ಸರ್ಕಾರಿ ಗೌರವದೊಂದಿಗೆ ವೀರಯೋಧನ ಅಂತ್ಯಕ್ರಿಯೆ
ಕೆ.ಆರ್. ನಗರ: ಜಮ್ಮುವಿನಲ್ಲಿ ಭಾರತೀಯ ಸೇನಾ ಪಡೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ವೀರಮರಣ ಹೊಂದಿದ ತಾಲೂಕಿನ ಬಡಕನಕೊಪ್ಪಲು ಗ್ರಾಮದ ಕಾಂತರಾಜೇಗೌಡ ಮತ್ತು ಧನಲಕ್ಷ್ಮಿ ಅವರ ಪುತ್ರ ಸುನಿಲ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಸ್ವಗ್ರಾಮದ ಜಮೀನಿನಲ್ಲಿ ನೆರವೇರಿಸಲಾಯಿತು.
ಬೆಳಗ್ಗೆ 7.30ಕ್ಕೆ ಪಟ್ಟಣದ ಹೊರವಲಯದಲ್ಲಿರುವ ತೋಪಮ್ಮ ದೇವಾಲಯದ ಬಳಿಗೆ ಆಗಮಿಸಿದ ವೀರ ಯೋಧನ ಮೃತದೇಹವನ್ನು ಸಂಸದ ಎಚ್. ವಿಶ್ವನಾಥ್, ತಹಸೀಲ್ದಾರ್ ಶಿವಶಂಕರಪ್ಪ, ಉಪತಹಸೀಲ್ದಾರ್ ಎಂ.ಎಸ್. ಯುದುಗಿರೀಶ್, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ ಸೇರಿದಂತೆ ನಗರದ ನಾಗರಿಕರು ಪುಷ್ಪಗುಚ್ಛವಿರಿಸಿ ಗೌರವದಿಂದ ಬರಮಾಡಿಕೊಂಡರು.
ನಂತರ ಕೆ.ಆರ್. ನಗರದ ವಿ.ವಿ ರಸ್ತೆಯ ಮೂಲಕ ಹಂಪಾಪುರ, ಮಂಚನಹಳ್ಳಿ ಗೇಟ್ ಮೂಲಕ ಯೋಧನ ಹುಟ್ಟೂರು ಬಡಕನಕೊಪ್ಪಲು ಗ್ರಾಮದವರೆಗೆ ತೆರೆದ ವಾಹನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಇದೇ ವೇಳೆ ಹಾಜರಿದ್ದ ಯುವಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಧೀರ ಯೋಧ ಸುನಿಲ್ಗೆ ಜಯಕಾರ ಮೊಳಗಿಸಿ ಅಶ್ರುತರ್ಪಣ ಗೈದರು.
ಬೆಳಗ್ಗೆ 8.30 ರಿಂದ ಮಧ್ಯಾಹ್ನ 12.30ರವರೆಗೆ ಯೋಧನ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಅವರ ಮನೆ ಮುಂದೆ ಇಡಲಾಗಿತ್ತು. ಬಡಕನ ಕೊಪ್ಪಲು ಸೇರಿದಂತೆ ತಾಲೂಕಿನ ಹತ್ತಾರು ಗ್ರಾಮಗಳ ಸಾರ್ವಜನಿಕರು ಮೃತ ಯೋಧನ ದರ್ಶನ ಪಡೆದು ಕುಟುಂಬದವರಿಗೆ ಸ್ವಾಂತನ ಹೇಳಿದರಲ್ಲದೆ, ಸುನಿಲ್ ಅವರ ದೇಶ ಸೇವೆಯ ಗುಣಗಾನ ಮಾಡುತ್ತಿದ್ದರು.
