ಮೈಸೂರು

ವಿನಾಶದತ್ತ ಪ್ರಾಣಿ ಪಕ್ಷಿ ಸಂಕುಲ

Published On :

ಮೈಸೂರು: ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿದು ಅರಣ್ಯ ನಾಶ ಮಾಡುತ್ತಿರುವುದರಿಂದ ಪ್ರಾಣಿಗಳು ಜನವಸತಿ ಪ್ರದೇಶಗಳತ್ತ ಬರುತ್ತಿವೆ. ಇದು ಮುಂದುವರಿದರೆ ಪ್ರಾಣಿ ಪಕ್ಷಿಗಳ ಸಂಕುಲ ನಾಶವಾಗಿ, ಮುಂದಿನ ಪೀಳಿಗೆಗೆ ಪುಸ್ತಕಗಳಲ್ಲಿ ಮಾತ್ರ ಪ್ರಾಣಿ ಪಕ್ಷಿಗಳನ್ನು ತೋರಿಸಬೇಕಾಗುತ್ತದೆ ಎಂದು 3ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸುರೇಶ್ ಕೋಗಿಲೆಗೆರೆ ಕಳವಳ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮೈಸೂರು ವಕೀಲರ ಸಂಘ, ವಿಕಾಸ ಟ್ರಸ್ಟ್ ಸಂಯುಕ್ತವಾಗಿ ಭಾನುವಾರ ನ್ಯಾಯಾಲಯ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡನೆಟ್ಟು ಮಾತನಾಡಿದ ಅವರು, ಇಂತಹ ಸ್ಥಿತಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಎಲ್ಲರೂ ಗಿಡ ನೆಟ್ಟು ಕಾಡುಗಳನ್ನು ಬೆಳೆಸಿ, ಪ್ರಾಣಿ ಪಕ್ಷಿಗಳನ್ನು ರಕ್ಷಿಸಬೇಕು ಎಂದರು.
ಗಾಳಿ, ಬೆಳಕು, ಮಳೆ ಎಲ್ಲವನ್ನೂ ನೀಡುವ ಪರಿಸರದ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಮ್ಮ ಹಿರಿಯರು ಭವಿಷ್ಯಕ್ಕಾಗಿ ರಸ್ತೆ ಬದಿಗಳಲ್ಲಿ ನೆಟ್ಟಿದ್ದ ಗಿಡಗಳನ್ನು ಬೃಹತ್ ಮರಗಳಾಗಿವೆ. ಆದರೆ, ಅಭಿವೃದ್ಧಿ ನೆಪದಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಕಾಡು ಪ್ರಾಣಿಗಳು ನಾಡಿನತ್ತ ಬರುತ್ತಿವೆ ಎಂದು ಹೇಳಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್ ಮಾತನಾಡಿ, ದೇಶದ 65 ಮಿಲಿಯನ್ ಹೆಕ್ಟೇರ್ ಭೂ ಪ್ರದೇಶದ ಶೇ.25 ಭಾಗದಲ್ಲಿ ಅರಣ್ಯವಿದ್ದು, ಇದನ್ನು ಶೇ.33ಕ್ಕೆ ಹೆಚ್ಚಿಸುವ ಗುರಿ ನೀಡಲಾಗಿದೆ. ಆದರೆ, ನಗರೀಕರಣ, ಕೈಗಾರಿಕಾಭಿವೃದ್ಧಿ ಮೊದಲಾದ ಕಾರಣಗಳಿಂದ ಇರುವ ಅರಣ್ಯವನ್ನೇ ಸಂರಕ್ಷಿಸುವುದು ಕಷ್ಟಕರವಾಗಿದೆ. ಹೀಗಿದ್ದರೂ ಅರಣ್ಯ ಬೆಳೆಸಲು ಸರ್ಕಾರ ಹಲವಾರು ಯೋಜನೆ ಹಮ್ಮಿಕೊಂಡಿದೆ ಎಂದರು.
ಶಾಲಾ ಕಾಲೇಜು, ಆಸ್ಪತ್ರೆ, ನ್ಯಾಯಾಲಯ ಆವರಣ, ಖಾಲಿ ಸ್ಥಳಗಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಜಿಲ್ಲೆಯಲ್ಲಿ ಈ ವರ್ಷ 22 ಸಾವಿರ ಗಿಡ ನೆಡುವ ಗುರಿ ಹೊಂದಲಾಗಿದೆ. ಜೊತೆಗೆ 1 ಲಕ್ಷ ಗಿಡ ನೆಡುವ ಯೋಜನೆಯೂ ಇದೆ ಎಂದು ತಿಳಿಸಿದರು.
ಮೈಸೂರು ವಕೀಲರ ಸಂಘದ ಅಡಾಕ್ ಕಮಿಟಿ ಅಧ್ಯಕ್ಷ ಎಚ್.ವಿ.ಎಸ್. ಮೂರ್ತಿ, ಕಾರ್ಯದರ್ಶಿ ಎಲ್.ಎನ್. ವೆಂಕಟೇಶ್, ಹಿರಿಯ ವಕೀಲರಾದ ಓ.ಶ್ಯಾಂ ಭಟ್, ಸಿ.ಬಸವರಾಜು, ಎಸಿಎಫ್ ಡಿ. ಬಸವರಾಜು, ವಿಕಾಸ ಟ್ರಸ್ಟ್ ಅಧ್ಯಕ್ಷ ಅ.ಮ. ಬಾಸ್ಕರ್, ಕಾರ್ಯದರ್ಶಿ ಕೃಷ್ಣಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.