಲ ರೀತಿಯ ಸಿದ್ಧತೆಯೊಂದಿಗೆ 35 ಲಕ್ಷ ರು. ವೆಚ್ಚದಲ್ಲಿ ಶೂನ್ಯ ಕಸ ನಿರ್ವಹಣೆ ಘಟಕ ಆರಂಭಿಸಲು ಮುಂದಾದಾಗ ಇಲ್ಲಿನ ಸುತ್ತಮುತ್ತ ನಿವಾಸಿಗರು ಬಾರಿ ವಿರೋಧ ವ್ಯಕ್ತಪಡಿಸಿದ ಕಾರಣ ಘಟಕ ಇಂದಿಗೂ ಕಾರ್ಯಾರಂಭವಾಗದೆ ಸ್ಥಗಿತವಾಗಿದೆ.
ಸ್ಮಶಾನದ ಜತೆಗೆ ವಾರ್ಡ್ನ ವ್ಯಾಪ್ತಿಯಲ್ಲಿ ದೊಡ್ಡಮೋರಿಯೂ ಇದೆ, ಅದಕ್ಕೆ ಹೊಂದಿಕೊಂಡಂತೆ ಕೊಳಚೆ ಪ್ರದೇಶವು ಇದೆ. ಹಾಗಾಗಿ ವಸತಿ ಪ್ರದೇಶಗಳ ಸ್ವಚ್ಛತೆಯ ಜತೆಗೆ ಈ ಭಾಗದಲ್ಲಿನ ರಸ್ತೆ ಹಾಗೂ ಮನೆ ಮನೆ ಕಸ ಸಂಗ್ರಹಕ್ಕೆ ಹೆಚ್ಚಿನ ಪೌರಕಾರ್ಮಿಕರು ಅಗತ್ಯ. ಇದೀಗ ಲಾರಿ ಸಿಬ್ಬಂದಿ ಸೇರಿದಂತೆ 30 ಜನರು ಕಾರ್ಯ ನಿರ್ವಹಿಸುತ್ತಿದ್ದು, ಸಮರ್ಪಕ ಪರಿಸರದ ಸ್ವಚ್ಛತೆಗಾಗಿ 45 ಸಿಬ್ಬಂದಿಯನ್ನು ಒದಗಿಸುವ ಅಗತ್ಯವಿದೆ.
ಕಂಟೈನರ್ ಕೊರತೆ: ಈ ಪ್ರದೇಶದಲ್ಲಿ ಕಂಟೈನರ್ ಕೊರತೆಯಿದ್ದು, ಕೆಲವು ಕಸದ ತೊಟ್ಟಿಗಳು ತೂತು ಬಿದ್ದು ಹಾಳಾಗಿವೆ. ಇದರಿಂದಾಗಿ ಮನೆ ಮನೆಯಿಂದ ಸಂಗ್ರಹಿಸಿ ತಂದು ಸುರಿಯುವ ಕಸ ಕೆಳಗೆ ಚೆಲ್ಲಿ ತಾಂಡವವಾಡುತ್ತಿವೆ. ಹೊಸ ಕಂಟೈನರ್ ಒದಗಿಸುವ ಮೂಲಕ ಇದನ್ನು ತಪ್ಪಿಸುವಲ್ಲಿ ಅಧಿಕಾರಿಗಳು ಮುಂದಾಗಬೇಕು ಎಂಬುದು ಸ್ಥಳೀಯ ಜನಪ್ರತಿನಿಧಿ ಹಾಗೂ ನಿವಾಸಿಗಳ ಆಗ್ರಹ.
32ನೇ ವಾರ್ಡ್ನ ಈ ಭಾಗದ ವ್ಯಾಪ್ತಿ ಉತ್ತರಕ್ಕೆ ಕನ್ನಡ ಸಾಹಿತ್ಯ ಭವನ ರಸ್ತೆ, ಹೈಟೆನ್ಷನ್ ರಸ್ತೆ ಕೂಡುನ ಬಂದುವಿನಿಂದ ವಿದ್ಯಾವರ್ಧಕ ರಸ್ತೆ ಮಾರ್ಗವಾಗಿ ಚಲಿಸಿ ಕಾಂಟೂರ್ ರಸ್ತೆ ಬಿಂದುವರೆಗೆ. ಅಲ್ಲಿಂದ ಕಾಂಟೂರ್ ರಸ್ತೆ ಮಾರ್ಗವಾಗಿ ಗೋಕುಲಂ ಸ್ಮಶಾನ ರಸ್ತೆಯ ಬಿಂದುವರಿಗೆ. ಪೂರ್ವಕ್ಕೆ ಗೋಕುಲಂ ಸ್ಮಶಾನ ರಸ್ತೆ ಬಿಂದುವಿನಿಂದ ವಿ. ವಿ. ಪುರಂ ಪೊಲೀಸ್ ಠಾಣೆ ಮಾರ್ಗವಾಗಿ ಬಿ. ಸಿ. ಲಿಂಗಯ್ಯ ವೃತ್ತ ದಾಟಿ ಕೆಆರ್ಎಸ್ ರಸ್ತೆ ಮಾರ್ಗವಾಗಿ ತಾರಾಸು ವೃತ್ತ. ಅಲ್ಲಿಂದ ಚೆಲುವಾಂಬ ಉದ್ಯಾನವನ ಎದುರಿನ ರಸ್ತೆ ಮೂಲಕ ಕಾಳಿದಾಸ ರಸ್ತೆ ಬಿಂದುವರೆಗೆ. ಕಾಳಿದಾಸ ರಸ್ತೆ ಮೂಲಕ ವಾಲ್ಮೀಕಿ ರಸ್ತೆಯಲ್ಲಿ ಸಾಗಿ ಆದಿಪಂಪ ರಸ್ತೆ ಬಿಂದುವರೆಗೆ.
