'ಪ್ರೇಮಿಗಳ ದೇವಿ'ಯ ಅದ್ಧೂರಿ ಜಾತ್ರೆ
ಕೆ.ಆರ್. ನಗರ: ಪಟ್ಟಣದ ಹೊರವಲಯದ ತೋಪಮ್ಮನವರ ವಾರ್ಷಿಕ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಜಾತ್ರೆ ಅಂಗವಾಗಿ ಬೆಳಗ್ಗೆಯಿಂದಲೆ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಯಿತು. ಭಕ್ತರು ದೇವರ ದರ್ಶನ ಪಡೆದು ಹರಕೆ ತೀರಿಸಿ ಪೂಜೆ ಸಲ್ಲಿಸಿದರು. ಸಾಮಿಲ್ ಮತ್ತು ಮರದ ವ್ಯಾಪಾರಿಗಳ ಸಂಘದ ವತಿಯಿಂದ ಅನ್ನ ಸಂತರ್ಪಣೆ ಏರ್ಪಡಿಸಿದ್ದರೆ, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಪಾನಕ, ಮಜ್ಜಿಗೆ ವಿತರಿಸಿ ಭಕ್ತರ ದಾಹ ತಣಿಸಿದರು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಾವಿರಾರು ಮಂದಿ ಬೆಳಗ್ಗೆಯಿಂದ ರಾತ್ರಿವರೆಗೆ ದೇವಾಲಯಕ್ಕೆ ಭೇಟಿ ನೀಡಿದ್ದರು. ಪ್ರೇಮಿಗಳ ದೇವತೆ ಎಂದು ಹೆಸರಾದ ತೋಪಮ್ಮನ ದರ್ಶನ ಪಡೆಯಲು ನೂರಾರು ಯುವ ಜೋಡಿಗಳು ಆಗಮಿಸಿದ್ದರು.
ನಿರೀಕ್ಷೆ ಶಾಲೆಯ ವಾರ್ಷಿಕೋತ್ಸವ
ಮೈಸೂರು: ನಗರದ ನಿರೀಕ್ಷೆ ಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ನಿರೀಕ್ಷೆ ಉತ್ಸವವು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ಯಾಮನೂರ್ ಗ್ರೂಪ್ ಆಫ್ ಕಂಪನೀಸ್ನ ಮಾಲೀಕ ಎಸ್.ಎನ್. ಪಾರ್ಥನಾಥ್, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ನ ಅಧ್ಯಕ್ಷ ಸಂಜೀವ್ ತಗಡೂರ್, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಿಡಿಪಿಒ ಆರ್.ನಾಗರಾಜ್, ಎಲ್ಐಸಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಕೃಪಾನಿಧಿ ಟ್ರಸ್ಟಿನ ಗೌರವಾಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ಶಾಲೆಯ ಅಧ್ಯಕ್ಷ ಪ್ರವೀಣ್ ಕೃಪಾಕರ್, ಪ್ರಾಂಶುಪಾಲ ಹೇಮಮಾಲಿನಿ ಕೃಪಾಕರ್ ಭಾಗವಹಿಸಿದ್ದರು. ನಂತರ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ನೆರೆದವರನ್ನು ರಂಜಿಸಿತು. ಕಿರುತೆರೆಯ ಕಲಾವಿದೆ ರೋಹಿಣಿ ರಘುನಂದನ್ ಕಾರ್ಯಕ್ರಮ ನಿರೂಪಿಸಿದರು.
ಶನೈಶ್ಚರಸ್ವಾಮಿ ಉತ್ಸವ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕು ಅಂತರಸಂತೆ ಗ್ರಾಮದ ಸಮೀಪವಿರುವ ರಾಮೇನಹಳ್ಳಿಯಲ್ಲಿ ಮಾ. 8ರಂದು ಶ್ರೀ ಶನೈಶ್ಚರ ಸ್ವಾಮಿಯ ಶಿವರಾತ್ರಿ ಉತ್ಸವವು ನಡೆಯಲಿದೆ. ಆ ದಿನ ಬೆಳಗ್ಗೆ 7ರಿಂದ 10ರವರೆಗೆ ಹೋಮ, ಮಧ್ಯಾಹ್ನ 3ಕ್ಕೆ ಶ್ರೀ ಶನೈಶ್ಚರಸ್ವಾಮಿಯವರ ಕಳಸವನ್ನು ಅಲಂಕೃತ ಮಂಟಪದಲ್ಲಿ ಗಂಗಾಸ್ಥಾನದಿಂದ ಬಸವ ಮತ್ತು ವಾದ್ಯಗೋಷ್ಠಿಗಳ ಸಮೇತ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸೇರುವುದು. ಶಾಸಕ ಚಿಕ್ಕಮಾದು ಉತ್ಸವವನ್ನು ಉದ್ಘಾಟಿಸುವರು. ಹುಣಸೂರು ತಾಲೂಕಿನ ಮಾದಹಳ್ಳಿಯ ಉಕ್ಕಿನಾಕಾಂತ ಮಠದ ಶಿವಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಭಕ್ತಾದಿಗಳು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಭಾಗವಹಿಸುವಂತೆ ಕೋರಿದ್ದಾರೆ.
