ಮೈಸೂರು

ಎಟಿಐಗೆ ಮೂರು ಪ್ರಶಸ್ತಿ ಸಂಭ್ರಮ

Published On :

ಮೈಸೂರು: ಮೈಸೂರಿನಲ್ಲಿರುವ ಆಡಳಿತ ತರಬೇತಿ ಸಂಸ್ಥೆಯು (ಎಟಿಐ) ರಾಷ್ಟ್ರೀಯ ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕಾಗಿ ಮೂರು ಪ್ರಶಸ್ತಿಗಳನ್ನು ಪಡೆದಿದೆ.
ಪಿಪಿಪಿ ಕೋರ್ಸುಗಳನ್ನು ಆರಂಭಿಸಿ ಯಶಸ್ವಿಯಾಗಿರುವುದು, ಸಂಸ್ಥೆ ಹಮ್ಮಿಕೊಂಡ ತರಬೇತಿ ಶಿಬಿರದಲ್ಲಿ ನಿರೀಕ್ಷೆಗಿಂತ ಹೆಚ್ಚು ಅಭ್ಯರ್ಥಿಗಳು ತರಬೇತಿ ಪಡೆದಿರುವುದು ಹಾಗೂ ಪಿಪಿಪಿಯಲ್ಲಿ ಪ್ರಾಥಮಿಕ ಹಾಗೂ ಹೆಚ್ಚು ಅವಕಾಶಗಳುಳ್ಳ ಕೋರ್ಸ್ ಪರಿಚಯಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಕೇಂದ್ರ ಹಣಕಾಸು ಇಲಾಖೆಯ ವೆಚ್ಚ ವಿಭಾಗದ ಕಾರ್ಯದರ್ಶಿ ಡಾ.ಎ. ಮಾಯರಾಂ ಅವರಿಂದ ಎಟಿಐ ಮಹಾ ನಿರ್ದೇಶಕಿ ಡಾ. ಅಮಿತಾ ಪ್ರಸಾದ್, ನೋಡೆಲ್ ಅಧಿಕಾರಿ ಪ್ರೊ. ನಾರಾಯಣಶಾಸ್ತ್ರಿ ಪ್ರಶಸ್ತಿ ಸ್ವೀಕರಿಸಿದರು.
ಆಡಳಿತ ತರಬೇತಿ ಸಂಸ್ಥೆಯು ಕಳೆದ ಮೂರು ವರ್ಷಗಳಲ್ಲಿ ಪಿಪಿಪಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ. ಲೋಕೋಪಯೋಗಿ, ಪ್ರವಾಸೋದ್ಯಮ, ಆರೋಗ್ಯ, ಇಂಧನ, ನಗರಾಭಿವೃದ್ಧಿ, ಕೃಷಿ, ರೇಷ್ಮೆಕೃಷಿ, ಕೃಷಿ ಮಾರುಕಟ್ಟೆ ಸೇರಿದಂತೆ ಒಟ್ಟು 10 ವಿಭಾಗಗಳ 550 ಅಧಿಕಾರಿಗಳಿಗೆ ತರಬೇತಿ ನೀಡಿದೆ.
ವಿದ್ಯುತ್ ವ್ಯತ್ಯಯ
ಮೈಸೂರು: ದೇವನೂರು ವಿದ್ಯುತ್ ವಿತರಣಾ ಕೇಂದ್ರದಿಂದ ಹೊರ ಹೊಮ್ಮುವ 11 ಕೆ.ವಿ. ರಾಜೀವ್‌ನಗರ ಫೀಡರ್‌ನ ಮಾರ್ಗ ಸ್ಥಳಾಂತರ ಕಾರ್ಯ ಹಮ್ಮಿಕೊಂಡಿರುವುದರಿಂದ ಮಾ.15ರ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗಲಿದೆ. ರಾಜೀವ್‌ನಗರ 1, 2 ಹಾಗೂ 3ನೇ ಹಂತ, ಶಾಂತಿನಗರ, ಮಾದೇಗೌಡ ವೃತ್ತ, ಶಿವಣ್ಣ ವೃತ್ತ, ರಾಜೀವ್‌ನಗರ ವರ್ತುಲ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ನಮೋ ಬೈಕ್‌ರ್ಯಾಲಿ
ಮೈಸೂರು: ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ನಮೋ ಬ್ರಿಗೇಡ್‌ನಿಂದ ಮಾ.16ರ ಬೆಳಗ್ಗೆ 9ಕ್ಕೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಚಾಮುಂಡಿಬೆಟ್ಟಕ್ಕೆ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ.
