2030ರೊಳಗೆ ಇಂಧನ ಸಿಗುವುದೇ ದುಸ್ತರ
ಮೈಸೂರು: ಜನಸಂಖ್ಯಾ ಸ್ಫೋಟ ಮತ್ತು ಕೈಗಾರಿಕರಣದಿಂದಾಗಿ ಕಳೆದ ಒಂದು ಶತಮಾನದಲ್ಲಿ ಶಕ್ತಿಯ ಬಳಕೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಯುವವಿಜ್ಞಾನಿ ಹಾಗೂ ಐಐಟಿ ಸಹಾಯಕ ಪ್ರಾಧ್ಯಾಪಕ ಡಾ.ಪಿ. ಹರಿಪ್ರಸಾದ್ ಹೇಳಿದರು. ಮೈಸೂರ್ ಸೈನ್ಸ್ ಫೌಂಡೇಷನ್ ವತಿಯಿಂದ ಕಲಾಮಂದಿರದ ಮನೆಯಂಗಳದಲ್ಲಿ ನಡೆದ 13 ವಿಜ್ಞಾನ ಉಪನ್ಯಾಸ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.
ಮಾನವನ ಐಷಾರಾಮಿ ಜೀವನಕ್ಕಾಗಿ ನೈಸರ್ಗಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಇತ್ಯಾದಿಗಳ ಬಳಕೆ ಅಧಿಕವಾಗಲಿದೆ. ಇದರಿಂದಾಗಿ 1980 ರಿಂದ 2004 ರವರೆಗೆ ಈ ಇಂಧನಗಳ ಬಳಕೆಯಲ್ಲಿ ಶೇ.50ರಷ್ಟು ಹೆಚ್ಚಾಗಿದೆ. 2030 ರೊಳಗೆ ಈ ಇಂಧನಗಳ ಬಳಕೆ ಹೆಚ್ಚಾಗಲಿದ್ದು, ಇಂಧನಗಳು ದೊರೆಯುವುದೇ ಕಷ್ಟವಾಗುತ್ತದೆ. ಅಷ್ಟೇ ಅಲ್ಲ ಇಂಧನಗಳ ಅಧಿಕ ಬಳಕೆಯಿಂದ ಪರಿಸರಕ್ಕೆ ಬಿಡುಗಡೆಯಾಗುತ್ತಿರುವ ಅಧಿಕ ಪ್ರಮಾಣದ ಇಂಗಾಲದ ಡೈ ಆಕ್ಸೈಡ್ ಜಾಗತಿಕ ತಾಪಮಾನ ಹೆಚ್ಚಿಸುತ್ತಿದೆ ಎಂದರು. ಆದ್ದರಿಂದ ಈ ಇಂಧನಗಳಿಗೆ ಪರ್ಯಾಯ ಪರಿಸರ ಸ್ನೇಹಿ ಇಂಧನಗಳನ್ನು ಬಳಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಇಂಧನಗಳಾದ ಸೌರಶಕ್ತಿ, ವಾಯುಶಕ್ತಿ, ಜಲಶಕ್ತಿ, ಉಷ್ಣಶಕ್ತಿಯನ್ನು ಬಳಕೆ ಮಾಡುತ್ತಿದ್ದೇವಾದರೂ, ಇವುಗಳಿಂದ ಉತ್ಪತ್ತಿಯಾದ ಶಕ್ತಿ ಅವಶ್ಯವಿರುವ ಶಕ್ತಿಯ ಕೇವಲ ಶೇ.3.75 ರಷ್ಟು ಪೂರೈಸಲು ಮಾತ್ರ ಸಾಧ್ಯವಾಗುತ್ತಿದೆ ಎಂದು ತಿಳಿಸಿದರು. ಫೌಂಡೇಷನ್ ಅಧ್ಯಕ್ಷ ಸಿ.ಕೃಷ್ಣೇಗೌಡ, ಉಪಾಧ್ಯಕ್ಷ ಡಾ.ಟಿ.ಶಿವಲಿಂಗಸ್ವಾಮಿ, ಕಾರ್ಯದರ್ಶಿ ಜಿ.ಬಿ. ಸಂತೋಷ್ಕುಮಾರ್, ವೈಜಯಂತಿ, ಕಾಂತರಾಜು, ಮಹದೇವಪ್ಪ ಇದ್ದರು.
