ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ
ಮೈಸೂರು: ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿ, ಆಕೆಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಪತಿಗೆ ಮೈಸೂರಿನ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
ಎಚ್.ಡಿ.ಕೋಟೆ ತಾಲೂಕು ಮಾದಾಪುರ ಗ್ರಾಮದ ನಂಜುಂಡಸ್ವಾಮಿ ಶಿಕ್ಷೆಗೆ ಗುರಿಯಾದವರು. ನಂಜನಗೂಡು ತಾಲೂಕು ಕಾಟೂರು ಗ್ರಾಮದ ವೀರಪ್ಪ ಎಂಬವರ ಪುತ್ರಿ ರಾಜಮಣಿ ಮತ್ತು ಮಾದಾಪುರದ ನಂಜುಂಡಸ್ವಾಮಿಗೆ ಚಿಕ್ಕೆರೆಯೂರು ಗ್ರಾಮದ ಛತ್ರದಲ್ಲಿ 2010ರ ಫೆ.3 ರಂದು ವಿವಾಹವಾಗಿತ್ತು. ಮದುವೆ ಸಂದರ್ಭದಲ್ಲಿ 50,000 ಹಾಗೂ 40 ಗ್ರಾಂ. ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು.
ಮದುವೆಯಾದ ನಂತರ ರಾಜಮಣಿ ತನ್ನ ಗಂಡನ ಮನೆಯಾದ ಮಾದಾಪುರದಲ್ಲಿ ವಾಸವಾಗಿದ್ದು, 1 ತಿಂಗಳ ಕಾಲ ಮನೆಯವರು ಚೆನ್ನಾಗಿ ನೋಡಿಕೊಂಡಿದ್ದರು. ಗಂಡನ ಮನೆಯವರು ಮಾಡಿದ ಸಾಲ ತೀರಿಸಲು ರಾಜಮಣಿಯ ಚಿನ್ನದ ಮಾಂಗಲ್ಯ ಸರ ನೀಡುವಂತೆ ಹಾಗೂ ತವರಿನಿಂದ ಹಣ ತರುವಂತೆ ಗಂಡ, ಅತ್ತೆ, ಮಾವ ಮತ್ತು ಅತ್ತಿಗೆ ಕಿರುಕುಳ ನೀಡಲು ಆರಂಭಿಸಿದ್ದರು.
2012ರ ಜ.4 ರಾತ್ರಿ ಕುಡಿದು ಬಂದ ನಂಜುಂಡಸ್ವಾಮಿ ಜಗಳ ತೆಗೆದು ರಾಜಮಣಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ. ಸುಟ್ಟಗಾಯಗಳಾಗಿದ್ದ ರಾಜಮಣಿಯನ್ನು ಅಕ್ಕಪಕ್ಕ ಮನೆಯವರು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದು, ಜ.14 ರಂದು ರಾಜಮಣಿ ಮೃತಪಟ್ಟಿದ್ದಾರೆ.
ಈ ಸಂಬಂಧ ರಾಜಮಣಿ ತಂದೆ ವೀರಪ್ಪ ನೀಡಿದ ದೂರಿನ ಮೇರೆಗೆ ಎಚ್.ಡಿ. ಕೋಟೆಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸುಶೀಲಾ ಅವರು ನಂಜುಂಡಸ್ವಾಮಿ ಮೇಲಿನ ಆರೋಪ ರುಜುವಾತಾಗಿದೆ ಎಂದು ಅಭಿಪ್ರಾಯಪಟ್ಟು, ಆತನಿಗೆ ಜೀವಾವಧಿ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