ಇಂದು, ನಾಳೆ ವಿಚಾರ ಸಂಕಿರಣ
ಮೈಸೂರು: ಶ್ರೀಸುದರ್ಶನ ನರಸಿಂಹ ಕ್ಷೇತ್ರ ಹಾಗೂ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಮಾ. 15, 16ರಂದು ದಸರಾ ವಸ್ತುಪ್ರದರ್ಶನದ ಪರಂಪರೆ ಇಲಾಖೆ ಸಭಾಂಗಣದಲ್ಲಿ ಧರ್ಮ, ಸಾಹಿತ್ಯ ಮತ್ತು ಕಲೆಯಲ್ಲಿ ಮತ್ಸ್ಯಾವತಾರ ಕುರಿತ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮಾ. 15ರ ಬೆಳಗ್ಗೆ 10.30ಕ್ಕೆ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಡಾ.ಸಿ.ಜಿ. ಬೆಟ್‌ಸೂರ್ ಮಠ ಉದ್ಘಾಟಿಸಲಿದ್ದು, ಪ್ರೊ. ಭಾಷ್ಯಂ ಸ್ವಾಮಿ ಸಾನಿಧ್ಯ ವಹಿಸುವರು. ಕೇರಳದ ಪ್ರಾಚ್ಯವಸ್ತು ಸಂಗ್ರಹಾಲಯಗಳ ಮಾಜಿ ನಿರ್ದೇಶಕ ಡಾ.ಟಿ.ಎಸ್. ಸತ್ಯಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಭಾರತೀಯ ವಿದ್ಯಾಭವನ ಅಧ್ಯಕ್ಷ ರಾಮಾನುಜ, ವಿಶ್ರಾಂತ ಕುಲಪತಿ ಡಾ.ವಿ. ಕಣ್ಣನ್ ಅತಿಥಿಗಳಾಗಿ ಭಾಗವಹಿಸುವರು ಎಂದು ಮೈಸೂರು ಭಾರತೀಯ ವಿದ್ಯಾಭವನದ ಅಧ್ಯಕ್ಷ ಡಾ.ಎ.ವಿ. ನರಸಿಂಹಮೂರ್ತಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 16ರ ಸಂಜೆ 4ಕ್ಕೆ ನಡೆಯುವ ಸಮಾರೋಪದಲ್ಲಿ ವಿಶ್ರಾಂತ ಕುಲಪತಿ ಡಾ.ವಿ. ಕಣ್ಣನ್, ಡಾ. ರವಿಶಂಕರ್ ಭಾಗವಹಿಸುವರು. ಈ ಎರಡು ದಿನಗಳ ಕಾಲ ಹೈದರಾಬಾದ್, ವಿಶಾಖಪಟ್ಟಣಂ, ತಿರುಪತಿ, ತಂಜಾವೂರು, ಮದರಾಸು, ಮೈಸೂರು, ಬೆಂಗಳೂರು, ಹಂಪಿ ಮುಂತಾದ ವಿವಿಗಳ ವಿದ್ವಾಂಸರು ಹಾಗೂ ಮುಂಬೈ ಇಂಡಲಾಜಿಕಲ್ ಸಂಸ್ಥೆಯವರು ಭಾಗವಹಿಸಿ ಪುರಾಣ, ಇತಿಹಾಸ, ಶಾಸನನಾಣ್ಯ, ದೇವಾಲಯ, ಶಿಲ್ಪ, ಸಂಗೀತ, ಚಿತ್ರಕಲೆ ಮುಂತಾದವುಗಳಲ್ಲಿ ಮತ್ಸ್ಯಾವತಾರ ಯಾವ ರೀತಿ ಬಿಂಬಿತವಾಗಿದೆ ಎಂಬುದರ ಬಗ್ಗೆ ವಿಶದವಾಗಿ ಭಾಷಣ ಮಾಡುವರು ಎಂದರು. ವರ್ಷಕ್ಕೆ ಎರಡು ಅವತಾರಗಳಂತೆ ದಶಾವತಾರಗಳನ್ನು ನಡೆಸಲು ಚಿಂತಿಸಲಾಗಿದೆ. ಮುಂದೆ ವಾಮನ ಅವತಾರದ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ಸಂಕಿರಣದ ಸಂಚಾಲಕ ಬಿ.ಎಸ್. ಕೃಷ್ಣಪ್ರಸಾದ್ ತಿಳಿಸಿದರು.
