ಮೈಸೂರು

ಜಿಪಿಐಇಆರ್‌ಗೆ 20ರ ಹರೆಯ; ಸಂಭ್ರಮಾಚರಣೆ

Published On :

ಮೈಸೂರು: ನಾಟಕದಲ್ಲಿ ಮಾತಿಗಿಂತ ಅಭಿನಯಕ್ಕೆ ಪ್ರಾಧಾನ್ಯತೆ ನೀಡಿ ಕಲಾವಿದನ ಪ್ರತಿಭೆಗೆ ಒರೆ ಹಚ್ಚುವ ಕಾಯಕ ಮಾಡಿಕೊಂಡು ಬಂದಿರುವ ಜಿಪಿಐಇಆರ್ ರಂಗ ತಂಡಕ್ಕೆ ಇದೀಗ 20ರ ಹರೆಯ.
ರಂಗಾಯಣದ ಕಲಾವಿದ ಮೈಮ್ ರಮೇಶ್ ಸಾರಥ್ಯದಲ್ಲಿ ಸೃಷ್ಟಿಯಾದ ಈ ತಂಡವು ಈವರೆಗೆ 150ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಿದೆ. ಒಬ್ಬ ಪರಿಪೂರ್ಣ ಕಲಾವಿದನಿಗೆ ಇರಬೇಕಾದ ಗೆಸ್ಚರ್, ಪೋಸ್ಚರ್, ಇಮ್ಯಾಜಿನೇಷನ್, ಎಕ್ಸ್‌ಪ್ರೆಷನ್, ರಿದಂ (ಜಿಪಿಐಇಆರ್) ಅಂದರೆ ಮುದ್ರೆ, ಭಂಗಿ, ಕಲ್ಪನೆ, ಭಾವನೆ, ತಾಳ ಇವುಗಳ ಬಗ್ಗೆ ಜ್ಞಾನ ಒದಗಿಸುವುದು ಇದರ ಮೂಲ ಉದ್ದೇಶವಾಗಿದೆ.
ಎಡಪಂಥೀಯ ಧೋರಣೆಯುಳ್ಳ ಕಾರ್ಮಿಕ ಮುಖಂಡರಾದ ಜಾರಪ್ಪ ಪೂಜಾರಿ ಎಂಬವರ ಮಗನಾದ ಮೈಮ್ ರಮೇಶ್ ಚಿಕ್ಕಂದಿನಿಂದಲೇ ಎಡಪಂಥೀಯ ಚಿಂತನೆಗಳನ್ನು ಅಳವಡಿಸಿಕೊಂಡವರು. ತನ್ನ ತಂದೆಯ ಚಿಂತನೆಗಳನ್ನು ಜಾರಿಗೆ ತರಲು ಬೀದಿ ನಾಟಕಗಳ ಮೂಲಕ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು. ಬಿ.ವಿ. ಕಾರಂತರು ಕಟ್ಟಿದ ರಂಗಾಯಣಕ್ಕೆ ಸೇರಿದ ನಂತರ ರಂಗಕಲೆಯನ್ನು ವೃತ್ತಿಯಾಗಿ ಸ್ವೀಕರಿಸಿದರು. ಅಲ್ಲಿನ ಕೆಲಸ ಕಾರ್ಯಗಳ ಜತೆಗೆ ಯುವ ಸಮೂಹವನ್ನು ಕಟ್ಟಬೇಕು. ಅವರಿಗೆ ನಾಟಕದ ಬಗೆಗೆ ಜ್ಞಾನ ತುಂಬಬೇಕು. ಕ್ರಿಯಾಶೀಲತೆಯಿಂದ ಸಮಾಜ ಸೇವೆಯಲ್ಲಿ ತೊಡಗಿಸಬೇಕೆಂಬ ಮಹಾದಾಸೆಯಿಂದ ಕಾರ್ಯಚಟುವಟಿಕೆಗಳನ್ನು ರೂಪಿಸಿದರು. ಜಿಪಿಐಇಆರ್ ತಂಡವು 1994ರ ಫೆ. 20ರಂದು ಸ್ಥಾಪನೆಯಾಯಿತು. ಅಂದು ಕಲಾಮಂದಿರದಲ್ಲಿ ನಡೆದ ಸಮಾರಂಭವನ್ನು ಚಿತ್ರನಟ ರೇಣುಕಾಪ್ರಸಾದ್ ಉದ್ಘಾಟಿಸಿ ಆಶಯ ಭಾಷಣ ಮಾಡಿದ್ದರು. ಮೊದಲ ಬಾರಿಗೆ ಮೈಸೂರಿಗೆ ಮೈಮ್ ಪರಿಚಯಿಸಿದ ಕೀರ್ತಿ ರಮೇಶ್ ಅವರಿಗೆ ಸಲ್ಲುತ್ತದೆ. ಆ ಪ್ರದರ್ಶನ ನೋಡಲು ಕಲಾಮಂದಿರ ಹೌಸ್‌ಫುಲ್ ಆಗಿತ್ತು. ನಂತರ ಚದುರಂಗರ ಶವದಮನೆ ನಾಟಕವನ್ನು ಕೈಗೆತ್ತಿಕೊಳ್ಳಲಾಯಿತು. ಸ್ವತಃ ಚದುರಂಗ ಅವರೇ ನಾಟಕ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಚಿಣ್ಣರ ಮೇಳ ರಮೇಶ್ ಕಾನ್ಸೆಪ್ಟ್: ರಂಗಾಯಣಕ್ಕೆ ಬಂದ ಮೇಲೆ ಮಕ್ಕಳ ರಂಗಭೂಮಿ ಕಡೆಗೆ ರಮೇಶ್ ಗಮನ ಹರಿಸಿದರು. ರಂಗಾಯಣದ ಆವರಣದಲ್ಲಿ ಮಕ್ಕಳನ್ನು ಸೇರಿಸಿಕೊಂಡು 1995ರಲ್ಲಿ ಚಿಣ್ಣರ ಮೇಳ ಎಂಬ ಶೀರ್ಷಿಕೆಯಡಿ ಕ್ರಿಯಾಶೀಲ ಚಟುವಟಿಕೆಗಳನ್ನು ಹಮ್ಮಿಕೊಂಡರು. ಅದರಲ್ಲಿ ಪ್ರಮುಖ ರಂಗಕರ್ಮಿಗಳ ಮಕ್ಕಳೇ ಇದ್ದರು. ಇದಾದ ಬಳಿಕ ರಂಗಾಯಣವೇ ಚಿಣ್ಣರ ಮೇಳ ಆರಂಭಿಸಿದಾಗ ರಮೇಶ್ ಬಿಟ್ಟುಕೊಟ್ಟರು. ಹಲವು ವರ್ಷಗಳ ಕಾಲ ರಂಗಾಯಣದ ಚಿಣ್ಣರ ಮೇಳದ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