'ಕಂದಾಚಾರದಿಂದ ಹೊರಬರಲು ಸಾಧ್ಯವಾಗಿಲ್ಲ'
ಮೈಸೂರು: ಕಂದಾಚಾರದ ವಿರುದ್ಧ ಹನ್ನೆರಡನೆ ಶತಮಾನದಲ್ಲಿಯೆ ಧ್ವನಿ ಎತ್ತಿದ್ದರೂ ಇನ್ನೂ ಅದರಿಂದ ನಾವು ಬಿಡುಗಡೆ ಹೊಂದಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಮ.ಗು. ಸದಾನಂದಯ್ಯ ಹೇಳಿದರು.
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕುದುರೆಮಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ, ದತ್ತಿ ಉಪನ್ಯಾಸ ಮತ್ತು ವಚನಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕಂದಾಚಾರದ ವಿರುದ್ಧ ಹನ್ನೆರಡನೆ ಶತಮಾನದಲ್ಲಿಯೆ ಶರಣರು ಧ್ವನಿ ಎತ್ತಿ, ವೈಜ್ಞಾನಿಕ ಮನೋಭಾವ ಬೆಳೆಸಲು, ವಾಸ್ತವಿಕತೆಯ ನೆಲೆಗಟ್ಟಿನಲ್ಲಿ ಯೋಚಿಸುವಂತೆ ಮಾಡಲು ಮಾಡಿದರು. ಮೌಢ್ಯಕ್ಕೆ ಬಲಿಯಾದರೆ ಸೃಜನಶೀಲತೆ ನಾಶವಾಗುತ್ತದೆ. ಆಧುನಿಕತೆಯಿಂದ ದೂರ ಇರಬೇಕಾಗುತ್ತದೆಮನುಷ್ಯ, ಮನುಷ್ಯನ ಮೇಲೆ ನಂಬಿಕೆ ಇಲ್ಲದಂತೆ ಆಗಿದೆ. ಬದಲಿಗೆ ಮರ, ನೀರು, ಕಲ್ಲು ನಂಬುವಂತೆ ಆಗಿದೆ. ಶಾಲಾ ಮಕ್ಕಳು ಪ್ರತಿದಿನ ಒಂದೊಂದು ವಚನ ಕಲಿತರೂ ಸಾಕು ಎಂದು ಅವರು ಹೇಳಿದರು. ಸಮಾಜ ಸೇವಕ ಕೆ.ಎಂ. ಶಿವಶಂಕರ್, ಎಸ್ಡಿಎಂಸಿ ಅಧ್ಯಕ್ಷ ರಾಜು ಇದ್ದರು.
ಯೂತ್ ಕ್ಲಬ್ ಉದ್ಘಾಟನೆ 6ಕ್ಕೆ
ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯವು ಯೂತ್ ಕ್ಲಬ್ನ ಉದ್ಘಾಟನೆಯನ್ನು ಜು. 6ರ ಬೆಳಗ್ಗೆ 10ಕ್ಕೆ ಮೃಗಾಲಯ ಸಭಾಂಗಣದಲ್ಲಿ ಆಯೋಜಿಸಿದೆ. ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ಎನ್. ಅಜಯ್ ನಾಗಭೂಷಣ್ ಯೂತ್ ಕ್ಲಬ್ ಉದ್ಘಾಟಿಸುವರು. ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್. ಸುರೇಶ್ ಅತಿಥಿಯಾಗಿ ಭಾಗವಹಿಸುವರು ಎಂದು ಮೃಗಾಲಯ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