ದೇಗುಲ ಅಭಿವೃದ್ಧಿಗೆ ಅನುದಾನ
ಮೈಸೂರು: ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ವ್ಯಾಪ್ತಿಯಲ್ಲಿನ ವಿವಿಧ ದೇವಸ್ಥಾನಗಳ ಅಭಿವೃದ್ಧಿಗೆ ಧಾರ್ಮಿಕ ದತ್ತಿ ಇಲಾಖೆಯು 1.26 ಕೋಟಿ ಅನುದಾನ ಬಿಡುಗಡೆಗೊಳಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಗೋ. ಮಧುಸೂಧನ್ ತಿಳಿಸಿದ್ದಾರೆ.  ಮಂಡ್ಯ ಜಿಲ್ಲಾ ವ್ಯಾಪ್ತಿಯ 18 ದೇವಾಲಯಗಳು, ಹಾಸನ ಜಿಲ್ಲೆಯ 2 ದೇವಾಲಯಗಳು, ಮೈಸೂರು ಜಿಲ್ಲೆಯ 9 ದೇವಾಲಯಗಳು ಹಾಗೂ ಚಾಮರಾಜನಗರ ಜಿಲ್ಲೆಯ 8 ದೇವಾಲಯಗಳ ಅಭಿವೃದ್ಧಿಗೆ ಅನುದಾನ ನೀಡುವಂತೆ ಮುಜರಾಯಿ ಇಲಾಖೆ ಸಚಿವ ಪ್ರಕಾಶ್ ಹುಕ್ಕೇರಿ ಅವರನ್ನು ಫೆ.15ರಂದು ಕೋರಿದ್ದ ಹಿನ್ನೆಲೆಯಲ್ಲಿ, ಈ ಅನುದಾನವನ್ನು ಸಚಿವರು ಮಾ.4ರಂದು ಬಿಡುಗಡೆಗೊಳಿಸಿದ್ದಾರೆ ಎಂದಿದ್ದಾರೆ.   ಮೈಸೂರು ದೇವಾಲಯಗಳ ಅಭಿವೃದ್ಧಿಗೆ 69.50 ಲಕ್ಷ, ಮಂಡ್ಯ ದೇವಾಲಯಗಳಿಗೆ 31.50 ಲಕ್ಷ, ಹಾಸನ ದೇವಾಲಯಗಳಿಗೆ 7.50 ಲಕ್ಷ ಹಾಗೂ ಚಾಮರಾಜನಗರ ದೇವಾಲಯಗಳಿಗೆ 17.50 ಲಕ್ಷ ಒಟ್ಟು 1.26 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸರಣಿ ಪ್ರತಿಭಟನೆಗಳು; ಮನೆ ನಿರ್ಮಿಸಿಕೊಡಲು ಒತ್ತಾಯಿಸಿ ಧರಣಿ
ಮೈಸೂರು: ನಗರದ ಯಾದವಗಿರಿಯ ಕೊಳಚೆ ಪ್ರದೇಶದ ನಿವಾಸಿಗಳಿಗೆ ಕೂಡಲೆ ನರ್ಮ್ ಯೋಜನೆಯಡಿ ಮನೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ಶ್ರೀ ವಾಲ್ಮೀಕಿ ನಾಯಕರ ಸಂಘದ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಿದರು.
