ಸಿಕ್ಕಿಬಿದ್ದರು ಪಂಪ್ಸೆಟ್ ಕಳ್ಳರು
ಹುಣಸೂರು: ತಾಲೂಕಿನಾದ್ಯಂತ ಪಂಪ್ಸೆಟ್ ಮೋಟಾರ್ಗಳನ್ನು ಸರಣಿ ಕಳವು ಮಾಡಿದ್ದ ಜಾಲ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ಮೊಹಮ್ಮದ್ ಶಿಕಾಲ್ ಎಂಬವರ ಪುತ್ರ ಮೌಲ (32) ಬಂಧಿತ ಆರೋಪಿ. ಜೂ.22ರ ರಾತ್ರಿ ಕಟ್ಟೆಮಳಲವಾಡಿಯ ಕೃಷ್ಣ, ಅಜ್ಗರ್ ಪಾಷಾ ಎಂಬವರ ಜಮೀನಿನಲ್ಲಿ ಪಂಪ್ಸೆಟ್ ಕಳವು ಮಾಡಿದ್ದು, ಇದೇ ರೀತಿಯಲ್ಲಿ ತಾಲೂಕಿನ ವಿವಿಧೆಡೆ ಕಳ್ಳತನವಾಗಿರುವ ಬಗ್ಗೆ ದೂರು ದಾಖಲಾಗಿತ್ತು.
ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅನುಮಾನವಿದ್ದ ಮೈಸೂರಿನ ಶಾಂತಿ ನಗರದ ಅಪ್ರೋಜ್ ಹಾಗೂ ಸಮಿ ಉಲ್ಲಾ ಎಂಬವರನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಸರಣಿ ಕಳ್ಳತನ ಮಾಡಿದ್ದ ಜಾಲ ಪತ್ತೆಯಾಗಿದೆ. ಬಳಿಕ ತಂಡದ ಪ್ರಮುಖ ಆರೋಪಿ ಮೌಲನನ್ನು ಬಂಧಿಸಿದ್ದಾರೆ. ತಂಡದ ಇತರೆ ಸದಸ್ಯರಾದ ಅಕ್ರಮ್, ರಿಯಾಜ್, ಮಜೀದ್ ತಲೆಮರೆಸಿಕೊಂಡಿದ್ದಾರೆ.
ಹಸು ಕಳ್ಳತನ ಮಾಡಿದ್ದವನ ಬಂಧನ
ಹುಣಸೂರು: ಮನೆಮುಂದೆ ಕಟ್ಟಿದ್ದ ಇಲಾತಿ ಹಸುಗಳನ್ನು ಕದ್ದೊಯ್ದಿದ್ದ ಆರು ಮಂದಿಯನ್ನು ಹಸುವಿನ ಮಾಲೀಕನೆ ಪತ್ತೆ ಮಾಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹಾಸನದ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣದ ಲುಕಾಸ್ (50) ಮತ್ತವರ ಮಗ ಸಂತೋಷ್ (23), ಜಾನ್ (25), ಥಾಮಸ್(20), ಅಭಿಲಾಶ್(24), ಫಿಲಿಕ್ಸ್(18) ಹಾಗೂ ಹಾಸನ ಜಿಲ್ಲೆಯ ಗಾಡೇನಹಳ್ಳಿ ನಿವಾಸಿ ಟಾಟಾಎಸ್ ವಾಹನದ ಚಾಲಕ ಜಾನ್ (28) ಬಂಧಿತ ಆರೋಪಿಗಳು. ಹುಣಸೂರು ತಾಲೂಕಿನ ತಟ್ಟೆಕೆರೆ ಗ್ರಾಪಂ ವ್ಯಾಪ್ತಿಯ ಕೂಡ್ಡಲೂರಿನ ನಿವಾಸಿ ಎಂ. ಜಾರ್ಜ್ ತಮ್ಮ ಮನೆಯ ಮುಂದೆ ಕಟ್ಟಿಹಾಕಿದ್ದ ಒಂದು ಲಕ್ಷ ರು. ಬೆಲೆಬಾಳುವ ಹಸುಗಳನ್ನು ಜೂ.18ರ ರಾತ್ರಿ ಕಳ್ಳತನ ಮಾಡಿದ್ದರು. ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಜಾರ್ಜ್ ಅಕ್ಕ ಪಕ್ಕ ಸಂತೆಗಳಲ್ಲಿ ಹಸುವನ್ನು ಹುಡುಕಿದರು. ಚನ್ನರಾಯಪಟ್ಟಣದ ಸಂತೆಗೂ ತೆರಳಿ ಪರಿಶೀಲಿಸುತ್ತಿದ್ದಾಗ ಗಾಬರಿಯಾದ ವ್ಯಕ್ತಿಯೊಬ್ಬರು ತಪ್ಪಿಸಿಕೊಳ್ಳಲು ಯತ್ನಿಸಿದರು. ಕೂಡಲೇ ಸ್ಥಳೀಯರ ಸಹಾಯದಿಂದ ಜಾರ್ಜ್ ಚಾಲಕ ಜಾನ್ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು. ಚಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ಕಳ್ಳತನ ಮಾಡಿರುವುದು ಸಾಬೀತಾಗಿದೆ.
ಅನುಚಿತ ವರ್ತನೆ ಮಾಡಿದ ಯುವಕನ ಬಂಧನ
ಹುಣಸೂರು: ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಪಟ್ಟಣ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪಟ್ಟಣದ ವಿ.ಪಿ. ಬೋರೆ ಬಡಾವಣೆಯಲ್ಲಿ ಚಿಲ್ಲರೆ ಅಂಗಡಿ ನಡೆಸುತ್ತಿದ್ದ ಮಹಿಳೆಯೊಂದಿಗೆ ಅನ್ಯಕೋಮಿನ ಯುವಕನೊಬ್ಬ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಬಡಾವಣೆ ನಿವಾಸಿಗಳು ಯುವಕನ ಬೆಂಬಲಿಗರ ಜೊತೆ ಮಾತಿನ ಚಕಮಕಿಗೆ ಇಳಿದರು. ವಿಷಯ ತಿಳಿದ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದರು. ಹೆಚ್ಚುವರಿ ಎಸ್ಪಿ ಪ್ರದೀಪ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಬಂದೋಬಸ್ತ್ ಕುರಿತಂತೆ ಪರಿಶೀಲಿಸಿದರು. ಈ ವೇಳೆ ಡಿವೈಎಸ್ಪಿ ಧನಂಜಯ, ಪಿರಿಯಾಪಟ್ಟಣ, ಎಚ್.ಡಿ. ಕೋಟೆ ವೃತ್ತ ನಿರೀಕ್ಷಕರು, ಹುಣಸೂರು ವೃತ್ತ ನಿರೀಕ್ಷಕ ಮಲ್ಲೇಶ್, ಪಟ್ಟಣ ಠಾಣೆ ಎಸ್ಐ ಲವ, ಗ್ರಾಮಾಂತರ ಠಾಣೆಯ ಎಸ್.ಐ. ರಾಘವೇಂದ್ರಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

