ಮೈಸೂರು

ಸಂಚಾರ ನಿಯಮ ಉಲ್ಲಂಘನೆ: 2.72 ಲಕ್ಷ ಕೇಸು

Published On :

ಮೈಸೂರು: ಐದು ತಿಂಗಳಲ್ಲಿ 2,72,586 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ನಗರ ಸಂಚಾರ ಪೊಲೀಸರು ತೆಗೆದುಕೊಂಡಿರುವ ಕ್ರಮಗಳಿಂದ ರಸ್ತೆ ಅಪಘಾತಗಳು ಗಣನೀಯವಾಗಿ ಇಳಿಮುಖವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ತಿಳಿಸಿದ್ದಾರೆ.
2012ರ ಮೇ ಅಂತ್ಯಕ್ಕೆ 384 ರಸ್ತೆ ಅಪಘಾತ ಸಂಭವಿಸಿದ್ದು, 49 ಮಂದಿ ಸಾವು, 432 ಮಂದಿ ಗಾಯಗೊಂಡಿದ್ದರು. 59,365 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದವು. 2013ರ ಮೇ ಅಂತ್ಯದವರೆಗೆ 371 ರಸ್ತೆ ಅಪಘಾತ ಸಂಭವಿಸಿದ್ದು, 61 ಮಂದಿ ಸಾವು, 401 ಮಂದಿಗೆ ಗಾಯ, 92,819 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿತ್ತು. 2014ರ ಮೇ ಅಂತ್ಯವರೆಗೆ ಒಟ್ಟು 305 ರಸ್ತೆ ಅಪಘಾತಗಳು ಸಂಭವಿಸಿದ್ದು, 49 ಮಂದಿ ಮೃತಪಟ್ಟಿದ್ದಾರೆ. 346 ಮಂದಿ ಗಾಯಗೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿರುವ ಸಂಬಂಧ 2,72,586 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. 2014ರ ಮೇ ಅಂತ್ಯದವರೆಗೆ ಪಾನಮತ್ತರಾಗಿ ವಾಹನ ಚಾಲನೆ 2319, ನಿರ್ಲಕ್ಷ್ಯತೆ ಚಾಲನೆ 571, ವೇಗದ ಮಿತಿ ಉಲ್ಲಂಘನೆ 810, ಡಿಎಲ್ ಇಲ್ಲದವರ ವಿರುದ್ಧ 4182, ಹೆಲ್ಮೆಟ್ ಧರಿಸದವರು 53144, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆ 2225 ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 209335 ಸೇರಿದಂತೆ ಒಟ್ಟಾರೆ 2,72,586 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.
ಅಲ್ಲದೆ, ರಸ್ತೆ ಅಪಘಾತ ನಿಯಂತ್ರಣಕ್ಕಾಗಿ ಪಾನಮತ್ತರಾಗಿ ವಾಹನ ಚಾಲನೆ ಮಾಡಿದ 549 ಜನರ ಚಾಲನಾ ಪರವಾನಗಿ (ಡಿಎಲ್) ಅಮಾನತುಗೊಳಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿರುವ ಅವರು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಂದ ಎಷ್ಟು ದಂಡ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಒದಗಿಸಿಲ್ಲ.
ರಸ್ತೆ ಅಪಘಾತ ನಿಯಂತ್ರಣಕ್ಕಾಗಿ ಸ್ವಯಂ ಚಾಲಿತ ಸಂಚಾರ ವ್ಯವಸ್ಥೆ ಜಾರಿ, ವಾಹನಗಳಿಗೆ ನಗರ ವ್ಯಾಪ್ತಿಯಲ್ಲಿ ವೇಗಮಿತಿ ಅಳವಡಿಕೆ, ಹೆಲ್ಮೆಟ್ ಅಭಿಯಾನ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಆಂದೋಲನ, ಸೀಟ್ ಬೆಲ್ಟ್ ಅಭಿಯಾನ, ಪಬ್ಲಿಕ್ ಐ, ಪ್ರಯಾಣಿಕರ ಆಟೋ ಸೇವಾ ಕೇಂದ್ರಗಳ ಹಾಗೂ ಆಟೋ ಚಾಲಕರ ಡಿಸ್‌ಪ್ಲೆ ಕಾರ್ಡ್ ವಿತರಣೆ ವ್ಯವಸ್ಥೆ ಜಾರಿ, ಸಂಚಾರ ವ್ಯವಸ್ಥೆ ಸುಧಾರಿಸಲು ಟ್ರಾಫಿಕ್ ಕೋಬ್ರಾಗಳ ಆರಂಭ, ಗೃಹ ರಕ್ಷಕ ಸಿಬ್ಬಂದಿ ಬಳಕೆ, ಟ್ರಾಫಿಕ್ ವಾರ್ಡನ್‌ಗಳ ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಸುರಕ್ಷತೆಗಾಗಿ ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮೈಸೂರನ್ನು ರಸ್ತೆ ಅಪಘಾತ ಮುಕ್ತ ನಗರವನ್ನಾಗಿ ಮಾಡಲು ಸಹಕರಿಸುವಂತೆ ಆಯುಕ್ತರು ಕೋರಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.