ಯಾದವಗಿರಿ ಕೊಳಚೆ ಪ್ರದೇಶದಲ್ಲಿ 45 ವರ್ಷಗಳಿಂದ ಪರಿಶಿಷ್ಟ ವರ್ಗದ ನಾಯಕ ಸಮಾಜದವರು ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯವರು ಭೇಟಿ ನೀಡಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಪಾಲಿಕೆಯಿಂದ ಮನೆ ನಿರ್ಮಿಸಲು ಅನುಮತಿ ನೀಡಲಾಗಿತ್ತು. ಆದರೆ ಈಗ ಕೊಳಗೇರಿ ಅಭಿವೃದ್ಧಿ ಮಂಡಳಿ ಆ ಸ್ಥಳ ರೇಲ್ವೆ ಇಲಾಖೆಗೆ ಸೇರಿದ್ದು ಎಂಬ ನೆಪ ಹೇಳಿ ಕಾಲ ಕಳೆಯುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಮಧ್ಯೆ ರೇಲ್ವೆ ಅಧಿಕಾರಿಗಳು ನಮ್ಮನ್ನು ಖಾಲಿ ಮಾಡುವಂತೆ ಸೂಚಿಸಿದ್ದಾರೆ. ಇದರಿಂದಾಗಿ ಹಲವು ಕುಟುಂಬಗಳು ಬೀದಿಗೆ ಬೀಳುವ ಆತಂಕದಲ್ಲಿವೆ. ಆದ್ದರಿಂದ ಕೂಡಲೆ ಈ ಸಮಸ್ಯೆ ಬಗೆಹರಿಸಬೇಕು. ತಪ್ಪಿದರೆ ನಿರಂತರ ಪ್ರತಿಭಟಿನೆ ನಡೆಸುವುದಾಗಿ ಎಚ್ಚರಿಸಿದರು. ಮಧುವನ ಚಂದ್ರು, ದೇವರಾಜು ಟಿ. ಕಾಟೂರು, ದ್ಯಾವಪ್ಪನಾಯಕ ಇದ್ದರು.
ಶುಲ್ಕ ವಿನಾಯಿತಿಗೆ ಆಗ್ರಹ
ಮೈಸೂರು: ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ವಿನಾಯಿತಿಯನ್ನು ಮರು ಭರಿಸುವಂತೆ ಆದೇಶಿಸಿರುವುದನ್ನು ಖಂಡಿಸಿ ಮಹಾರಾಜ ಕಾಲೇಜು ಬಹುಜನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕ್ರಾಫರ್ಡ್ ಭವನ ಬಳಿ ಶುಕ್ರವಾರ ಪ್ರತಿಭಟಿಸಿದರು.
2013- 14ನೇ ಸಾಲಿನ ವಿದ್ಯಾರ್ಥಿಗಳಿಗೆ ನೀಡಿದ ಪರೀಕ್ಷಾ ಶುಲ್ಕ ವಿನಾಯಿತಿಯನ್ನು ಮರುಭರಿಸಬೇಕು ಎಂದು ಮೈಸೂರು ವಿವಿ ಆದೇಶ ನೀಡಿದೆ. ಶುಲ್ಕ ವಿನಾಯಿತಿ ಆದೇಶವನ್ನು ತಡೆ ಹಿಡಿದಿದೆ. ಆದ್ದರಿಂದ ಕೂಡಲೆ ವಿವಿಯು ಶುಲ್ಕ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಸಿ.ಎಂ. ಪ್ರತಾಪ್, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಇದ್ದರು.
