ದೇಸಿ ಜಾನಪದ ಮರುಸೃಷ್ಟಿಯಾಗಲಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 10
ದೇಸೀಯ ನೆಲೆಯಲ್ಲಿ ಜಾನಪದ ಸಾಹಿತ್ಯ ಮರುಸೃಷ್ಟಿಯಾಗಲಿ ಎಂದು ಕರ್ನಾಟಕ ಜಾನಪದ ಹಾಗೂ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಬೆಳಗಾವಿಯ ಡಾ.ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‌ನ ಸಂಯುಕ್ತಾಶ್ರಯದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಟಗೇರಿ ಕೃಷ್ಣಶರ್ಮ ಸಮಗ್ರ ಕಥಾಸಾಹಿತ್ಯ ಸಂಪುಟ ಲೋಕಾರ್ಪಣೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಅಧ್ಯಯನದಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ನಾವು ಹೆಚ್ಚಾಗಿ ಒಳಗಾಗುತ್ತಿದ್ದು, ಇದರಿಂದಾಗಿ ಮೊದಲನೇ ದರ್ಜೆಯ ಗುಲಾಮಗಿರಿಗೆ ಒಳಗಾಗಿದ್ದೇವೆ. ಜನಪದವನ್ನು ನೋಡುವುದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದ್ದು, ಕೇವಲ ಹೊರಗಿನಿಂದ ತರುವುದಕ್ಕೆ ಪ್ರಾಶಸ್ತ್ಯ ವಹಿಸಿದ್ದೇವೆ. ಹೀಗಾಗಿ ಜನಪದವನ್ನು ನೋಡುವ ಕ್ರಮ ಬದಲಾಗಬೇಕು ಹಾಗೂ ದೇಸೀಯವಾಗಿ ನೆಲೆ ನಿಲ್ಲಿಸುವ ಕೆಲಸ ಆಗಬೇಕು ಎಂದರು.
ಜೀವಂತ ಸಮಾಜ ಹಾಗೂ ಸೃಜನಶೀಲ ಸೃಷ್ಟಿಕ್ರಿಯೆಯ ಕೊರತೆ ಹೆಚ್ಚಾಗಿ ಕಂಡುಬಂದಿದ್ದು, ಈ ವಿಚಾರದಲ್ಲಿ ವಿವಿಗಳು ಕೇವಲ ಹೊರಗಿನಿಂದ ತರುವುದರ ಬಗ್ಗೆ ಮಾತ್ರ ಅನುಸರಿಸುತ್ತಿವೆ ಹೊರತು ಜಾನಪದವನ್ನು ನೆಲೆನಿಲ್ಲಿಸುವ ಕೆಲಸ ಮಾಡುತ್ತಿಲ್ಲ. ವಿವಿಗಳು ಸರಬರಾಜು ಮಾಡುವ ಪ್ರಕ್ರಿಯೆಯಲ್ಲಿ ತೊಡಗಿ ಒಂದು ರೀತಿಯ ಆಧುನಿಕ ಕೂಲಿಕಾರರಂತೆ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ವಿಷಾದಿಸಿದರು.
ಉದ್ಯೋಗಿ ಸೃಷ್ಟಿಯಾಗಲಿ: ಜಾನಪದ, ಕೃಷಿ, ಕಲೆ ಮುಂತಾದವುಗಳನ್ನು ಓದುವರ ಜತೆಗೆ ಉದ್ಯೋಗ ಸೃಷ್ಟಿಯೂ ಆಗಬೇಕು. ಜಾನಪದ ಸೌಹಾರ್ದತೆಗೆ ಮೂಲ ಮಂತ್ರವಾಗಲಿ. ಜಾಗತೀಕರಣದ ಹಿನ್ನೆಲೆಯಲ್ಲಿ ಬಂಡವಾಳ ಹೂಡುವವರು ಹೊರಗಿನವರು ಹಾಗೂ ದೊಡ್ಡವರೇ ಆಗಿರುತ್ತಾರೆ. ಬಂಡವಾಳ ಹೂಡಲು ಕೆಳವರ್ಗದವರಿಗೆ ಸಾಧ್ಯವಿಲ್ಲ. ಜನಬಂಡವಾಳ ದೃಷ್ಟಿಕೋನದ ಮೂಲಕ ಕರ್ನಾಟಕ ಜಾನಪದವನ್ನು ಮರುಸೃಷ್ಟಿಸಬೇಕು ಎಂದರು.
ಬೆಟಗೇರಿ ಕೃಷ್ಣಶರ್ಮರ ಸಂಪುಟವನ್ನು ಹಿರಿಯ ಸಾಹಿತಿ ಪ್ರೊ.ಗಿರಡ್ಡಿ ಗೋವಿಂದರಾಜು ಲೋಕಾರ್ಪಣೆಗೊಳಿಸಿದರು. ಸಾಹಿತಿ ಪ್ರೊ.ರಾಘವೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಪ್ರೊ.ನೀಲಗಿರಿ ತಳವಾರ್ ಸ್ವಾಗತಿಸಿದರು. ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಪ್ರಾಸ್ತಾವಿಕ ಮಾತುಗಳಾಡಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಎನ್.ಕೆ. ಲೋಲಾಕ್ಷಿ ನಿರೂಪಿಸಿದರು. ನಂತರ ನಡೆದ ವಿವಿಧ ಗೋಷ್ಠಿಯಲ್ಲಿ ತಜ್ಞರು ವಿಚಾರ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