'ಗುಣಮಟ್ಟದ ಶಿಕ್ಷಣ ನೀಡಿ'
ಕೆ.ಆರ್. ನಗರ: ಎಸ್ಡಿಎಂಸಿ ಮತ್ತು ಪೋಷಕರ ಸಹಕಾರದಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರತ್ತ ಶಿಕ್ಷಕರು ಗಮನ ನೀಡಬೇಕು ಎಂದು ಹಂಪಾಪುರ ಗ್ರಾಪಂ ಮಾಜಿ ಅಧ್ಯಕ್ಷ ಶಿವಣ್ಣ ಹೇಳಿದರು. ತಾಲೂಕಿನ ಮಂಚನಹಳ್ಳಿ ಸಹಿಪ್ರಾ ಶಾಲೆಯಲ್ಲಿ ಮಂಗಳವಾರ ದಾನಿ ಶ್ರೀನಿವಾಸ್ ನೀಡಿದ ತಟ್ಟೆ ಮತ್ತು ಲೋಟ ವಿತರಿಸಿ ಮಾತನಾಡಿದರು. ಮಾಜಿ ಶಾಸಕ ದಿವಂಗತ ಮಂಚನಹಳ್ಳಿ ಮಹದೇವ್ ಅವರ ತಾಯಿ ಪಾರ್ವತಮ್ಮ ಮಾತನಾಡಿದರು. ಎಸ್ಡಿಎಂ ಸದಸ್ಯ ಮಾಯಿಗೇಗೌಡ, ಮುಖ್ಯ ಶಿಕ್ಷಕ ದೇವರಾಜೇಗೌಡ, ಶಿಕ್ಷಕರಾದ ಸ್ವಾಮಿ, ಸೀತಾ, ಧರ್ಮೇದ್ರಬಾಬು, ಉಮಾದೇವಿ, ವಿದ್ಯಾರ್ಥಿಗಳು ಇದ್ದರು.
ಕಲ್ಲಿನಿಂದ ಜಜ್ಜಿ ಪತ್ನಿ ಕೊಲೆ
ಎಚ್.ಡಿ. ಕೋಟೆ: ಪತಿಯೇ ತನ್ನ ಪತ್ನಿಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೊಳೆಯೂರು ಅರಣ್ಯ ಪ್ರದೇಶದ ವಲಯ ವ್ಯಾಪ್ತಿಗೆ ಬರುವ ಅಳಗಂಚಿ ಮಾರಮ್ಮ ದೇವಸ್ಥಾನದ ಬಳಿ ಮಂಗಳವಾರ ಸಂಜೆ ಜರುಗಿದೆ. ಬಾವಿಕೆರೆ ಹಾಡಿಯ ಬಸವರಾಜು ಪತ್ನಿ ರತ್ನಮ್ಮ(25) ಕೊಲೆಯಾದವರು. ಬಸವರಾಜು ಪರಾರಿಯಾಗಿದ್ದಾನೆ. ರತ್ನಮ್ಮ ತನ್ನ ಅಣ್ಣನ ಮನೆಯಲ್ಲಿ ಹಬ್ಬ ಇದೆ ಎಂದು ಪತಿ ಬಸವರಾಜು ಜೊತೆಗೆ ಹೋಗಬೇಕಾದರೆ, ಇಬ್ಬರೂ ಚೆನ್ನಾಗಿ ಕುಡಿದಿದ್ದರು. ನಂತರ ತನ್ನ ಪತ್ನಿಯ ತಲೆ, ಮೈಯ್ಯಿಗೆ ಕಲ್ಲಿನಿಂದ ಜಜ್ಜಿರುತ್ತಾನೆ. ಮೃತಳಿಗೆ ಒಬ್ಬ ಪುತ್ರ ಮತ್ತು ಪುತ್ರಿ ಇದ್ದಾರೆ. ಪತಿ, ಪತ್ನಿ ಇಬ್ಬರು ಜೊತೆಯಾಗಿ ಹೋಗಿರುವುದನ್ನು ನೋಡಿದ್ದ ಬಾವಿಕೆರೆ ಹಾಡಿಯ ಜನ ಬುಧವಾರ ಸರಗೂರು ಠಾಣೆಗೆ ವಿಷಯ ತಿಳಿಸಿದ್ದಾರೆ. ಎಸ್ಐ ಅರುಣ್ಕುಮಾರ್, ಪೇದೆ ಪುಟ್ಟನಾಯಕ, ಭಾಸ್ಕರ, ಆನಂದ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನ
ನಂಜನಗೂಡು: ಪಟ್ಟಣದ ಗುರುಭವನ ಆವರಣದಲ್ಲಿ ತಾಲೂಕಿನ 153 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು 12 ಖಾಸಗಿ ಶಾಲೆಯ ಮಕ್ಕಳಿಗಾಗಿ ಮಂಗಳವಾರ ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿದರು.
