ಪಟ್ಟಣ ಪಂಚಾಯಿತಿಗೆ ರತ್ನ ಅಧ್ಯಕ್ಷೆ?
ಪಿರಿಯಾಪಟ್ಟಣ: ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಮಾ.13 ರಂದು ಚುನಾವಣೆ ನಿಗದಿಯಾಗಿದ್ದು, ಸದಸ್ಯೆ ರತ್ನ ಅಧ್ಯಕ್ಷೆ ಸ್ಥಾನ ಅಲಂಕರಿಸುವುದು ಬಹುತೇಕ ಖಚಿತವಾಗಿದೆ.
ಪಟ್ಟಣ ಪಂಚಾಯಿತಿಯಲ್ಲಿ ಒಟ್ಟು 15 ಸದಸ್ಯರಿದ್ದು, ಅವರಲ್ಲಿ 8 ಸದಸ್ಯರು ಕಾಂಗ್ರೆಸ್ ಹಾಗೂ 7 ಮಂದಿ ಜೆಡಿಎಸ್ ಸದಸ್ಯರಿದ್ದು, ಕಾಂಗ್ರೆಸ್ ಸದಸ್ಯೆ ಅನಿತಾಶೇಖರ್ ತಮ್ಮ ವೈಯಕ್ತಿಕ ಕಾರಣದಿಂದ ರಾಜಿನಾಮೆ ನೀಡಿದ ಹಿನ್ನೆಲೆ ಹಾಲಿ ಪಪಂನಲ್ಲಿ ಒಟ್ಟು 14 ಸದಸ್ಯರಿದ್ದಾರೆ. ಎರಡೂ ಪಕ್ಷಗಳೂ ಸಮಬಲದಲ್ಲಿವೆ. ಚುನಾವಣೆಯಲ್ಲಿ ಶಾಸಕರು ಮತ ಚಲಾಯಿಸಲಿದ್ದಾರೆ. ಲೋಕಸಭಾ ಚುನಾವಣೆ ಘೋಷಣೆಯಾಗಿರುವುದರಿಂದ ಸಂಸದರಿಗೆ ಮತದಾನಕ್ಕೆ ಅವಕಾಶವಿಲ್ಲವಾಗಿದೆ.
ಪಪಂನ ಅಧ್ಯಕ್ಷ ಸ್ಥಾನಕ ಪ.ಜಾತಿಗೆ ಮೀಸಲಾಗಿದ್ದು, ಪಪಂನಲ್ಲಿ ಕಾಂಗ್ರೆಸ್ ಸದಸ್ಯೆ ರತ್ನ ಹೊರತುಪಡಿಸಿ ಮತ್ಯಾರೂ ಪ. ಜಾತಿಯ ಅಭ್ಯರ್ಥಿಗಳು ಇಲ್ಲದ ಕಾರಣ ರತ್ನ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಉಪಾಧ್ಯಕ್ಷ ಸ್ಥಾನಕ್ಕೆ (ಸಾಮಾನ್ಯ) ಬಹುತೇಕ ಎಲ್ಲ ಕಾಂಗ್ರೆಸ್ ಸದಸ್ಯರೂ ಕಣ್ಣಿಟ್ಟಿದ್ದು, ಪೈಪೋಟಿ ನಡೆಯುತ್ತಿದೆ. ಪಪಂಗೆ 2ನೇ ಬಾರಿಗೆ ಆಯ್ಕೆಯಾಗಿರುವ ಸುವರ್ಣ, ಪಿ.ಡಿ. ತ್ರಿನೇಶ್, ಮೊದಲ ಬಾರಿಗೆ ಆಯ್ಕೆಯಾಗಿರುವ ಅಬ್ದುಲ್ ಅಜೀಜ್, ಸಣ್ಣಪ್ಪ ಪೈಪೋಟಿ ಪಟ್ಟಿಯಲ್ಲಿದ್ದಾರೆ.
ಜೆಡಿಎಸ್ಗೆ ಜೈ ಸಾಧ್ಯತೆ: ಕೆಲವು ಮೂಲಗಳ ಪ್ರಕಾರ ಕಾಂಗ್ರೆಸ್ನ ಕೆಲವು ಸದಸ್ಯರು ತಮಗೆ ಉಪಾಧ್ಯಕ್ಷ ಸ್ಥಾನ ನೀಡದಿದ್ದಲ್ಲಿ ಜೆಡಿಎಸ್ಗೆ ಬೆಂಬಲ ವ್ಯಕ್ತಪಡಿಸುವ ಇಂಗಿತ ವ್ಯಕ್ತಪಡಿಸುತ್ತಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲ ಪಡೆದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ಗೆ ಸಹಕರಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಶಾಸಕ ಕೆ.ವೆಂಕಟೇಶ್ ಅವರ ತೀರ್ಮಾನವೇ ಅಂತಿಮವಾಗಿದ್ದು, ಮೂಲ ಕಾಂಗ್ರೆಸ್ಸಿಗರಾದ ಸಣ್ಣಪ್ಪ, ಸುವರ್ಣ, ಅಜೀಜ್ ಅವರಿಗೆ ಉಪಾಧ್ಯಕ್ಷ ಸ್ಥಾನ ಲಭಿಸುವುದೂ ಜೆಡಿಎಸ್ನಿಂದ ಬಂದ ತ್ರಿನೇಶ್ಗೆ ಅವಕಾಶ ಲಭ್ಯವಾಗುವುದೂ ಅಥವಾ ಇವರ ನಡುವಿನ ಪೈಪೋಟಿಯಲ್ಲಿ ಹೊಸಬರಾದ ಮಂಜು ಅಥವಾ ಸೌಭಾಗ್ಯ ಅವರಿಗೆ ಲಭಿಸುವುದೊ ಕಾದುನೋಡಬೇಕಿದೆ.
-ಪಿ.ಎನ್. ಸುಬ್ರಮಣ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

