ಚಾ.ನಗರದಲ್ಲಿ ಒಮ್ಮೆಯೂ ಅರಳದ ಕಮಲ
ಮೈಸೂರು: ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿಯ ಕಮಲ ಅರಳಿದ್ದರೂ ನೆರೆಯ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಸಾಧ್ಯವಾಗಿಲ್ಲ.
1952ರಿಂದ 1996ರವರೆಗೆ ಮೈಸೂರು ಲೋಕಸಭಾ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆ. 1998 ಹಾಗೂ 2004ರಲ್ಲಿ ಈ ಕೋಟೆಗೆ ಲಗ್ಗೆ ಹಾಕಿದ್ದು ಬಿಜೆಪಿ. ಹಳೆಯ ಮೈಸೂರು ಭಾಗದಲ್ಲಿ ಕಾಂಗ್ರೆಸ್ನ ಸಾಂಪ್ರದಾಯಿಕ ಎದುರಾಳಿಯಾದ ಜನತಾ ಪರಿವಾರದ ಕೈಯಲ್ಲಿ ಆಗದ ಕೆಲಸವನ್ನು ಬಿಜೆಪಿ ಮಾಡಿರುವುದು ವಿಶೇಷ.
ಚಾಮರಾಜನಗರ ಕ್ಷೇತ್ರ ಕೂಡ 1962ರಿಂದ 1991ರವರೆಗೆ ಕಾಂಗ್ರೆಸ್ನ ಭದ್ರಕೋಟೆ. ಅದನ್ನು 1996, 1998ರಲ್ಲಿ ಛಿದ್ರ ಮಾಡಿದ್ದು ಜನತಾದಳ. 1999ರಲ್ಲಿ ಸಂಯುಕ್ತ ಜನತಾದಳ ಹಾಗೂ 2004ರಲ್ಲಿ ಜೆಡಿಎಸ್.
ಮೈಸೂರಿನಲ್ಲಿ 1952ರಲ್ಲಿ ಕಾಂಗ್ರೆಸ್, ಕಿಸಾನ್ ಮಜ್ದೂರ್ ಪ್ರಜಾಪಾರ್ಟಿ, 1957ರಲ್ಲಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ ಮಾತ್ರ ಸ್ಪರ್ಧಿಸಿದ್ದವು. 1967ರ ಹೊತ್ತಿಗೆ ಕಾಂಗ್ರೆಸ್, ಎಸ್ಎಸ್ಪಿ ಜೊತೆಗೆ ಭಾರತೀಯ ಜನಸಂಘದಿಂದ ಜೆ.ಎಸ್.ರಾಮನ್ ಕಣಕ್ಕಿಳಿದಿದ್ದರು. ಆಗ ಗೆದ್ದ ಕಾಂಗ್ರೆಸ್ನ ಎಚ್.ಡಿ. ತುಳಸೀದಾಸ್ ಶೇ.40ರಷ್ಟು ಮತಗಳನ್ನು ಪಡೆದರೆ, ರಾಮನ್ ಪಡೆದಿದ್ದು ಕೇವಲ ಶೇ.6.83ರಷ್ಟು ಮತಗಳು ಮಾತ್ರ.
ಚಾಮರಾಜನಗರದಲ್ಲಿ 1962ರಲ್ಲಿ ಕಾಂಗ್ರೆಸ್, ಪ್ರಜಾ ಸೋಷಲಿಸ್ಟ್ ಪಾರ್ಟಿ, 1967ರಲ್ಲಿ ಕಾಂಗ್ರೆಸ್, ಸ್ವತಂತ್ರ ಪಕ್ಷ ಮಾತ್ರ ಸ್ಪರ್ಧಿಸಿದ್ದವು. 1971ರಲ್ಲಿ ಎರಡೂ ಕಡೆ ಕಾಂಗ್ರೆಸ್ ಮತ್ತು ಸಂಸ್ಥಾ ಕಾಂಗ್ರೆಸ್ ಸ್ಪರ್ಧಿಸಿದ್ದವು. 1977ರ ಹೊತ್ತಿಗೆ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತ್ತು. ಹೀಗಾಗಿ ಎರಡೂ ಕಡೆಯೂ ಭಾರತೀಯ ಲೋಕದಳದ ಹೆಸರಿನಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. 1980ರಲ್ಲಿ ಬಿಜೆಪಿ ರಚನೆಯಾದರೂ ಎರಡೂ ಕಡೆಯೂ ಸ್ಪರ್ಧಿಸಿರಲಿಲ್ಲ. 1984ರ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಲಿಲ್ಲ.