ಗ್ರಾಮಾಂತರ ಪ್ರದೇಶದ ಮಕ್ಕಳು ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಾವೇನು ಕಡಿಮೆ ಇಲ್ಲ, ಎಂಬದನ್ನು ಸಾಬೀತು ಪಡಿಸಿದ್ದಾರೆ. ನೂತನ ಆವಿಷ್ಕಾರಗಳಾದ ಸೌರಶಕ್ತಿ, ಅಂತರ್ಜಾಲ, ಸೇರಿದಂತೆ 200ಕ್ಕೂ ಹೆಚ್ಚು ಪ್ರಾತ್ಯಕ್ಷಿಕೆ ಪ್ರದರ್ಶಿಸಿರುವುದು ಶ್ಲಾಘನೀಯ. ಎಲ್ಲರಲ್ಲೂ ಪ್ರತಿಭೆ ಇದೆ. ಅದು ಹೊರಹೊಮ್ಮಲು ಶಿಕ್ಷಕರು, ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು. ಬಿಆರ್ಸಿ ಅಪರ್ಣ, ಶಿಕ್ಷಕರ ಸಂಘದ ಅಧ್ಯಕ್ಷ ಮುದ್ದುಮಾದೇಗೌಡ, ಉಪಾಧ್ಯಕ್ಷ ಧರ್ಮಾರತ್ನಾಕರ, ಅಕ್ಷರ ದಾಸೋಹ ಮಹೇಶ್, ರಂಗನಾಥ್, ಕಾರ್ಯದರ್ಶಿ ಶಿವಸ್ವಾಮಿ, ಮಹದೇವಸ್ವಾಮಿ, ಮಲ್ಲೇಶ್, ಕುಮಾರಸ್ವಾಮಿ, ಚೆಲುವಮೂರ್ತಿ ಶಿಕ್ಷಕರು ಇದ್ದರು.
ಅರಣ್ಯ ಹಕ್ಕು ಕಾಯ್ದೆ ಜಾರಿಗೆ ಸ್ವಾಗತ
ಹುಣಸೂರು: ಆರು ವರ್ಷಗಳ ಮೇಲೆ ಕರ್ನಾಟಕ ಸರ್ಕಾರ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಗೊಳಿಸಿ 9 ಜಿಲ್ಲೆಯ ಅರಣ್ಯವಾಸಿ ಜನರಿಗೆ ಹಕ್ಕುಪತ್ರ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ಗಿರಿಜನ ಕ್ರಿಯಾ ಕೂಟದ ಸಂಚಾಲಕ ಎಸ್.ಶ್ರೀಕಾಂತ್ ತಿಳಿಸಿದ್ದಾರೆ.
