ಕಂಟಕವಾಗುತ್ತಿದೆ ಕುಂಠಿತ ಕಾಮಗಾರಿ
ಮೈಸೂರು: ಕುವೆಂಪುನಗರ ಮತ್ತು ಅಶೋಕಪುರಂ ಸಂಪರ್ಕಿಸುವ ರಸ್ತೆಯಲ್ಲಿನ ದೊಡ್ಡ ಮೋರಿಗೆ ಚನ್ನಗಿರಿ ಕೊಪ್ಪಲು ಬಳಿ ನಿರ್ಮಿಸಲು ಉದ್ದೇಶಿಸಿರುವ ಸೇತುವೆ ಕಾಮಗಾರಿ ನೋಡಿದಾಗಲೆಲ್ಲಾ ಸರ್ಕಾರದ ಮಟ್ಟದಲ್ಲಿನ ಕೆಲಸಗಳೆಲ್ಲ ಹಾಗೆಯೇ ಎನಿಸುತ್ತದೆ.
ಅಧಿಕಾರಿಗಳ ವಸತಿ ಗೃಹದ ದುರಸ್ತಿ, ಕಚೇರಿಯ ಒಳಾಂಗಣ ವಿನ್ಯಾಸ, ತಾವು ಕೂರುವ ಕುರ್ಚಿ ಬದಲು, ಹೊಸ ಕಾರು, ಪಾಲಿಕೆ ಸದಸ್ಯರ ಮನೆ ಮುಂದಿನ ರಸ್ತೆ ದುರಸ್ತಿ, ಬೀದಿ ದೀಪ ಅಳವಡಿಕೆ, ಕುಡಿಯುವ ನೀರು ಎಲ್ಲವೂ ದಿನ ಬೆಳಗಾಗುವುದರಲ್ಲಿ ನಡೆಯುತ್ತದೆ. ಅದೇ ಸಾರ್ವಜನಿಕ ಕೆಲಸವೆಂದರೆ ವರ್ಷ ಕಳೆಯಬೇಕು, ಯಾರಾದರೂ ಬಿದ್ದು ಸಾಯಬೇಕು, ಕುಟುಂಬವೊಂದು ಮೋರಿಯಲ್ಲಿ ಕೊಚ್ಚಿ ಹೋಗಬೇಕು, ಅದಕ್ಕೊಬ್ಬ ರಾಜಕಾರಣಿ ಸ್ಥಳ ಪರಿಶೀಲಿಸಬೇಕು, ಅಧಿಕಾರಿಗಳನ್ನು ಕರೆದು ದರ್ಪದಿಂದ ತಾಕೀತು ಮಾಡಬೇಕು. ಆತ ಸರ್ಕಾರಕ್ಕೆ ಪತ್ರ ಬರೆದು, ಅನುಮತಿ ದೊರಕಿ, ಟೆಂಡರ್ ಕರೆದು, ಅಷ್ಟಿಷ್ಟು ಪುಡಿಗಾಸಿಗೆ ಬಿಲ್ ಮಾಡದೆ ಸತಾಯಿಸಬೇಕು, ಇದರಿಂದ ಬೇಸತ್ತು ಗುತ್ತಿಗೆದಾರ ಕಾಮಗಾರಿ ನಿಲ್ಲಿಸಬೇಕು, ಅಷ್ಟರಲ್ಲಿ ಮತ್ತೊಂದು ಹೆಣ ಬೀಳಬೇಕು. ಮತ್ತದೇ ಸರದಿ....
ದೊಡ್ಡ ಮೋರಿ ಸೇತುವೆ ನಿರ್ಮಾಣ ಕಾಮಗಾರಿ ಪರಿ ನೋಡಿದವರು ಹೀಗೆ ಮಾತನಾಡುತ್ತಾರೆ. ಎರಡು ವರ್ಷಗಳಿಂದ ಕಾಮಗಾರಿ ನಡೆಯದಿರುವುದನ್ನು ನೋಡಿದರೆ ಸತ್ಯ ಎಂತಲೂ ಯಾರಿಗಾದರೂ ಅನ್ನಿಸುತ್ತದೆ.