ದಕ್ಷಿಣಕ್ಕೆ ಆದಿಪಂಪ ರಸ್ತೆ, ವಾಲ್ಮೀಕಿ ರಸ್ತೆ ಬಿಂದುವಿನಿಂದ ಆದಿಪಂಪ ರಸ್ತೆಯ ಮೂಲಕ ಚಲಿಸಿ ಮಾತೃಮಂಡಳಿ ವೃತ್ತ ದಾಟಿ ಕಾಳಿದಾಸ ರಸ್ತೆ ಮಾರ್ಗವಾಗಿ ಚಲಿಸಿ ಕನ್ನಡ ಸಾಹಿತ್ಯ ಭವನ ರಸ್ತೆ ಸೇರುವ ಬಿಂದುವರೆಗೆ. ಪಶ್ಚಿಮಕ್ಕೆ ಕಾಳಿದಾಸ ರಸ್ತೆಯ ಮೂಲಕ ಕನ್ನಡ ಸಾಹಿತ್ಯ ಭವನ ರಸ್ತೆ ಕೂಡುವ ಬಿಂದುವಿನಿಂದ ಸಾಹಿತ್ಯ ಭವನ ರಸ್ತೆ ಮಾರ್ಗವಾಗಿ ಹೈಟೆನ್ಷನ್ ರಸ್ತೆ ಕೂಡುವ ಬಿಂದುವರೆಗೆ ಒಳಗೊಂಡಿದೆ. ಈ ಭಾಗದಲ್ಲಿ ಸುಮಾರು 13 ಸಾವಿರ ಜನಸಂಖ್ಯೆ, ಸುಮಾರು 3 ಸಾವಿರ ಮನೆಗಳು ಹಾಗೂ 150 ಕ್ಕೂ ಅಧಿಕ ಉದ್ದಿಮೆಗಳಿವೆ.
ಇರುವ ಕಡಿಮೆ ಪೌರಕಾರ್ಮಿಕರ ಸಿಬ್ಬಂದಿಯಿಂದ ಉತ್ತಮವಾಗಿ ಸ್ವಚ್ಛತಾ ಕಾರ್ಯ ನಡೆಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿದೆ. ಗುತ್ತಿಗೆ ವಹಿಸಿಕೊಂಡಿರುವವರು ಕಸದ ಸಾಗಣೆಗೆ ಸರಿಯಾಗಿ ವಾಹನ ಒದಗಿಸುತ್ತಿಲ್ಲ. 40 ಪೌರಕಾರ್ಮಿಕರು ಹಾಗೂ ಹಳೆಯ ಕಂಟೈನರ್ ಬದಲಿಸಬೇಕು ಹಾಗೂ ಹೆಚ್ಚುವರಿಯಾಗಿ 6 ಹೊಸ ಕಂಟೈನರ್ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ವಾರ್ಡ್ನ ಗೋಕುಲಂ ಸ್ಮಶಾನದಲ್ಲಿ ಸ್ಥಾಪಿಸಿರುವ ಶೂನ್ಯಕಸ ನಿರ್ವಹಣೆ ಘಟಕದ ಆರಂಭಕ್ಕೆ ಇಲ್ಲಿನ ನಿವಾಸಿಗಳ ವಿರೋಧವಿದೆ. ಈ ಸಂಬಂಧ ನಡೆದ ನಾಗರಿಕರ ಹಾಗೂ ಅಧಿಕಾರಗಳ ಸಭೆಗೆ ಪಾಲಿಕೆ ಆಯುಕ್ತರು ಎರಡು ಬಾರಿಯೂ ಗೈರು ಹಾಜರಾಗಿದ್ದಾರೆ. ಘಟಕ ಆರಂಭಿಸಿದರೆ ಮುಂದಿನ ದಿನದಲ್ಲಿ ಜೆ.ಪಿ. ನಗರದ ಎಕ್ಸೆಲ್ ಪ್ಲಾಂಟ್ನಂತಾದರೆ ಎಂಬುವ ಆತಂಕವಿದೆ. ಯಾವುದೇ ಕಾರಣಕ್ಕೂ ಘಟಕ ಆರಂಭಿಸಲು ಬಿಡುವುದಿಲ್ಲ.
ಸಿ. ಮಹದೇಶ್, ವಾರ್ಡ್32, ನಗರ ಪಾಲಿಕೆ ಸದಸ್ಯರು,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