2009ರಲ್ಲಿ ಚಾಮರಾಜನಗರದಲ್ಲಿ ಮಾಜಿ ಶಾಸಕ ಎ.ಆರ್.ಕೃಷ್ಣಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ನ ಆರ್. ಧ್ರುವನಾರಾಯಣ ಅವರಿಗೆ ಪ್ರಬಲ ಪೈಪೋಟಿ ನೀಡಿ, 4,002 ಮತಗಳ ಅಂತರದಿಂದ ಸೋತರು.
ಈ ಬಾರಿಯ ಚುನಾವಣೆಯಲ್ಲಿ ಮೈಸೂರಿನಿಂದ ಅಂಕಣಕಾರ ಪ್ರತಾಪ್ ಸಿಂಹ, ಚಾಮರಾಜನಗರಿಂದ ಎ.ಆರ್. ಕೃಷ್ಣಮೂರ್ತಿ ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ.
1996ರಲ್ಲಿ ಚಾಮರಾಜನಗರಿಂದ ಎಲ್.ಶಿವಲಿಂಗಯ್ಯ ಸ್ಪರ್ಧಿಸಿ 94,373 ಮತಗಳಿಗೆ ತೃಪ್ತಿಪಟ್ಟುಕೊಂಡರು. ಮೈಸೂರಿನಿಂದ ತೋಂಟದಾರ್ಯ ಎರಡನೇ ಬಾರಿಗೆ ಸ್ಪರ್ಧಿಸಿ, 1,62,630 ಮತಗಳನ್ನು ಪಡೆದರು.
2004ರಲ್ಲಿ ಮೈಸೂರಿನಿಂದ ಬಿಜೆಪಿಯ ಸಿ.ಎಚ್.ವಿಜಯಶಂಕರ್ ಎರಡನೇ ಬಾರಿ ಗೆದ್ದರು. ಚಾಮರಾಜನಗರದಲ್ಲಿ ಜೆಡಿಯುಗೆ ಸ್ಥಾನ ಬಿಟ್ಟು ಕೊಡಲಾಗಿತ್ತು. ಎನ್.ಚಾಮರಾಜ್ ಅಭ್ಯರ್ಥಿಯಾಗಿ 91,629 ಮತ ಗಳಿಸಿದ್ದರು.
2009ರ ಚುನಾವಣೆ ವೇಳೆಗೆ ಮೈಸೂರು ಸಾಮಾನ್ಯ ಕ್ಷೇತ್ರದ ಸ್ವರೂಪವೇ ಬದಲಾಗಿತ್ತು. ಕೆ.ಆರ್.ನಗರ ಪಕ್ಕದ ಮಂಡ್ಯಕ್ಕೂ, ಎಚ್.ಡಿ.ಕೋಟೆ ಪಕ್ಕದ ಚಾಮರಾಜನಗರಕ್ಕೂ ಸೇರ್ಪಡೆಯಾಗಿತ್ತು. ಹೊಸದಾಗಿ ಇಡಿ ಕೊಡಗು ಜಿಲ್ಲೆ ಮೈಸೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬಂದಿತ್ತು. ಬಿಜೆಪಿಯಿಂದ ವಿಜಯಶಂಕರ್ ನಾಲ್ಕನೇ ಬಾರಿ ಸ್ಪರ್ಧಿಸಿ, 7,691 ಮತಗಳ ಅಂತರದಿಂದ ಎರಡನೇ ಸೋಲು ಅನುಭವಿಸಿದರು.