ತೀರಾ ಮಂದಗತಿ: ಪಾಲಿಕೆಯ ವಾರ್ಡ್ ನಂ. 8, 9, 17 ಮತ್ತು 18ರ ಗಡಿಯಲ್ಲಿರುವ ಈ ಸೇತುವೆ ಕಾರ್ಯ ತೀರಾ ಮಂದಗತಿಯಲ್ಲಿ ನಡೆಯುತ್ತಿದೆ. ಎರಡು ವರ್ಷದ ಹಿಂದೆಯೇ ಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ರು. 50 ಲಕ್ಷಕ್ಕೆ ಕಾಮಗಾರಿ ಆರಂಭಿಸಲು ಉದ್ದೇಶಿಸಿ, ಅನುದಾನ ನಿಗದಿಪಡಿಸಿದ್ದರು. ಆದರೆ ಇತ್ತೀಚೆಗೆ ಗುದ್ದಲಿ ಪೂಜೆ ನೆರವೇರಿತು. ಕಾಮಗಾರಿಗೆ ಕೆಲಸದ ಆದೇಶ ನೀಡಲಾಗಿದೆ. ಆದರೆ ಬಿಲ್ ಆಗಿಲ್ಲ. ಗುತ್ತಿಗೆದಾರರು ಕಾಮಗಾರಿ ಆರಂಭಿಸಲು ಬಂದು ನೆಲ ಅಗೆದು ಹೋದರು. ಬಳಿಕ ಪಾಲಿಕೆ ಎಂಜಿನಿಯರ್ಗಳೆ ಕಲ್ಲು ತಂದು ತಡೆ ಗೋಡೆ ನಿರ್ಮಿಸಿದರು. ಈಗ ಕಾಮಗಾರಿ ನಡೆಯದಿದ್ದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಈಗ ಅಪರಿಚಿತರು ಈ ರಸ್ತೆಯಲ್ಲಿ ರಾತ್ರಿ ವೇಳೆ ಬೈಕ್ನಲ್ಲಿ ಬಂದರೆ ಹೊಂಡಕ್ಕೆ ಬೀಳುವುದು ನಿಶ್ಚಿತ. ಅಂತಹ ಸ್ಥಿತಿ ಇದೆ. ಆದರೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಘಟಿಸಬಾರದ್ದು ಘಟಿಸಿದ ಮೇಲೆ ಎಚ್ಚರಗೊಳ್ಳದಿರಲಿ ಎಂಬುದು ನಮ್ಮ ಆಶಯ. ಇದೆ ಕಾರಣಕ್ಕೆ ಈ ಹಿಂದೆ 'ಕನ್ನಡಪ್ರಭ' ವರದಿಯ ಫಲವಾಗಿ ಕೆ.ವಿ. ಮಲ್ಲೇಶ್ ಅನುದಾನ ನಿಗದಿಪಡಿಸಿದ್ದರು. ಈಗ ಗುದ್ದಲಿಪೂಜೆ ಆಗಿ ಕಾಮಗಾರಿ ನಿಂತಿದೆ. ಆ ಕಾರಣಕ್ಕೆ ಸಾರ್ವಜನಿಕರ ಹಿತಕ್ಕಾಗಿ ಮತ್ತೊಮ್ಮೆ ಎಚ್ಚರಿಸುವ ಕೆಲಸವನ್ನು ಕನ್ನಡಪ್ರಭ ಮಾಡುತ್ತಿದೆ. ಆದರೆ ಕಾಮಗಾರಿ ಏಕೆ ಆರಂಭವಾಗಲಿಲ್ಲ ಎಂಬುದು ಮಾತ್ರ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ತಿಳಿದಿಲ್ಲ.
