ರಾಜ್ಯಸಭೆಯಲ್ಲಿ ಕನ್ನಡದ ಗುರುಬಲ ಮೊದ್ಲೇ ಇತ್ತು!
ಮೈಸೂರು: ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿರುವ ಕನ್ನಡಿಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪ್ರತಿಪಕ್ಷ ನಾಯಕನ ಸ್ಥಾನಮಾನ ನೀಡಿಕೆ ಸಂಬಂಧ ವಾದ- ವಿವಾದಗಳು ನಡೆಯುತ್ತಲೇ ಇವೆ. ಆದರೆ ಬಹುಹಿಂದೆಯೇ ಮತ್ತೊಬ್ಬ ಕನ್ನಡಿಗ ಎಂ.ಎಸ್. ಗುರುಪಾದಸ್ವಾಮಿ ಅವರಿಗೆ ರಾಜ್ಯಸಭೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷ ನಾಯಕನ ಗೌರವ ಸಿಕ್ಕಿತ್ತು. ಇದಲ್ಲದೇ ಕನ್ನಡಿಗ ಎಚ್.ಡಿ. ದೇವೇಗೌಡರಿಗೂ ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕ ಹಾಗೂ ಪ್ರಧಾನಿ ಆಗುವ ಯೋಗ ಲಭಿಸಿತ್ತು.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಮಾಲಂಗಿಯವರಾದ ಎಂ.ಎಸ್. ಗುರುಪಾದಸ್ವಾಮಿ ಅವರು 1952ರ ಪ್ರಥಮ ಮಹಾಚುನಾವಣೆಯಲ್ಲಿ ಕಿಸಾನ್ ಮಜ್ದೂರ್ ಪ್ರಜಾಪಾರ್ಟಿಯ ಅಭ್ಯರ್ಥಿಯಾಗಿ ಮೈಸೂರು ಲೋಕಸಭಾ ಕ್ಷೇತ್ರದಿಛಂದ ಸ್ಪರ್ಧಿಸಿ, ಅಂದಿನ ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕ ಎಚ್.ಸಿ.ದಾಸಪ್ಪ ಅವರನ್ನು ಸೋಲಿಸಿ, ಆಯ್ಕೆಯಾಗಿದ್ದರು. 1957ರ ಎರಡನೇ ಮಹಾ ಚುನಾವಣೆಯಲ್ಲಿ ಅವರು ಪ್ರಜಾ ಸೋಷಲಿಸ್ಟ್ ಪಾರ್ಟಿ ಅಭ್ಯರ್ಥಿಯಾಗಿ ಸೋತರು. ಇದಾದ ನಂತರ ಅವರು 1977ರಲ್ಲಿ ಭಾರತೀಯ ಲೋಕದಳ, 1980 ರಲ್ಲಿ ಜನತಾಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು.
ಆದರೆ ಗುರುಪಾದಸ್ವಾಮಿ ಅವರು ಕರ್ನಾಟಕದಿಂದ ಮೂರು ಬಾರಿ, ಉತ್ತರ ಪ್ರದೇಶದಿಂದ ಒಂದು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಕೇಂದ್ರದಲ್ಲಿ ಇಂದಿರಾಗಾಂಧಿ ಮತ್ತು ವಿ.ಪಿ.ಸಿಂಗ್ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. 1971ರ ಮಾರ್ಚ್ನಿಂದ 1972ರ ಏಪ್ರಿಲ್ವರೆಗೆ ಗುರುಪಾದಸ್ವಾಮಿ ಅವರು ಪ್ರಥಮ ಬಾರಿಗೆ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಸ್ಥಾನ ಅಲಂಕರಿಸಿದ್ದರು. ಆಗ ಪ್ರಧಾನಿಯಾಗಿದ್ದವರು ಇಂದಿರಾಗಾಂಧಿ. ಎರಡನೇ ಬಾರಿಗೆ ಅಂದರೆ 1991ರ ಜೂ.28 ರಿಂದ ಜುಲೈ 21 ರವರೆಗೆ ಅವರು ಪ್ರತಿಪಕ್ಷ ನಾಯಕರಾಗಿದ್ದರು. ಆಗ ಪ್ರಧಾನಿ ಆಗಿದ್ದವರು ರಾಜೀವ್ಗಾಂಧಿ.
