ಮೈಸೂರು

ಅಪಘಾತ ಪ್ರಕರಣ ಹೆಚ್ಚಳ; ಡಾ. ಸಲೀಂ ಆತಂಕ

Published On :

ಮೈಸೂರು: ಇತ್ತೀಚೆಗೆ ಸಮಾಜದಲ್ಲಿ ಆತ್ಮಹತ್ಯೆ ಹಾಗೂ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ.ಎ. ಸಲೀಂ ಆತಂಕ ವ್ಯಕ್ತಪಡಿಸಿದರು.
ಕಾವೇರಿ ಆಸ್ಪತ್ರೆ, ಫೋರ್ಟಿಸ್ ಕಾವೇರಿ ಹೃದಯ ಆಸ್ಪತ್ರೆ, ಭಾರತೀಯ ಅರವಳಿಕೆ ತಜ್ಞರ ಸೊಸೈಟಿ
ಹಾಗೂ ಭಾರತೀಯ ತುರ್ತು ಔಷಧೋಪಚಾರ ಸೊಸೈಟಿ ಮೈಸೂರು ಶಾಖೆಯ ಸಂಯುಕ್ತಾಶ್ರಯದಲ್ಲಿ ಮುಂದುವರೆದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಿಷಶಾಸ್ತ್ರ ಚಿಕಿತ್ಸೆ ಮತ್ತು ತುರ್ತು ಕ್ರಮ ಎಂಬ ವಿಷಯ ಕುರಿತ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.  
ಭಾರತದಲ್ಲಿ ಅಪಘಾತ ಹಾಗೂ ಆತ್ಮಹತ್ಯೆಗಳ ಸಂಖ್ಯೆ ಅಧಿಕವಾಗಿದ್ದು, ಇದರಲ್ಲಿ ಸಾಯುವವರ ಸಂಖ್ಯೆಯಲ್ಲಿ ಅಪಘಾತ ಕಾರಣ ಮೊದಲ ಸ್ಥಾನದಲ್ಲಿದ್ದರೆ, ಆತ್ಮಹತ್ಯೆ ಎರಡನೇ ಸ್ಥಾನ ಪಡೆದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ವಿಚಾರಣೆ ಮಾಡಿದಾಗ, ಅವರು ಭಾವಾವೇಶಕ್ಕೆ ಒಳಗಾದ ಸಂದರ್ಭದಲ್ಲಿ ಮಾರ್ಗದರ್ಶನದ ಕೊರತೆ ಕಂಡುಬಂದಿದೆ. ಆದ್ದರಿಂದ ವೈದ್ಯರು ಔಷಧೋಪಚಾರದ ಜತೆಗೆ ಅವರ ಸಮಾಲೋಚನೆ ನಡೆಸಿ ಮನಸ್ಸು ಪರಿವರ್ತಿಸುವಲ್ಲಿಯೂ ಸಹಕರಿಸಬೇಕು ಎಂದರು.
ಆತ್ಮಹತ್ಯೆ ಯತ್ನ ಅಪರಾಧ ಪ್ರಕರಣವಾಗಿರುವುದರಿಂದ ಪೊಲೀಸರು ಸಹ ವ್ಯಕ್ತಿಗಳ ವಿಚಾರಣೆಗೆ ಮುಂದಾಗುವರು. ಜೀವನದಲ್ಲಿ ಏನೇ ಸಂಕಷ್ಟಗಳು ಎದುರಾದರೂ, ಅವುಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಹೊಂದಬೇಕು. ಈ ದಿಸೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸುವ ವ್ಯಕ್ತಿಯನ್ನು ಉಳಿಸುವ ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ವೈದ್ಯರು ಮಾಡಬೇಕಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ವಿವಿಗಳ ಸಂಶೋಧನೆಗೆ ವೈದ್ಯರು ಸಹ ಕೈಜೋಡಿಸುವ ಮೂಲಕ, ಮನುಷ್ಯರ ಜೀವ ಉಳಿಸುವ ಔಷಧಗಳನ್ನು ಕಂಡು ಹಿಡಿಯಲು ಸಹಕರಿಸಬೇಕು ಎಂದರು. ವಿಷ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಡಾ. ವಿ.ವಿ. ಪಿಳ್ಳೆ, ನಾರಾಯಣ ಹೃದಯಾಲಯದ ಡಾ. ಜೆಕೊಬ್ ವರ್ಗೀಸ್, ಐಎಸ್‌ಸಿಸಿಎಂ ಕಾರ್ಯದರ್ಶಿ ಡಾ.ಆರ್. ರಂಗನಾಥ್ ಹಾಗೂ ಸದಸ್ಯ ಡಾ. ಆರ್. ವೈದ್ಯನಾಥನ್ ವಿಷಯ ಕುರಿತು ಮಾತನಾಡಿದರು. ಕಾವೇರಿ ಆಸ್ಪತ್ರೆಯ ಅಧ್ಯಕ್ಷ ಡಾ. ಜಿ.ಆರ್. ಚಂದ್ರಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.