ಎರಡು ವರ್ಷದ ಹಿಂದೆಯೇ ಆಗಬೇಕಿದ್ದ ಕಾಮಗಾರಿಗೆ ಈಗ ಗುದ್ದಲಿ ಪೂಜೆ ನೆರವೇರಿದೆ. ಮುಂದಾದರೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕಾಮಗಾರಿ ನಡೆಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು. ಇಲ್ಲವೆ ಕಾಮಗಾರಿ ಆರಂಭಿಸುವಂತೆ ತಾಕೀತು ಮಾಡಬೇಕು.
ಕೆ.ವಿ. ಮಲ್ಲೇಶ್, 18ನೇ ವಾರ್ಡ್ ಪಾಲಿಕೆ ಸದಸ್ಯ.
ನಾಳೆ, ನಾಡಿದ್ದಿನೊಳಗೆ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಗುದ್ದಲಿ ಪೂಜೆ ನಂತರವೂ ಕಾಮಗಾರಿ ನಿಂತು, ನಿಂತು ನಡೆಯುತ್ತಿದೆ. ಈಗ ನಿಲ್ಲಿಸದೆ ಕಾಮಗಾರಿ ನಡೆಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಸ್ನೇಕ್ ಶ್ಯಾಂ, 17ನೇ ವಾರ್ಡ್ ಪಾಲಿಕೆ ಸದಸ್ಯ
ಸೇತುವೆ ನಿರ್ಮಾಣದ ಗುದ್ದಲಿ ಪೂಜೆ ಆರಂಭವಾಗಿದೆ. ಕೆಲಸಕ್ಕೆ ಅನುಮತಿ ಪತ್ರ ನೀಡಲಾಗಿದೆ. ಬಿಲ್ ಆಗಬೇಕಿದೆ. ಎರಡು ಮೂರು ದಿನಗಳಲ್ಲಿ ಕಾಮಗಾರಿ ನಡೆಯುವಂತೆ ನೋಡಿಕೊಳ್ಳುತ್ತೇನೆ.
ವಿ. ಶೈಲೇಂದ್ರ, ಉಪ ಮೇಯರ್ ಹಾಗೂ 9ನೇ ವಾರ್ಡ್
ಸೇತುವೆಯ ಹೆಚ್ಚಿನ ಭಾಗ ವಾರ್ಡ್ ನಂ.18ಕ್ಕೆ ಸೇರುತ್ತದೆ. ಆದ್ದರಿಂದ ಕೆ.ವಿ. ಮಲ್ಲೇಶ್ ಅವರನ್ನೇ ಕೇಳಿ. ನಮಗೆ ಆ ಬಗ್ಗೆ ಅಷ್ಟೊಂದು ಗೊತ್ತಿಲ್ಲ.
ಚನ್ನಪ್ಪ, ಪುರಭವನ ಸಮಿತಿ ಅಧ್ಯಕ್ಷ ಹಾಗೂ 8ನೇ ವಾರ್ಡ್ ಪಾಲಿಕೆ ಸದಸ್ಯ
ನಿರ್ದಿಷ್ಟವಾಗಿ ಯಾವ ಕಾಮಗಾರಿಯ ಬಗ್ಗೆ ಕೇಳುತ್ತಿದ್ದೀರಿ ತಿಳಿಯುತ್ತಿಲ್ಲ. ನಮ್ಮ ಎಂಜಿನಿಯರ್ ಕೇಳಿ ನೋಡೋಣ. ನಾನು ಈಗ ಹೊರಗೆ ಇದ್ದೇನೆ. ನಾಳೆ ಬೇಕಿದ್ದರೆ ಕೇಳಿ ಹೇಳುತ್ತೇನೆ.
ಪಿ.ಜಿ. ರಮೇಶ್, ಪಾಲಿಕೆ ಆಯುಕ್ತ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