ಹಾಡಿ, ಗ್ರಾಮ ಅರಣ್ಯ ಹಕ್ಕುಗಳ ಸಮಿತಿಗಳು ಅರಣ್ಯ ಹಕ್ಕನ್ನು ಗ್ರಾಮಸಭೆಯ ಮೂಲಕ ನಿರ್ಧರಿಸುವ ಕೇಂದ್ರದ ಕಾನೂನನ್ನು ರಾಜ್ಯ ಸರ್ಕಾರ ತಡವಾಗಿಯಾದರೂ ಗೌರವಿಸಿ ಅನುಷ್ಠಾನಗೊಳಿಸಲು ತೀರ್ಮಾನಿಸಿರುವುದು ಬುಡಕಟ್ಟು ಜನಾಂಗಕ್ಕೆ ಬಹುದಿನಗಳಿಂದ ಆಗಿದ್ದ ಅನ್ಯಾಯವನ್ನು ಸರಿಪಡಿಸಿದೆ. ಅವರ ಪಿತ್ರಾರ್ಜಿತ ಅರಣ್ಯ ಭೂಮಿಗೆ- ಅರಣ್ಯಭೂಮಿ ಹಕ್ಕುಪತ್ರ ಹಾಗೂ ತಮ್ಮ ಕಾಡಿಗೆ ಸಾಮೂಹಿಕ ಅರಣ್ಯ ಹಕ್ಕುಪತ್ರ ನೀಡಲು ನಿರ್ಧರಿಸಿರುವುದು ಪ್ರಶಂಸನೀಯ ಎಂದಿದ್ದಾರೆ.
ಕಾಡಿನಲ್ಲಿ ವಾಸವಿದ್ದು, ಸರ್ಕಾರದ ಯೋಜನೆಗಳಿಂದ ಹೊರ ಹಾಕಲ್ಪಟ್ಟವರೂ ಅರಣ್ಯ ಹಕ್ಕಿಗೆ ಅರ್ಹರಿದ್ದಾರೆ. ಎಲ್ಲ ಅರಣ್ಯವಾಸಿ- ಅರಣ್ಯ ಅವಲಂಬಿತ ಬುಡಕಟ್ಟುಗಳೂ ಹಕ್ಕುದಾರರು. ಆದ್ದರಿಂದ ಬುಡಕಟ್ಟು ಜನರ ಮನವಿ ಸ್ವೀಕರಿಸಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿಯನ್ನು ಒಕ್ಕೂಟದ ಶ್ರೀಕಾಂತ್ ಅಭಿನಂದಿಸಿದ್ದಾರೆ.
ಇಂಧನ ಇಲಾಖೆಯ ಸಭೆಯಲ್ಲಿ ಡಿ.ಕೆ. ಶಿವಕುಮಾರ್
ಮೈಸೂರು: ಇಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಭಾಗವಹಿಸಿದ್ದರು. ಕುಡಿಯುವ ನೀರಿನ ಯೋಜನೆ, ಗಂಗಾ ಕಲ್ಯಾಣ ಯೋಜನೆ, ಸೌರಶಕ್ತಿ ಚಾಲಿತ ಐಪಿ ಸೆಟ್, ಜಾಲ ಮುಕ್ತ ಸೌರ ಚಾವಣಿ ಯೋಜನೆಗಳ ಪ್ರಗತಿ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಡಿ. ಕಿರಣ್, ತಾಂತ್ರಿಕ ನಿರ್ದೇಶಕ ಭಾಗ್ಯನಾಯ್ಕ್, ಆರ್ಥಿಕ ಸಲಹೆಗಾರ ಶಿವಣ್ಣ, ಮುಖ್ಯ ಎಂಜಿನಿಯರ್ ಶಾಂತಿ, ಆಡಳಿತ ಮತ್ತು ಮಾನವ ಸಂಪನ್ಮೂಲ ಪ್ರಧಾನ ವ್ಯವಸ್ಥಾಪಕ ಸೋಮಶೇಖರ್, ಕೆಪಿಟಿಸಿಎಲ್ ಅಧಿಕಾರಿಗಳು ಭಾಗವಹಿಸಿದ್ದರು. ಲೋಕಸಭಾ ಚುನಾವಣಾ ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಚಿವರು ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದರು.
ಮುಖ್ಯಮಂತ್ರಿ ಪ್ರವಾಸ ರದ್ದು; ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾ.6ರಂದು ಹಮ್ಮಿಕೊಂಡಿದ್ದ ಪಿರಿಯಾಪಟ್ಟಣ ಮತ್ತು ಹುಣಸೂರು ವಿಧಾನಸಭಾ ಕ್ಷೇತ್ರಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನಾ ಸಮಾರಂಭವು ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ರದ್ದುಗೊಂಡಿದೆ.
