ಮೈಸೂರು

ನವೋದಯ ಸಾಹಿತಿಗಳ ಹೊಣೆಗಾರಿಕೆ ಅನನ್ಯ: ಡಾ. ಎನ್.ಎಸ್.ತಾರಾನಾಥ್

Published On :

ಮೈಸೂರು: ನವೋದಯ ಕಾಲದ ಸಾಹಿತಿಗಳ ಸಾಮಾಜಿಕ ಹೊಣೆಗಾರಿಕೆ ಅನನ್ಯ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ. ಎನ್.ಎಸ್. ತಾರಾನಾಥ್ ಹೇಳಿದರು.
ಕುವೆಂಪು ವಿದ್ಯಾವರ್ಧಕ ಟ್ರಸ್ಟ್ ಹಾಗೂ ಕುವೆಂಪು ವಿದ್ಯಾ ಪರಿಷತ್ ವತಿಯಿಂದ ಜಯಲಕ್ಷ್ಮಿಪುರಂನ ವಿವೇಕಾನಂದ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ಪುತಿನ ಅವರ 110ನೆಯ ಜನ್ಮೋತ್ಸವದಲ್ಲಿ ಪುತಿನ ಅವರ ಜೀವನ- ಸಾಹಿತ್ಯ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಕುವೆಂಪು, ಕಾರಂತ, ಪುತಿನ ಹಾಗೂ ಬೇಂದ್ರೆ ಮುಂತಾದ ನವೋದಯ ಕಾಲಘಟ್ಟದ ಸಮಕಾಲೀನ ಸಾಹಿತಿಗಳು ಬರಿ ಕವಿಗಳಾಗಿರಲಿಲ್ಲ. ಅನೇಕ ಹೊಣೆಗಾರಿಕೆಯನ್ನು ಹೊಂದುವ ಮೂಲಕ ಅವರು ಕುಟುಂಬದ ಯಜಮಾನರಂತೆ ಸಮಾಜದ ಪರಿವರ್ತನೆಗೆ ಮುಂದಾದವರು. ಸೃಜನಶೀಲ ಹಾಗೂ ವೈಚಾರಿಕ ಕೃತಿಗಳನ್ನು  ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದವರು ಎಂದರು.   
ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕುವೆಂಪು, ಪುತಿನ ಹಾಗೂ ಬೇಂದ್ರೆ ಅವರನ್ನು ಕನ್ನಡದ ರತ್ನತ್ರಯರು ಎನ್ನುವುದುಂಟು. ಕುವೆಂಪು ಸಾಹಿತ್ಯದಲ್ಲಿ ನಿರ್ಸಗದ ಅಖಂಡತೆಯನ್ನೂ, ಬೇಂದ್ರೆ ಅವರ ಸಾಹಿತ್ಯದಲ್ಲಿ ಜಾನಪದ ಬದುಕಿನ ಆಯಾಮಗಳನ್ನೂ ಹಾಗೂ ಪುತಿನ ಸಾಹಿತ್ಯದಲ್ಲಿ ಆಧ್ಯಾತ್ಮ ಹಾಗೂ ಅನುಭಾವದ ಸ್ವರೂಪಗಳನ್ನು ಕಾಣಬಹುದು. ಇವರೆಲ್ಲರೂ ಯಾವುದೇ ಒಂದು ಸಾಹಿತ್ಯ ಪ್ರಕಾರದಲ್ಲಿ ಕೆಲಸ ಮಾಡಿದವರಲ್ಲ. ಕಾವ್ಯ, ನಾಟಕ, ಪ್ರಬಂಧ, ಸಂಪಾದನೆ, ವೈಚಾರಿಕತೆ ಮುಂತಾದವು ಸೇರಿವೆ ಎಂದರು.    
ಪುತಿನ ಅವರ ಬಾಲ್ಯ ಮೇಲುಕೋಟೆಯಲ್ಲಿ. ಅವರ ವಿದ್ಯಾಭ್ಯಾಸದ ವಿಶೇಷತೆ ಎಂದರೆ ಸಂಸ್ಕೃತ. ಅವರ ಜೀವನ ದೃಷ್ಟಿಯು ತತ್ವಶಾಸ್ತ್ರ ಪ್ರೇರಿತ. ಸಾಹಿತ್ಯವನ್ನು ನಾನಾ ರೀತಿಯಲ್ಲಿ ರೂಪಿಸಿಕೊಂಡವರು. ಅವರ ಬದುಕು ಸಾಹಿತ್ಯದ ಭಾಗವಾಗಿತ್ತು. ಕಾವ್ಯ ಹಾಗೂ ನಾಟಕ ಅವರ ಪ್ರಧಾನ ಸಾಹಿತ್ಯ ಪ್ರಕಾರವಾಗಿತ್ತು ಎಂದರು.
ಕವಿ ಪುತಿನ ಅವರು ಸಾಹಿತ್ಯ ಪ್ರೇರಣೆಗೆ ತೀನಂಶ್ರೀ ಅವರೇ ಕಾರಣ. ಮಹಾರಾಜ ಕಾಲೇಜು ವಿದ್ಯಾರ್ಥಿಯಾಗಿ ಪದವಿ ಪಡೆದು ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡಿದರು. ಬೆಂಗಳೂರಿನ ಸೈನಿಕ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರನ್ನು ಪ್ರೊ. ದೇಜಗೌ ಅವರು ಕರೆತಂದು ಕನ್ನಡ ಅಧ್ಯಯನ ಸಂಸ್ಥೆಯ ಇಂಗ್ಲಿಷ್ ಮತ್ತು ಕನ್ನಡ ನಿಘಂಟು ಕಾರ್ಯಕ್ಕೆ ತೊಡಗಿಸಿದರು ಎಂದು ಸ್ಮರಿಸಿದರು.  ಕುವೆಂಪು ವಿದ್ಯಾ ಪರಿಷತ್ ಅಧ್ಯಕ್ಷ ಡಾ.ಎಸ್.ಎನ್. ರಾಮಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ನಾಗರಾಜ್ ಸ್ವಾಗತಿಸಿದರು. ಹಂಪಿ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಪ್ರೊ. ಸಿ.ನಾಗಣ್ಣ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಹಾಗೂ ಸಾಹಿತಿ ಕ್ಯಾತನಹಳ್ಳಿ ರಾಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.