ಮೈಸೂರು

ಪಿರಿಯಾಪಟ್ಟಣ ಪಪಂ ಕೈ ತೆಕ್ಕೆಗೆ

Published On :

ಪಿರಿಯಾಪಟ್ಟಣ: ಪಿರಿಯಾಪಟ್ಟಣ ಪಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷದ ಸದಸ್ಯೆ ರತ್ನ ಹಾಗೂ ಉಪಾಧ್ಯಕ್ಷರಾಗಿ ಅಬ್ದುಲ್ ಅಜೀಜ್ ಆಯ್ಕೆಯಾದರು. ಪ. ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯೆ ರತ್ನ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆ ರತ್ನ ಅವಿರೋಧವಾಗಿ ಆಯ್ಕೆಯಾದರು.
ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಸದಸ್ಯ ಅಬ್ದುಲ್ ಅಜೀಜ್ ಹಾಗೂ ಜೆಡಿಎಸ್ ಪಕ್ಷದ ಸದಸ್ಯ ಮಂಜುನಾಥ್‌ಸಿಂಗ್ ನಾಮಪತ್ರ ಸಲ್ಲಿಸಿದರು. ಸದಸ್ಯರು ಕೈ ಎತ್ತುವ ಮೂಲಕ ಚುನಾವಣೆಯನ್ನು ನಡೆಯಿತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ಸುವರ್ಣ, ಅಬ್ದುಲ್ ಅಜೀಜ್, ತ್ರಿನೇಶ್, ಮಂಜು, ರತ್ನ, ಸೌಭಾಗ್ಯ ಹಾಗೂ ಶಾಸಕ ಕೆ. ವೆಂಕಟೇಶ್ ಮತ್ತು ಸಂಸದ ಎಚ್. ವಿಶ್ವನಾಥ್ ತಮ್ಮ ಪಕ್ಷದ ಅಭ್ಯರ್ಥಿ ಅಬ್ದುಲ್ ಅಜೀಜ್ ಪರವಾಗಿ ಕೈ ಎತ್ತಿದರೆ, ಕಾಂಗ್ರೆಸ್ ಪಕ್ಷದ ಸದಸ್ಯರಾದ ಸಣ್ಣಪ್ಪ, ಜೆಡಿಎಸ್ ಅಭ್ಯರ್ಥಿ ಮಂಜುನಾಥ್‌ಸಿಂಗ್‌ಗೆ ಕೈ ಎತ್ತಿದರು.
ಜೆಡಿಎಸ್ ಪಕ್ಷದ ಪಿ.ಎಂ. ಮಹದೇವ್, ಮಂಜುನಾಥ್‌ಸಿಂಗ್, ವೇಣುಗೋಪಾಲ್, ಅಂಜದ್‌ಷರೀಫ್, ನಾಗರತ್ನ, ಪಿ.ವಿ. ನಂಜುಂಡಸ್ವಾಮಿ, ತನುಜಾ ಜೆಡಿಎಸ್ ಅಭ್ಯರ್ಥಿ ಮಂಜುನಾಥ್‌ಸಿಂಗ್‌ಗೆ ಕೈ ಎತ್ತುವ ಮೂಲಕ ಬೆಂಬಲ ವ್ಯಕ್ತಪಡಿಸಿದರು. ಇದರಿಂದಾಗಿ ಇಬ್ಬರೂ ಅಭ್ಯರ್ಥಿಗಳು ತಲಾ 8 ಮತಗಳನ್ನು ಪಡೆದು ಕೊಂಡರು.ಸಂಸದ ಎಚ್. ವಿಶ್ವನಾಥ್ ವಿಜೇತ ಅಭ್ಯರ್ಥಿಗಳಿಗೆ ಶುಭ ಕೋರಿದರು. ಅಧ್ಯಕ್ಷೆ ರತ್ನ ತಮ್ಮನ್ನು ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಉಪಾಧ್ಯಕ್ಷ ಅಬ್ದುಲ್ ಅಜೀಜ್ ಸಿಕ್ಕಿರುವ ಅವಕಾಶವನ್ನು ಬಳಸಿಕೊಂಡು ಶಕ್ತಿಮೀರಿ ಪಟ್ಟಣದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ಲಾಟರಿ ಮೂಲಕ ನಡೆಯಿತು ಉಪಾಧ್ಯಕ್ಷರ ಆಯ್ಕೆ
ಉಪಾಧ್ಯಕ್ಷ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಸಮಬಲ ಸಾಧಿಸಿದ ಹಿನ್ನೆಲೆಯಲ್ಲಿ ಲಾಟರಿ ಮೂಲಕ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಲಾಟರಿಯಲ್ಲಿ ಅಬ್ದುಲ್ ಅಜೀಜ್ ಗೆಲುವು ಸಾಧಿಸಿದರು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಎಸ್.ಪಿ. ಮೋಹನ್ ಕರ್ತವ್ಯ ನಿರ್ವಹಿಸಿದರು.
ಶಾಸಕರ ಅಸಮಾಧಾನ: ರಾಜಕಾರಣದಲ್ಲಿ ಪಕ್ಷದ ಬಗ್ಗೆ ಅರಿವು, ನಿಷ್ಟೆ ಇಲ್ಲದವರು ಮಾಡುವ ಕೆಲಸವನ್ನು ತಮ್ಮ ಪಕ್ಷದ ಪಪಂ ಸದಸ್ಯ ಮಾಡಿದ್ದಾರೆ ಎಂದು ಶಾಸಕ ಕೆ. ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು. ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ನಂತರ ಚುನಾಯಿತರಾದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಪಟ್ಟಣ ಪಂಚಾಯ್ತಿಯಲ್ಲಿ ತಮ್ಮ ಪಕ್ಷಕ್ಕೆ ಬಹುಮತವಿದ್ದರೂ ಸಹ ತಮ್ಮ ಪಕ್ಷದ ಒಬ್ಬ ಸದಸ್ಯ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಬೇಕಾಯಿತು ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.