ನಗದು ವರ್ಗಾವಣೆ ಆದೇಶಕ್ಕೆ ವಿರೋಧ
ಮೈಸೂರು: ವಿದ್ಯಾರ್ಥಿಗಳ ಹೆಚ್ಚುವರಿ ಶುಲ್ಕ ಮರುಭರಿಕೆ ವ್ಯವಸ್ಥೆ ಸರಿಯಲ್ಲ ಎಂದು ಆರೋಪಿಸಿ ಎಐಡಿವೈಒ, ಎಐಡಿಎಸ್‌ಒ ಮತ್ತು ಎಐಎಂಎಸ್‌ಎಸ್ ಪದಾಧಿಕಾರಿಗಳು ಕ್ರಾಫರ್ಡ್ ಭವನ ಬಳಿ ಪ್ರತಿಭಟಿಸಿದರು. ಬಹುಪಾಲು ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದಿರುತ್ತಾರೆ. ಅವರು ಇಂಗ್ಲಿಷ್‌ನಂಥ ವಿಷಯಗಳಲ್ಲಿ ಅನುತ್ತೀರ್ಣರಾಗುವುದು ಸಾಮಾನ್ಯ. ಇಂಥ ಸಂದರ್ಭಗಳಲ್ಲಿ ಬಹಳ ಮಂದಿ ವಿದ್ಯಾರ್ಥಿಗಳು ಶುಲ್ಕ ವಿನಾಯಿತಿ ಸೌಲಭ್ಯದಿಂದ ವಂಚಿತರಾಗುವುದು ಸಾಮಾನ್ಯ ಎಂದರು. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಪ್ರೋತ್ಸಾಹ ನೀಡಬೇಕು. ಆರ್ಥಿಕ ಹೊರೆಯಾಗಬಾರದು ಎಂಬ ಉದ್ದೇಶದಿಂದ ಇದುವರೆಗೆ ವಿವಿಧ ಶುಲ್ಕಗಳಲ್ಲಿ ವಿನಾಯಿತಿ ನೀಡಲಾಗುತ್ತಿತ್ತು. ಈಗ ಈ ಹೊಸ ಆದೇಶದಿಂದ ವಿದ್ಯಾರ್ಥಿಗಳಿಗೆ ಅಂಥ ವಿನಾಯಿತಿ ದೊರೆಯಲಾರದು. ಶುಲ್ಕ ಕಟ್ಟುವಾಗ ದೊರಕದ ವಿನಾಯಿತಿ ಮುಂದೆಂದೋ ಬ್ಯಾಂಕ್ ಖಾತೆಗೆ ಬರುವುದರಿಂದ ವಿದ್ಯಾರ್ಥಿಗಳ ಹೊರೆ ಹೇಗೆ ಕಡಿಮೆ ಆಗಲಿದೆ ಎಂದು ಪ್ರಶ್ನಿಸಿದರು. ಆದ್ದರಿಂದ ನೇರ ನಗದು ವರ್ಗಾವಣೆ ವ್ಯವಸ್ಥೆ ಸಂಪೂರ್ಣವಾಗಿ ವಿದ್ಯಾರ್ಥಿಗಳ ಹಿತಕ್ಕೆ ಮಾರಕವಾಗಿದೆ. ನೇರ ನಗದು ವರ್ಗಾವಣೆ ಆದೇಶವನ್ನು ಕೂಡಲೆ ಮೈಸೂರು ವಿವಿ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಘಟನೆ ಪ್ರಮುಖರಾದ ಚಂದ್ರಶೇಖರ ಮೇಟಿ, ಪಿ.ಎಸ್. ಸಂಧ್ಯಾ, ಬಸವರಾಜು ಇದ್ದರು.

