ಮೈಸೂರು

ಪರಿಷತ್ತಿಗೆ ವಾಟಾಳ್ ನಾಮಕರಣ ಮಾಡಿ

Published On :

ಮೈಸೂರು: ಹಿರಿಯ ಕನ್ನಡ ಹೋರಾಟಗಾರ ಹಾಗೂ ಮಾಜಿ ಶಾಸಕ ವಾಟಾಳ್ ನಾಗರಾಜ್ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಬೇಕೆಂದು ಕನ್ನಡ ಪರ ಸಂಘಟನೆಗಳ ಮುಖಂಡರು ಆಗ್ರಹಿಸಿದ್ದಾರೆ. ನಾಡು, ನುಡಿಗಾಗಿ ಜೀವನ ಮುಡಿಪಾಗಿರಿಸಿಕೊಂಡು ನಿರಂತರವಾಗಿ ಆರು ದಶಕಗಳ ಕಾಲ ನೆಲ, ಜಲ, ಗಡಿ, ಭಾಷೆ ಕಾಯುವ ಕಾಯಕವನ್ನು ನಿಷ್ಠೆಯಿಂದ ಮಾಡಿರುವ ವಾಟಾಳ್ ನಾಗರಾಜ್ ಅವರ ಹಿರಿತನಕ್ಕೆ ಬೆಲೆ ನೀಡಿ ರಾಜ್ಯ ಸರ್ಕಾರ ಪರಿಷತ್ತಿಗೆ ನಾಮಕರಣ ಮಾಡಬೇಕು ಎಂದು ಸಾಹಿತಿ ಪ್ರೊ.ಮಲೆಯೂರು ಗುರುಸ್ವಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಆರೂವರೆ ಕೋಟಿ ಕನ್ನಡಿಗರ ಪ್ರೀತಿಗೆ ಪಾತ್ರರಾದ ವಾಟಾಳ್ ನಾಗರಾಜ್ ಅವರು, ಬದುಕಿನಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದೆ ಕಳಂಕರಹಿತ ವ್ಯಕ್ತಿಯಾಗಿ ಹೋರಾಟ ಮಾಡಿದವರು ಎಂದರು.   
ಗಣಿಗಾರಿಗೆ ತಡೆಯಲು ಸಮರ್ಥರು: ಚಾಮರಾಜನಗರದ ಶಾಸಕರಾಗಿದ್ದಾಗ ವಾಟಾಳ್ ಅವರು ಗಣಿಕಾರಿಕೆಗೆ ಆಸ್ಪದ ನೀಡಿರಲಿಲ್ಲ. ಈಗ ಇಲ್ಲಿ ಗಣಿಗಾರಿಕೆ ಸತತವಾಗಿ ನಡೆದಿದೆ. ಅದನ್ನು ನಿಯಂತ್ರಿಸಬೇಕಾದರೆ ಮತ್ತೆ ಅವರು ಅಧಿಕಾರದಲ್ಲಿ ಸ್ಥಾನಮಾನ ಪಡಯಬೇಕು ಎಂದು ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್ ಮಾತನಾಡಿ, ಪ್ರಸ್ತುತ ದಿನದಲ್ಲಿ ಇಂಗ್ಲಿಷ್ ಪ್ರಭಾವದಿಂದ ನಮ್ಮ ಕನ್ನಡ ಭಾಷೆ ಕಣ್ಮರೆಯಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ನೆರೆ ರಾಜ್ಯದವರ ಹಾವಳಿಯಿಂದ ಗಡಿ ಜಲಗಳ ಸಂರಕ್ಷಣೆಗೆ ವಾಟಾಳ್ ಅವರ ಸೇವೆ ಅವಶ್ಯಕ. ಕನ್ನಡಿಗರ ಧ್ವನಿಯಾಗಿರುವ ಅವರನ್ನು ಪರಿಷತ್ತಿಗೆ ನಾಮಕರಣ ಮಾಡುವುದರಿಂದ ಕನ್ನಡಕ್ಕೆ ಮತ್ತಷ್ಟು ಬಲ ಬರಲಿದೆ ಎಂದರು. ಸಾಹಿತಿ ಬನ್ನೂರು ರಾಜು, ಕನ್ನಡ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಇದ್ದರು.

ದೇವಸ್ಥಾನದ ವಾರ್ಷಿಕೋತ್ಸವಕ್ಕೆ ಚಾಲನೆ
ಮೈಸೂರು: ಹೆಬ್ಬಾಳು ಒಂದನೇ ಹಂತದಲ್ಲಿರುವ ಭೈರವೇಶ್ವರನಗರದ ಶ್ರೀಲಕ್ಷ್ಮೀ ಸೋಮನಳಮ್ಮ ದೇವಸ್ಥಾನದ ಎರಡನೇ ವಾರ್ಷಿಕೋತ್ಸವ ಶುಕ್ರವಾರ ಆರಂಭವಾಯಿತು.
ಶ್ರೀ ಲಕ್ಷ್ಮೀದೇವಿ ಸೋಮಳಮ್ಮನವರ ದೇವಸ್ಥಾನ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬೆಳಗ್ಗೆ ಕೆ.ಆರ್.ಎಸ್ ರಸ್ತೆಯಲ್ಲಿರುವ ಅಣ್ಣಯ್ಯಪ್ಪ ಸಮುದಾಯ ಭವನದ ಗಣಪತಿ ದೇವಸ್ಥಾನದಿಂದ 101 ಕಳಶಗಳನ್ನು ನಾದಸ್ವರ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ತರಲಾಯಿತು. ಮಧ್ಯಾಹ್ನ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸುದರ್ಶನ ಹೋಮ, ಗಣಪತಿ ಪೂಜೆ ನಡೆಯಿತು. ಸಂಜೆ ಲಕ್ಷ್ಮೀ ಹೋಮ, ಶಾಂತಿ ಹೋಮ ಹಾಗೂ ಅಮ್ಮನವರಿಗೆ ಅರಿಶಿನ ಅಲಂಕಾರ ನಡೆಯಿತು.
14 ರಂದು (ಇಂದು) ಬೆಳಗ್ಗೆ 5 ರಿಂದ 10.30 ರವರೆಗೆ ರುದ್ರಾಭಿಷೇಕ ಹಾಗೂ ಪೂರ್ಣಾಹುತಿ ನಡೆಯಲಿದ್ದು, ಮಧ್ಯಾಹ್ನ 12 ಕ್ಕೆ ಅನ್ನಸಂತಪರ್ಣೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಸುಬ್ಬೇಗೌಡ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.