ದಸರಾ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಆರಂಭ ಆಗುವುದರೊಳಗೆ ಪುರಭವನ, ರಾಜಪಥ ಮತ್ತು ಅರಮನೆ ಸುತ್ತಲಿನ ವಿವಿಧ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮ.ವಿ. ರಾಮಪ್ರಸಾದ್ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಗುರುವಾರ ಸಭೆ ನಡೆಸಿದ ಅವರು, ನರ್ಮ್ ಯೋಜನೆ ಮತ್ತು ಮುಖ್ಯಮಂತ್ರಿಗಳ ರು. 100 ಕೋಟಿ ಅನುದಾನದಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ದಸರಾ ಆರಂಭ ಆಗುವುದರ ಒಳಗೆ ಅಂದರೆ ಆಗಸ್ಟ್ ಅಂತ್ಯದ ವೇಳೆಗೆ ಪೂರ್ಣಗೊಳಿಸಬೇಕು. ಈಗಾಗಲೆ ತಡವಾಗಿದೆ. ಕಳೆದ ದಸರೆಗೂ ಮುನ್ನ ಆರಂಭವಾದ ಕಾಮಗಾರಿ ಇದುವರೆಗೂ ಮುಗಿದಿಲ್ಲ. ಇದರಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪುರಭವನ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆ ಪಡೆದಿರುವ ಛಾಬ್ರಾ ಅಸೋಸಿಯೇಟ್ಸ್ನ ಗುತ್ತಿಗೆದಾರರು ಮುಂದಿನ 15 ದಿನಗಳ ಒಳಗೆ ಪುರಭವನದ ಒಳಾಂಗಣ ಕಾಮಗಾರಿ, ಆಡಿಯೋ ವ್ಯವಸ್ಥೆ, ಮರದ ನೆಲಹಾಸು, ಹವಾನಿಯಂತ್ರಕ, ಆಸನ ವ್ಯವಸ್ಥೆ, ಶೌಚಾಲಯ ಕಾಮಗಾರಿಯನ್ನು ಪೂರ್ಣಗೊಳಿಸುತ್ತೇನೆ ಎಂದು ಒಪ್ಪಿಗೆ ನೀಡಿದರು. ಅಲ್ಲದೆ ಅರಮನೆ ಸುತ್ತಲಿನ ಕಾಮಗಾರಿಯನ್ನೂ ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುದಾಗಿ ತಿಳಿಸಿದರು.
ರಾಜಪಥ ಕಾಮಗಾರಿ 700 ಮೀ. ಪೂರ್ಣವಾಗಿದೆ. ಉಳಿದ 700 ಮೀ. ಕಾಮಗಾರಿಯನ್ನು ದಸರಾ ಒಳಗೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಭೆಗೆ ಭರವಸೆ ನೀಡಿದರು. ಈ ವೇಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಮ.ವಿ. ರಾಮಪ್ರಸಾದ್, 700 ಮೀ. ಕಾಮಗಾರಿಗೆ 3 ವರ್ಷ ತೆಗೆದುಕೊಂಡಿದ್ದೀರಿ. ಉಳಿದ 700 ಮೀ. ಕಾಮಗಾರಿಯನ್ನು 2 ತಿಂಗಳಲ್ಲಿ ಪೂರ್ಣಗೊಳಿಸುತ್ತೀರಿ ಎಂಬ ನಂಬಿಕೆ ಇಲ್ಲ ಎಂದರು.
ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ನಿಕಟ ಸಂಪರ್ಕವೆ ಇಲ್ಲ. ಈಗಲಾದರೂ ಇರುವ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಿ, ಇಬ್ಬರ ಜಗಳದಲ್ಲಿ ಮಗು ಬಡವಾಯಿತು ಎಂಬಂತೆ ಆಗಬಾರದು. ಪುರಭವನಕ್ಕೆ ಐಎಸ್ಐ ಬ್ರಾಂಡ್ನ ಹವಾನಿಯಂತ್ರಕವನ್ನೆ ಅಳವಡಿಸಿ, ಕಾಮಗಾರಿಯಲ್ಲಿ ಲೋಪ ಆಗಬಾರದು. ಅರಮನೆ ಸುತ್ತಲಿನ ಕೆಲವು ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ ಎಂದು ಅವರು ಹೇಳಿದರು.
ಸೌಲಭ್ಯ ಕಲ್ಪಿಸಿ: ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇಡಬ್ಲ್ಯೂಎಸ್ ಮನೆಗಳನ್ನು ಕೂಡಲೆ ನಿರ್ಮಿಸಿ, ಮೂಲಭೂತ ಸೌಲಭ್ಯ ಕಲ್ಪಿಸಬೇಕು. ನಿಗದಿತ ದಿನಾಂಕದೊಳಗೆ ಮನೆಗಳ ನಿರ್ಮಾಣ ಪೂರ್ಣಗೊಳ್ಳಬೇಕು. ಮಂದಗತಿಯಲ್ಲಿ ಎಲ್ಲಾ ಕಾಮಗಾರಿಗಳು ಸಾಗುತ್ತಿರುವುದರಿಂದ ಸಾರ್ವಜನಿಕರು ಪಾಲಿಕೆ ಸದಸ್ಯರನ್ನು ನಿಂದಿಸುವಂತೆ ಆಗಿದೆ. ನಿಮ್ಮ ಬೇಜಾವಬ್ದಾರಿ ತನಕ್ಕೆ ನಾವು ಹೊಣೆ ಅಲ್ಲ. ಸುಮ್ಮನೆ ಶಾಲೆಯ ವಿದ್ಯಾರ್ಥಿಗಳಂತೆ ನಾವು ಕೇಳಿದ ಪ್ರಶ್ನೆಗೆ ಉತ್ತರಿಸಿ ಕೂರುವುದಲ್ಲ. ನೀವು ಗುತ್ತಿಗೆದಾರರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿ ಕೂಡಲೆ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಪ್ರತ್ಯೇಕ ಅಧಿಕಾರಿ: ಪುರಭವನ ಕಾಮಗಾರಿಗೆ ಪ್ರತ್ಯೇಕವಾಗಿ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಗುತ್ತಿಗೆದಾರರ ಬೆನ್ನುಬಿದ್ದು ಕೆಲಸ ಮಾಡಿಸಿ, ದಸರಾ ಒಳಗೆ ಪುರಭವನ ಉದ್ಘಾಟನೆಗೊಂಡು ಅಲ್ಲಿ ದಸರಾ ಕಾರ್ಯಕ್ರಮಗಳು ನಡೆಯುವಂತೆ ಆಗಬೇಕು ಎಂದರು.
ಸಮಿತಿ ಸದಸ್ಯ ಶಿವಕುಮಾರ್ ಮಾತನಾಡಿ, ರಾಜಮಾರ್ಗ ಕಾಮಗಾರಿ ಸಂಬಂಧ ಅಧಿಕಾರಿಗಳು ಸುಮ್ಮನೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಮಿತಿ ಸದಸ್ಯರಾದ ಅನುಸೂಯ, ಆರ್. ನಾಗರಾಜು, ಅಯಾಜ್ ಪಾಷ, ಹಾಜಿ ಫೈರೋಜ್, ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