ಆದರೆ ಪಿರಿಯಾಪಟ್ಟಣದಲ್ಲಿ ನಿಗದಿತ ಸಮಯಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಮುಖ್ಯಮಂತ್ರಿಗಳು ಭಾಗವಹಿಸುವರು ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದ್ದಾರೆ.
ಅದೇ ರೀತಿ ಮಾ.6ರಂದು ಆಯೋಜಿಸಲಾಗಿದ್ದ ನಗರಪಾಲಿಕೆ ಸಾಮಾನ್ಯಸಭೆ ಹಾಗೂ ಮೈಸೂರು ತಾಲೂಕು ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆ ರದ್ದಾಗಿದೆ.
ಸರ್ಕಾರಿ ವಾಹನಗಳ ವಶ
ಮೈಸೂರು: ಲೋಕಸಭಾ ಚುನಾವಣೆ ನೀತಿ ಸಂಹಿತೆಯು ಮಾ.5ರಿಂದ ಮೇ 28ರವರೆಗೆ ಜಾರಿಯಲ್ಲಿರುವುದರಿಂದ ಮಂಡಳಿ, ನಿಗಮ, ಸ್ವಾಯತ್ತತಾ ಸಂಸ್ಥೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರೇತರ ಸದಸ್ಯರಿಗೆ ಒದಗಿಸಲಾಗಿರುವ ಸರ್ಕಾರಿ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸಿ. ಶಿಖಾ ಸೂಚಿಸಿದ್ದಾರೆ. ಸರ್ಕಾರಿ ವಾಹನಗಳಲ್ಲಿ ಕೂಡಲೇ ವಶಕ್ಕೆ ಪಡೆದುಕೊಂಡು, ಲಾಗ್ ಪುಸ್ತಕದಲ್ಲಿ ನಮೂದಿಸಬೇಕು.
ಈ ಬಗ್ಗೆ ಮಾಹಿತಿಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಬೇಕು. ಚುನಾವಣಾ ಕಾರ್ಯಕ್ಕೆ ವಾಹನಗಳು ಅಗತ್ಯವಿರುವುದರಿಂದ ಜಿಲ್ಲಾಧಿಕಾರಿ ಕಚೇರಿಯಿಂದ ದೂರವಾಣಿ ಅಥವಾ ಪತ್ರದ ಮೂಲಕ ಕೋರಿದ ಕೂಡಲೇ ನಿಯೋಜಿಸಬೇಕು ಎಂದು ತಿಳಿಸಿದ್ದಾರೆ.
ಕುಸ್ತಿಗೆ ಜೋಡಿ ಕಟ್ಟುವಿಕೆ
ಮೈಸೂರು: ತಾಲೂಕು ಕೆ. ಹೆಮ್ಮನಹಳ್ಳಿಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಮಾ.23ರ ಮಧ್ಯಾಹ್ನ 2.30ರಿಂದ ನಡೆಯುವ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗೆ ಮಾ.9ರ ಬೆಳಗ್ಗೆ 11ಕ್ಕೆ ಕುಸ್ತಿ ಜತೆ ಕಟ್ಟುವ ಕಾರ್ಯಕ್ರಮವನ್ನು ನಗರದ ದೊಡ್ಡಕೆರೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಅನಂತವರ್ಧನ ತಿಳಿಸಿದ್ದಾರೆ. ಮೊ. 91414 51323 ಸಂಪರ್ಕಿಸಬಹುದು.
ಬಹುಮಾಧ್ಯಮ ಕಾರ್ಯಾಗಾರ
ಮೈಸೂರು ವಿಶ್ವವಿದ್ಯಾನಿಲಯದ ಬಹುಮಾಧ್ಯಮ ಕಲಿಕ ಸಂಪನ್ಮೂಲ ಕೇಂದ್ರವು ಆಯೋಜಿಸಿರುವ ಬಹುಮಾಧ್ಯಮ ಬೋಧನಾ ಕಲಿಕಾ ಸಂಪನ್ಮೂಲ ಸೃಷ್ಟಿ ಕುರಿತ ಕಾರ್ಯಾಗಾರದ ಸಮಾರೋಪ ಸಮಾರಂಭ ಮಾ.7ರ ಸಂಜೆ 4ಕ್ಕೆ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದೆ. ಕುಲಸಚಿವ ಪ್ರೊ.ಡಿ. ಶ್ರೀಜಯದೇವರಾಜ ಅರಸ್ ಅಧ್ಯಕ್ಷತೆ ವಹಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