ಶಾಸಕ ಸಾ.ರಾ. ಮಹೇಶ್, ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯ ರಾಜಯ್ಯ, ಮಾಜಿ ಸದಸ್ಯರಾದ ಡಿ. ರವಿಶಂಕರ್, ಜಿ.ಆರ್. ರಾಮೇಗೌಡ, ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ಟಿ. ಸೋಮಶೇಖರ್, ಅಮಿತ್ ವಿ. ದೇವರಹಟ್ಟಿ, ತಾಪಂ ಸದಸ್ಯ ನಾಗಣ್ಣ, ಡಾ. ಮೆಹಬೂಬ್ಖಾನ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಬಿ. ಅಶೋಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪ್ರಭಾಕರ್ ಜೈನ್, ಕಾಂಗ್ರೆಸ್ ವಕ್ತಾರ ಎಚ್.ಡಿ. ರಾಘವೇಂದ್ರ, ಎಪಿಎಂಸಿ ಅಧ್ಯಕ್ಷ ಎಂ. ರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಉಪವಿಭಾಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ಣಖರೆ, ಡಿವೈಎಸ್ಪಿ ಶ್ರೀಹರಿ ಬರಗೂರು ಹಾಗೂ ಚುನಾಯಿತ ಜನಪ್ರತಿನಿಧಿಗಳು ಭೇಟಿ ನೀಡಿ ಅಂತಿಮ ದರ್ಶನ ಪಡೆದರು.
ಮಧ್ಯಾಹ್ನ ಒಂದು ಗಂಟೆಗೆ ಸುನಿಲ್ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿತು. ಸುನಿಲ್ ಸಹೋದರ ಸಂಜಯ್ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಇದೇ ವೇಳೆ ಪೊಲೀಸರು ಮೃತರ ಗೌರವಾರ್ಥ ಕುಶಾಲತೋಪು ಹಾರಿಸಿ, ಸರ್ಕಾರಿ ಗೌರವ ಸಲ್ಲಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಜಿಲ್ಲಾಡಳಿತದ ಪರವಾಗಿ ಪುಷ್ಪಗುಚ್ಛ ಇರಿಸಿ ಗೌರವ ಸಮರ್ಪಿಸಿದರು.
ಜಿಲ್ಲಾಡಳಿತದ ನಿರ್ಲಕ್ಷ್ಯ: ಗ್ರಾಮಸ್ಥರಿಂದ ರಸ್ತೆ ತಡೆ
ಜಮ್ಮುವಿನಲ್ಲಿ ಉಗ್ರರ ಗುಂಡಿಗೆ ಬಲಿಯಾದ ವೀರ ಯೋಧ ಸುನಿಲ್ಗೆ ಸರ್ಕಾರಿ ಗೌರವ ಸಲ್ಲಿಸದೆ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸಿದೆ ಎಂದು ಆರೋಪಿಸಿ ಬಡಕನಕೊಪ್ಪಲು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿಯಾಗಲೀ ಬಾರದೆ ಮೃತ ಯೋಧನಿಗೆ ಅಗೌರವ ತೋರಿಸಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಯೋಧನ ಅಂತ್ಯ ಸಂಸ್ಕಾರದಲ್ಲಿ ಬೇಜವಾಬ್ದಾರಿ ತೋರಿಸಿದ್ದನ್ನು ಖಂಡಿಸಿದರಲ್ಲದೆ, ಸಿಎಂ ತವರು ಜಿಲ್ಲೆಯಲ್ಲಿಯ ಅಧಿಕಾರಿಗಳ ವರ್ತನೆಯ ವಿರುದ್ದ ಕಿಡಿಕಾರಿದರು. ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಶಾಸಕ ಮಹೇಶ್ ದೂರವಾಣಿಯಲ್ಲಿ ಜಿಲ್ಲಾಧಿಕಾರಿ ಅವರನ್ನು ತರಾಟೆಗೆ ತೆಗೆದುಕೊಂಡು ಯೋಧನಿಗೆ ಅಗೌರವ ಸಲ್ಲಿಸಿದರೆ ಸಹಿಸುವುದಿಲ್ಲ ನಿಯಮದಂತೆ ನಡೆದುಕೊಳ್ಳಿ ಎಂದರು. ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ ಅಂತ್ಯಕ್ರಿಯೆ ನಡೆಯುವಲ್ಲಿಗೆ ಭೇಟಿ ನೀಡಿ ಸರ್ಕಾರಿ ಗೌರವ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