ಮರಳು ಸಾಗಣೆ ಸಂಪೂರ್ಣ ನಿಷೇಧಿಸಿ; ಪ್ರತಿಭಟನೆ
ಟಿ. ನರಸೀಪುರ: ಮರಳು ಸಾಗಾಣಿಕೆ ರಹದಾರಿ ವಿತರಣೆಯಲ್ಲಿ ಅಕ್ರಮ ನಡೆಯುತ್ತಿರುವುದನ್ನು ತಡೆಗಟ್ಟುವಂತೆ ಆಗ್ರಹಿಸಿ ತಾಲೂಕಿನ ಪರಿಣಾಮಿಪುರ ಗ್ರಾಮದ ಮರಳು ಸಂಗ್ರಹಣ ಕೇಂದ್ರದಲ್ಲಿ ಶುಕ್ರವಾರ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟಿಸಿದರು.
ಪರಿಣಾಮಿಪುರ ಮರಳು ಯಾರ್ಡ್‌ನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆ ವಿರುದ್ಧ ಸಿಡಿದೆದ್ದ ಹೊಳೆಸಾಲು ಅಂಚಿನ ಗ್ರಾಮಸ್ಥರು ಮರಳು ಗಣಿಗಾರಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಒತ್ತಾಯಿಸಿದರು.
ಮರಳು ಸಂಗ್ರಹಣಾ ಕೇಂದ್ರದಿಂದ ಲಾರಿ ಬಿಡುವುದಿಲ್ಲ ಎಂದು ಏಳೆಂಟು ಗ್ರಾಮಗಳ ಗ್ರಾಮಸ್ಥರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಸ್ಥಳಕ್ಕೆ ಭೇಟಿ ನೀಡಿದ ಲೋಕೋಪಯೋಗಿ ಇಲಾಖೆ ಎಇ ಮಹದೇವಸ್ವಾಮಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ನಮ್ಮೂರಿನಲ್ಲಿ ನಮಗಿಲ್ಲದ ಮರಳು ಮಹಾನಗರಗಳ ಪಾಲಾಗುತ್ತಿದೆ. ಯಾರ್ಡ್‌ನಲ್ಲಿ ಎತ್ತಿನ ಗಾಡಿಗಳಿಗೆ ಉಚಿತವಾಗಿಯೋ ಅಥವಾ ಶುಲ್ಕ ಪಡೆದು ಮರಳು ನೀಡಬೇಕು. ನಮಗೆ ಮರಳು ನೀಡುವವರೆಗೂ ಯಾರ್ಡ್‌ನಿಂದ ಮರಳು ಸರಬರಾಜು ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯರಾದ ಶಿವಮೂರ್ತಿ, ಶಿವಕುಮಾರಸ್ವಾಮಿ, ಬಿ.ಎಂ. ಮರಿಸ್ವಾಮಿ, ಮುಖಂಡರಾದ ಸಣ್ಣಮಾದಯ್ಯ, ಶಿವಮೂರ್ತಪ್ಪ, ಕುಮಾರ್, ಪ್ರಸನ್ನ, ಮಹದೇವು, ಮಾದೇಶ್, ಮಹದೇವಸ್ವಾಮಿ, ಟಿ.ಎಚ್. ಮಹದೇವಯ್ಯ, ಶಂಕರ್, ಕುಮಾರ್, ರಾಜಪ್ಪ ಇದ್ದರು.
ಪರ್ಮಿಟ್ ಲಾಬಿ
ಪರಿಣಾಮಿಪುರ ಮರಳು ಯಾರ್ಡ್‌ನಲ್ಲಿ ಪರ್ಮಿಟ್ ಲಾಬಿಗೆ ಕಳೆದ ಗುರುವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ತಲಕಾಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೆಲವರಿಗೆ ಮಾತ್ರ ಅನುಮತಿ ನೀಡಿ, ಮತ್ತೆ ಕೆಲವು ಲಾರಿಗಳಿಗೆ ಅನುಮತಿ ನಿರಾಕರಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.