ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಬೇಡ
ಕ.ಪ್ರ.ವಾರ್ತೆ ಮೈಸೂರು ಮಾ. 2
ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಮಾಡಬಾರದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇದೌಡ ಮನವಿ ಮಾಡಿದರು.
ರಾಮಕೃಷ್ಣನಗರದ ಎಚ್ ಬ್ಲಾಕ್ನ ರೂಬಿ ಬೇಕರಿ ಬಳಿ ಭಾನುವಾರ ತಮ್ಮ ಶಾಸಕರ ಅನುದಾನದಿಂದ ನಗರದಲ್ಲಿಯೇ ಪ್ರಥಮವಾಗಿ ನಿರ್ಮಿಸಿರುವ ವಿವಿಧ ರಸ್ತೆಗಳ ನಾಮಫಲಕ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿ- ಹೀಗೆ ರಾಜಕೀಯ ಪಕ್ಷಗಳು ಚುನಾವಣೆಗೆ ಸೀಮಿತವಾಗಿರಬೇಕು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಟ್ಟಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕೇವಲ ಎಲ್ಲ ಕ್ಷೇತ್ರಗಳ ಭ್ರಷ್ಟಾಚಾರದ ಬಗ್ಗೆ ಮಾತನಾಡಿ ನಮ್ಮ ಸಮಯ ವ್ಯರ್ಥ ಮಾಡುತ್ತಿದ್ದೇವೆ. ಇದರ ಬದಲಿಗೆ ಒಳ್ಳೆಯವರ ಬಗ್ಗೆ, ಪ್ರಾಮಾಣಿಕರ ಬಗ್ಗೆ ಮಾತನಾಡೋಣ. ಅಂಥವರ ಜೊತೆ ಸೇರೋಣ. ಆ ಮೂಲಕ ಜನರಿಗೆ ಬೇರಿಯದೇ ರೀತಿಯ ಸಂದೇಶ ನೀಡೋಣ ಎಂದರು.
ಬಡಾವಣೆಯ ವ್ಯಾಪ್ತಿಯಲ್ಲಿರುವ ಸಾಲುಮರದ ತಿಮ್ಮಕ್ಕ ಹೆಸರಿನ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗುವುದು. ಅದೇ ರೀತಿ ಲಿಂಗಾಂಬುದಿ ಕೆರೆಯ ಪರಿಸರವನ್ನು ಪ್ರವಾಸೋದ್ಯಮವನ್ನು ಗಮನದಲ್ಲಿಟ್ಟುಕೊಂಡು, ನಾಗರಿಕರಿಗೆ ಯೋಗ, ಧ್ಯಾನ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಲಾಗುವುದು. ರೂಬಿ ಬೇಕರಿ ಬಳಿ ಹೈಮಾಸ್ಟ್ ದೀಪ, ಬಡಾವಣೆಯಲ್ಲಿ ಮತ್ತೊಂದು ಬಸ್ ತಂಗುದಾಣ ನಿರ್ಮಿಸಲಾಗುವುದು. ಬಡಾವಣೆಯಲ್ಲಿ ಸದ್ಯಕ್ಕೆ ತ್ಯಾಜ್ಯ ಸುರಿಯುತ್ತಿರುವ ಜಾಗವನ್ನು ಮಕ್ಕಳ ಕ್ರೀಡಾ ಚಟುವಟಿಕೆಗಳ ಬಳಕೆಗೆ ಅನುಕೂಲವಾಗುವಂತೆ ಸ್ವಚ್ಛಗೊಳಿಸಲಾಗುವುದು. ಬಾಕಿ ಉಳಿದಿರುವ ಎರಡು ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಲೋಕಸಭಾ ಚುನಾವಣೆ ನಂತರ ಎಲ್ಲ ಅಭಿವೃದ್ಧಿ ಕಾರ್ಯಗಳು ಆರಂಭವಾಗಲಿವೆ. ನಗರಪಾಲಿಕೆ ಹಾಗೂ ಎಂಡಿಎದಿಂದ ಆಗಬೇಕಿರುವ ಎಲ್ಲ ಕೆಲಸಗಳನ್ನು ಹಂತ, ಹಂತವಾಗಿ ಮಾಡಿಸಿಕೊಡುತ್ತೇನೆ. ಈ ಆರ್ಥಿಕ ವರ್ಷದಲ್ಲಿ ಶೇ.70ರಷ್ಟಾದರೂ ಕಾಮಗಾರಿಗಳು ಪೂರ್ಣವಾಗುವಂತೆ ನೋಡಿಕೊಳ್ಳುತ್ತೇನೆ ಎಂದರು.
ನಗರ ಪಾಲಿಕೆ ಸದಸ್ಯೆ ಮಂಜುಳ ಮಾನಸ ಪ್ರಾಸ್ತಾವಿಕ ಭಾಷಣ ಮಾಡಿ, ಬಡಾವಣೆಗೆ ಆಗಬೇಕಾದ ಕಾಮಗಾರಿಗಳ ಬಗ್ಗೆ ಶಾಸಕರ ಗಮನ ಸೆಳೆದರು. ಜಿ ಮತ್ತು ಎಚ್ ಬ್ಲಾಕ್ ನಾಗರಿಕ ವೇದಿಕೆ ಅಧ್ಯಕ್ಷ ಎಂ.ಡಿ. ಕಿಣಿ ವಂದಿಸಿದರು. ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ, ಸುರಭಿ ಮಹಿಳಾ ಸಮಾಜದ ಅಧ್ಯಕ್ಷೆ ಲಕ್ಷ್ಮೀ ಬೆಳವಟ್, ಜಿ ಬ್ಲಾಕ್ ವಿನಾಯಕ ಯುವಕರ ಸಂಘದ ಜವರಪ್ಪ, ಪಾಲಿಕೆ ಅಭಿವೃದ್ಧಿ ಅಧಿಕಾರಿ ಗೋವಿಂದಪ್ಪ, ಎಂಜಿನಿಯರ್ ರವಿ, ರಾಘವೇಂದ್ರ, ಹಿರಿಯ ಮುಖಂಡ ಶಾಮಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