1991ರ ಚುನಾವಣೆ ವೇಳೆಗೆ ದೇಶಾದ್ಯಂತ ಅಯೋಧ್ಯೆ ಪ್ರಕರಣ ಭಾರಿ ಸದ್ದು ಮಾಡಿತ್ತು. ಚಾಮರಾಜನಗರದಿಂದ ಎಲ್. ಶಿವಲಿಂಗಯ್ಯ ಸ್ಪರ್ಧಿಸಿ, 1,48,456 ಮತಗಳನ್ನು ಪಡೆದು ಗಮನ ಸೆಳೆದರು. ಮೈಸೂರಿನಿಂದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಪರ್ಧಿಸಿ, 2,08,999 ಮತಗಳನ್ನು ಪಡೆದು, ಕಾಂಗ್ರೆಸ್ನ ಚಂದ್ರಪ್ರಭಾ ಅರಸು ಅವರ ಎದುರು ಸೋತರು. ಎರಡು ಬಾರಿ ಕಾಂಗ್ರೆಸ್ನಿಂದ ಗೆದ್ದಿದ್ದ ಒಡೆಯರ್ ಅವರು ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಕಾರಣಕ್ಕಾಗಿ ಹಾಗೂ ಮಂತ್ರಿಯಾಗಬೇಕು ಎಂಬ ಉದ್ದೇಶದಿಂದ ಬಿಜೆಪಿ ಸೇರಿದ್ದರು. ಪ್ರಚಾರಕ್ಕೆ ಎಲ್.ಕೆ. ಆಡ್ವಾಣಿ ಅವರೇ ಬಂದಿದ್ದರು. ಆದರೂ ಬಿಜೆಪಿ ಗೆಲ್ಲಲಾಗಲಿಲ್ಲ.
1998ರ ಚುನಾವಣೆಯಲ್ಲಿ ಒಡೆಯರ್ ಸ್ಪರ್ಧಿಸಿರಲಿಲ್ಲ. ಬಿಜೆಪಿ ಆಗ ಹುಣಸೂರಿನ ಶಾಸಕರಾಗಿದ್ದ ಕುರುಬ ಜನಾಂಗದ ಸಿ.ಎಚ್. ವಿಜಯಶಂಕರ್ ಅವರಿಗೆ ಟಿಕೆಟ್ ನೀಡಿತ್ತು. ಇದರ ಲಾಭ ಪಡೆದ ಅವರು ಗೆಲವಿನ ನಗೆ ಬೀರಿದರು. ಚಾಮರಾಜನಗರ ಕ್ಷೇತ್ರವನ್ನು ಬಿಜೆಪಿಯು ಲೋಕಶಕ್ತಿಗೆ ಬಿಟ್ಟುಕೊಟ್ಟಿತ್ತು. ಸುಶೀಲಾ ಕೇಶವಮೂರ್ತಿ ಸ್ಪರ್ಧಿಸಿ, 75,165 ಮತ ಗಳಿಸಿದ್ದರು.
1999ರಲ್ಲಿ ಮೈಸೂರಿನಿಂದ ಸಿ.ಎಚ್. ವಿಜಯಶಂಕರ್ ಮತ್ತೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆದರೆ ಕಾಂಗ್ರೆಸ್ನ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಅವರ ಎದುರು 13,431 ಮತಗಳ ಅಂತರದಿಂದ ಸೋತರು. ಚಾಮರಾಜನಗರ ಟಿಕೆಟ್ ಅನ್ನು ಜೆಡಿಯುನ ವಿ. ಶ್ರೀನಿವಾಸಪ್ರಸಾದ್ ಅವರಿಗೆ ಬಿಟ್ಟುಕೊಡಲಾಗಿತ್ತು. ಅವರು ಗೆದ್ದರು.
ಬಿಜೆಪಿಯ ಮೊದಲ ಅಭ್ಯರ್ಥಿ ತೋಂಟದಾರ್ಯ
1989ರಲ್ಲಿ ಮೈಸೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ತೋಂಟದಾರ್ಯ ಸ್ಪರ್ಧಿಸಿ, 25,398 ಮತಗಳನ್ನು ಪಡೆದರು. ಚಾಮರಾಜನಗರದಲ್ಲಿ ಯಾರೂ ಸ್ಪರ್ಧಿಸಲಿಲ್ಲ.
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

