ಸತ್ಯಶೋಧನಾ ಸಮಿತಿ ರಚನೆಗೆ ಆಗ್ರಹ
ಮೈಸೂರು: ಕೆಎಸ್ಆರ್ಟಿಸಿ ನೌಕರರಿಗೆ ಅಧಿಕಾರಿಗಳ ಕಿರುಕುಳ ನೀಡುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನು ಮುಖ್ಯಮಂತ್ರಿಯವರು ರಚಿಸಬೇಕು ಎಂದು ಸಾಹಿತಿಗಳಾದ ಪ್ರೊ.ದೇಜಗೌ, ಡಾ.ಮಳಲಿ ವಸಂತಕುಮಾರ್ ಆಗ್ರಹಿಸಿದರು.
ನೌಕರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದರೂ ಸಾರಿಗೆ ಸಚಿವರು, ಸಂಸ್ಥೆ ಮೇಲಾಧಿಕಾರಿಗಳು ಮೌನ ವಹಿಸಿದ್ದಾರೆ. ಇದರಿಂದ ಕಾರ್ಮಿಕರ ನೋವನ್ನು ಹೇಳಿಕೊಳ್ಳಲು ಯಾರೂ ಇಲ್ಲದಂತಾಗಿದೆ. ಹೀಗಾಗಿ ಸತ್ಯಶೋಧನಾ ಸಮಿತಿ ರಚಿಸುವ ಮೂಲಕ ನೌಕರರ ಸಂಕಷ್ಟಕ್ಕೆ ಪರಿಹಾರ ಸೂಚಿಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನೌಕರರು ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕು. ಇಲ್ಲದಿದ್ದರೆ ನ್ಯಾಯಯುತ ಕೆಲಸ ಮಾಡಿದ್ದರೂ ಶಿಸ್ತು ಕ್ರಮ ಕೈಗೊಳ್ಳುತ್ತಾರೆ. ನೌಕರರನ್ನು ಅಧಿಕಾರಿಗಳು ಸಹೋದರರಂತೆ ನೋಡಿಕೊಳ್ಳಬೇಕು. ಆದರೆ, ಗುಂಪು ಕಟ್ಟಿಕೊಂಡು ಅನ್ಯಾಯ ಎಸಗುತ್ತಿರುವುದು ಸರಿಯಲ್ಲ ಎಂದು ಪ್ರೊ.ದೇಜಗೌ ಖಂಡಿಸಿದರು.
ತುರ್ತು ಸಮಯಗಳಲ್ಲಿ ರಜೆ ಬೇಕಿದ್ದರೆ 48 ಗಂಟೆಗಳ ಮುಂಚೆ ತಿಳಿಸಬೇಕು, ಕಿಯೋಸ್ಕ್ ಯಂತ್ರಗಳಲ್ಲಿ ರಜೆ ದಾಖಲಿಸಲು ಅಧಿಕಾರಿಗಳು ಹೇಳುತ್ತಿರುವುದು ಸರಿಯಲ್ಲ. ಈ ವ್ಯವಸ್ಥೆಯಿಂದ ನೌಕರರಿಗೆ ತೊಂದರೆ ಆಗುತ್ತಿದ್ದು, ಯಂತ್ರಗಳ ಮೂಲಕ ರಜೆ ಪಡೆಯುವ ವ್ಯವಸ್ಥೆಯನ್ನು ತೆಗೆದು ಹಾಕಬೇಕು ಎಂದು ಡಾ. ಮಳಲಿ ವಸಂತಕುಮಾರ್ ಒತ್ತಾಯಿಸಿದರು.
ಕಿರುಕುಳ ಹೆಚ್ಚಳ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ವ.ಚ. ಚನ್ನೇಗೌಡ ಮಾತನಾಡಿ, ಕೆಎಸ್ಆರ್ಟಿಸಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಇತರೆ ಕೆಲಸಗಾರರಿಗೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ. ರಜೆ ನಿರಾಕರಣೆ, ಹೆಚ್ಚಿನ ಕೆಲಸದ ಒತ್ತಡ, ವಾಹನದ ದೋಷದಿಂದ ಆಗುವ ಅವಘಡಕ್ಕೆ ವಿಪರೀತ ದಂಡ, ಅಪಘಾತವಾದ ನೌಕರರಿಗೆ ಐಒಡಿ ನಿರಾಕರಣೆ, ಆರೋಪಣಾ ಪತ್ರ, ಅಮಾನತು, ವರ್ಗಾವಣೆ, ಕೆಲಸದಿಂದ ವಜಾ ಸೇರಿದಂತೆ ತೀವ್ರತರ ಶಿಕ್ಷೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಮನನೊಂದಿರುವ ನೂರಾರು ಕಾರ್ಮಿಕರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಲವು ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನೌಕರರ ಸಂಕಷ್ಟ ಕೇಳುವವರೇ ಇಲ್ಲದಂತಾಗಿದೆ ಎದರು.ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭುಸ್ವಾಮಿ, ರಾಜ್ಯ ಖಜಾಂಚಿ ಕೆ.ಎಸ್.ಎಂ. ಹುಸೇನ್, ಕಸಾಪ ಮೈಸೂರು ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