2014ರ ಫೆ. 20ಕ್ಕೆ ಜಿಪಿಐಇಆರ್ ತಂಡಕ್ಕೆ 20 ವರ್ಷ ತುಂಬಿದೆ. ಈ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ಏ.7ರಿಂದ 11ರವರೆಗೆ 20ನೇ ವಾರ್ಷಿಕೋತ್ಸವ ವನರಂಗದಲ್ಲಿ ನಡೆಯಲಿದೆ. ಇದರಲ್ಲಿ ನಾಲ್ಕು ಕನ್ನಡ ನಾಟಕಗಳು ಹಾಗೂ ಒಂದು ಪರಭಾಷೆ ನಾಟಕ ಪ್ರದರ್ಶಿಸಲಾಗುತ್ತದೆ. ಅವುಗಳಲ್ಲಿ ಥ್ಯಾಂಕ್ಯೂ ಮಿಸ್ಟರ್ ಗ್ಲ್ಯಾಡ್, ಬುಗುರಿ, ಗಿರಿಜಾ ಕಲ್ಯಾಣ, ಸಿಂಹಾಸನ ಖಾಲಿ ಇದೆ ಎಂಬ ನಾಟಕಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಪಿಐಇಆರ್ ತಂಡದಲ್ಲಿದ್ದವರು ಇಂದು ಸಿನಿಮಾ, ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಅಲ್ಲದೇ ಪ್ರಮುಖ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿದ್ದಾರೆ. ಅದರಲ್ಲೂ ಡೈರೆಕ್ಟರ್ಸ್ ಸ್ಪೆಷಲ್ ಚಿತ್ರದ ನಾಯಕ ಧನಂಜಯ್ ಇದೇ ತಂಡದಲ್ಲಿದ್ದವರು. ಇವರೆಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಮ್ಮತಿಸಿದ್ದಾರೆ.
ಜಿಪಿಐಇಆರ್‌ನ ಪ್ರಮುಖ ಉದ್ದೇಶ
* ಮೂಕಾಭಿನಯ ಮಾಧ್ಯಮವನ್ನು ರಂಗಭೂಮಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವುದು.
* ರಂಗಭೂಮಿಗೆ ಪೂರಕವಾದ ವಿವಿಧ ಕಲಾ ಪ್ರಕಾರಗಳಲ್ಲಿನ ಸೃಜನಶೀಲ ಕಲಾವಿದರನ್ನು ಪ್ರೋತ್ಸಾಹಿಸಿ, ವೇದಿಕೆ ಹಂಚಿಕೊಟ್ಟು ಎಲ್ಲರೊಡನೆ ಬೆಳೆಸುವುದು.
* ಹಿರಿಯರು, ಯುವಕರು ಮತ್ತು ಮಕ್ಕಳಿಗೆ ರಂಗ ತರಬೇತಿ ಶಿಬಿರ ನಡೆಸಿ, ಅವರು ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸುವುದು.
* ಶೈಕ್ಷಣಿಕವಾಗಿ ರಂಗಭೂಮಿಯನ್ನು ಬಳಸುವ ಸಾಧ್ಯತೆಗಳನ್ನು ಪ್ರಾಯೋಗಿಕವಾಗಿ ರೂಪಿಸಿ ಅಳವಡಿಸುವುದು.
ಪರಿವರ್ತನೆ ಜಗದ ನಿಯಮ. ಯುವಕರಿಂದ ಮಾತ್ರ ಬದಲಾವಣೆ ಸಾಧ್ಯ ಎಂಬ ಮಂತ್ರದೊಂದಿಗೆ ಜಿಪಿಐಇಆರ್ ಆರಂಭಿಸಿದೆ. ಹೆಚ್ಚು ಯುವಕರನ್ನೊಳಗೊಂಡ ಈ ತಂಡವನ್ನು ಆರಂಭದಲ್ಲಿ ಬಿ.ವಿ. ಕಾರಂತರು, ರೇಣುಕಾಪ್ರಸಾದ್, ಅಗರಬತ್ತಿ ಮೂರ್ತಿ, ಪ್ರೊ.ಕೆ. ರಾಮದಾಸ್ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಈಗ 20 ವರ್ಷ ಪೂರೈಸಿರುವುದು ನನಗೆ ಹೆಮ್ಮೆ ಎನಿಸಿದೆ. ಈ ಸಂಭ್ರಮವನ್ನು ಎಲ್ಲರೂ ಸೇರಿ ಆಚರಿಸೋಣ.
 ಮೈಮ್ ರಮೇಶ್,ಜಿಪಿಐಆರ್‌ಇ ಸಂಸ್ಥಾಪಕ.



- ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.