ಆಡಳಿತ ಪಕ್ಷದ ನಾಯಕರು: ವಿ.ಪಿ. ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಅಂದರೆ 1989ರ ಡಿಸೆಂಬರ್ನಿಂದ 1990ರ ನವೆಂಬರ್ವರೆಗೆ ಗುರುಪಾದಸ್ವಾಮಿ ಅವರು ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು. ಲೋಕಸಭಾ ಚುನಾವಣೆಗೆ ಸ್ಪರ್ಧಿಸದಿದ್ದರೂ ಅನಿರೀಕ್ಷಿತವಾಗಿ ಪ್ರಧಾನಿಯಾಗಿ ಆಯ್ಕೆಯಾದ ಎಚ್.ಡಿ. ದೇವೇಗೌಡರು 1996ರ ನವೆಂಬರ್ನಿಂದ 1997ರ ಏಪ್ರಿಲ್ವರೆಗೆ ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ನಾಯಕರೂ ಆಗಿದ್ದರು. ಆಗ ಅವರು ಕರ್ನಾಟಕರಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಕನ್ನಡಿಗರು ಲೋಕಸಭೆಯಲ್ಲಿ ಸ್ವೀಕರ್ ಮತ್ತು ಡೆಪ್ಯೂಟಿ ಸ್ಪೀಕರ್, ರಾಜ್ಯಸಭೆಯಲ್ಲಿ ಸಭಾಪತಿ, ಉಪ ಸಭಾಪತಿ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಜನತಾ ಪಕ್ಷದ ಕೆ.ಎಸ್. ಹೆಗ್ಡೆ ಅವರು 1977ರ ಜುಲೈ 27 ರಿಂದ 1980ರ ಜ.15 ರವರೆಗೆ ಲೋಕಸಭೆಯ ಸ್ಪೀಕರ್ ಆಗಿದ್ದರು. ಬಿಜೆಪಿಯ ಎಸ್. ಮಲ್ಲಿಕಾರ್ಜುನಯ್ಯ ಅವರು 1991ರ ಆ.13 ರಿಂದ 1996ರ ಮೇ 10 ರವರೆಗೆ ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ಆಗಿದ್ದರು.
ಕಾಂಗ್ರೆಸ್ನ ವೈಲೆಟ್ ಆಳ್ವ ಅವರು 1962ರ ಏ.19 ರಿಂದ 1969ರ ನ.16 ರವರೆಗೆ ಎರಡು ಅವಧಿಗೆ ರಾಜ್ಯಸಭೆಯ ಉಪ ಸಭಾಪತಿ (ಡೆಪ್ಯೂಟಿ ಚೇರ್ಮನ್) ಆಗಿದ್ದರು. ಅದೇ ರೀತಿ ಕಾಂಗ್ರೆಸ್ನ ಕೆ.ರೆಹಮಾನ್ ಖಾನ್ ಅವರು 2004ರ ಜು.22 ರಿಂದ 2012ರ ಏ.2 ರವರೆಗೆ ಎರಡು ಅವಧಿಗೆ ರಾಜ್ಯಸಭೆಯ ಉಪ ಸಭಾಪತಿ ಆಗಿದ್ದರು. ಉಪ ರಾಷ್ಟ್ರಪತಿಗಳೇ ರಾಜ್ಯಸಭೆಯ ಚೇರ್ಮನ್ ಆಗಿರುತ್ತಾರೆ. ಹೀಗಾಗಿ ಉಪ ರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿ ಅವರು 1974ರ ಆ.31 ರಿಂದ 1989ರ ಆ.30 ರವರೆಗೆ ರಾಜ್ಯಸಭೆಯ ಚೇರ್ಮನ್ ಆಗಿದ್ದರು. ಜತ್ತಿ ಅವರು ಹಂಗಾಮಿ ರಾಷ್ಟ್ರಪತಿಯಾಗಿಯೂ ಕಾರ್ಯನಿರ್ವಹಿಸಿದ್ದರು.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

