ಮೈಸೂರು

ಚರಂಡಿಗಳ ವಾಸನೆ ನಿವಾಸಿಗಳ ವೇದನೆ

Published On :

ಭೇರ್ಯ ಮಹೇಶ್
ಭೇಯ: ಈ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ದುರ್ವಾಸನೆ ಬೀರುವ ಚರಂಡಿಗಳು, ರಸ್ತೆ ಮಧ್ಯದಲ್ಲಿ ಹರಿಯುವ ಚರಂಡಿ ಕೊಳಚೆ ನೀರು, ಮೂಗುಮುಚ್ಚಿ ಓಡಾಡದೆ ಬೇರೆ ದಾರಿಯಿಲ್ಲ.
ಕೆ.ಆರ್. ನಗರ ತಾಲೂಕಿನ ಮಿರ್ಲೆ ಹೋಬಳಿಯ ಬಾಚಹಳ್ಳಿ ಗ್ರಾಮದಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಮತ್ತು ಚರಂಡಿ ಅವ್ಯವಸ್ಥೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಚರಂಡಿಯಿಂದ ಹೊರಹೊಮ್ಮುವ ಅಸಹ್ಯ ವಾಸನೆ ಇಲ್ಲಿನ ನಿವಾಸಿಗಳ ನೆಮ್ಮದಿ ಕೆಡಿಸಿದ್ದು, ನಿತ್ಯ ಮೂಗುಮುಚ್ಚಿ ಓಡಾಡುವ ದುಃಸ್ಥಿತಿ ಎದುರಾಗಿದೆ.
ಮೇಲೂರು ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 200 ಮನೆಗಳಿದ್ದು, ಒಂದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಅಗತ್ಯ ಮೂಲಸೌಲಭ್ಯಗಳಲ್ಲಿ ಒಂದಾದ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಜನರು ಪರದಾಡುವಂತಾಗಿದೆ.
ರಸ್ತೆ ಮಧ್ಯೆ ಕೊಳಚೆ: ಗ್ರಾಮದ ಪ್ರತಿ ಬೀದಿಯಲ್ಲೂ ಅಸಮರ್ಪಕ ಚರಂಡಿಯಿಂದ ಜನ ಬೇಸತ್ತಿದ್ದಾರೆ. ಇರುವ ಕೆಲವೆ ಕೆಲ ಚರಂಡಿಗಳು ಕೆಸರು, ಕಸಕಯಿಂದ ಮುಚ್ಚಿ ಮೂಲಸ್ವರೂಪ ಕಳೆದುಕೊಂಡಿವೆ. ಕೆಲವೆಡೆ ಚರಂಡಿಯೆ ಇಲ್ಲದೆ ಕೊಳಚೆ ನೀರು ರಸ್ತೆ ಮಧ್ಯೆ ಹರಿಯುತ್ತಿದೆ. ಪಾದಚಾರಿಗಳು, ವಾಹನ ಸವಾರರು ಹರಸಾಹಸ ಪಡಲೇಬೇಕು.
ಅಲ್ಲಲ್ಲಿ ಚರಂಡಿಗೆ ಅಡ್ಡಗಟ್ಟಿರುವುದರಿಂದ ಕೊಳಚೆನೀರು ಒಂದೆಡೆ ಶೇಖರಣೆಗೊಂಡು ದುರ್ವಾಸನೆ ಬೀರುತ್ತಿವೆಯಲ್ಲದೆ, ಸೊಳ್ಳೆಗಳ ಅಗ್ರಸ್ಥಾನವಾಗಿದ್ದು, ರಾತ್ರಿವೇಳೆ ಸೊಳ್ಳೆಕಾಟದಿಂದ ನಿದ್ರಾಭಂಗ, ಜತೆಗೆ ಪದೆಪದೆ ಸಾಂಕ್ರಾಮಿಕ ರೋಗಗಳಿಂದ ಬಳಲುವಂತಾಗಿದೆ. ಈಗ ಮಳೆಗಾಲ ಶುರುವಾಗಿದ್ದು, ಗ್ರಾಮದ ರಸ್ತೆಗಳು ಕೊಳಚೆ ನೀರಿನಿಂದ ಸಂಪೂರ್ಣ ರಾಡಿಯಾಗಿ ಇಡೀ ಗ್ರಾಮದ ನೈರ್ಮಲ್ಯ ಹದಗೆಡುತ್ತಿದೆ. ಕೆಲವೆಡೆ ಚರಂಡಿಯಿಂದ ತೆಗೆದ ತ್ಯಾಜ್ಯವನ್ನು ವಿಲೇವಾರಿ ಮಾಡದಿರುವುದರಿಂದ ರಸ್ತೆಯಲ್ಲಿ ಹರಡಿ ಅಶುಚಿತ್ವ ಮತ್ತಷ್ಟು ಹೆಚ್ಚುವ ಆತಂಕ ಮೂಡಿದೆ.
ಇನ್ನು ಗ್ರಾಮದ ಕೆಲ ರಸ್ತೆಗಳಲ್ಲಿ ಕಲ್ಲುಗಳು ಎದ್ದಿದ್ದು, ವೃದ್ಧರು, ಮಕ್ಕಳು ಎಡವಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಹಾಗೂ ಸರ್ಕಾರದ ಇತರೆ ಯೋಜನೆಗಳಿಂದ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ರಸ್ತೆಗಳನ್ನು ಮೆಟ್ಲಿಂಗ್ ಮಾಡಲು ಅವಕಾಶವಿದ್ದರೂ ಈ ಭಾಗದ ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ಜನತೆ.
ಗ್ರಾಮವನ್ನು ನಿತ್ಯ ಕಾಡುತ್ತಿರುವ ಸಮಸ್ಯೆಗಳನ್ನು ಶೀಘ್ರವೇ ನಿವಾರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.