ಮೈಸೂರು

ಜೆಡಿಎಸ್‌ನ ಮೀನಾಕ್ಷಿಗೆ ಪುರಸಾರಥ್ಯ

Published On :

ನಂಜನಗೂಡು: ಪುರಸಭಾ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಸೋಮವಾರ ಪುರಸಭಾ ಕಚೇರಿಯಲ್ಲಿ ನಡೆಯಲಿದ್ದು, ಅಧ್ಯಕ್ಷರಾಗಿ ಜೆಡಿಎಸ್‌ನ ಮೀನಾಕ್ಷಿ ಹಾಗೂ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ದೊರೆಸ್ವಾಮಿ ಆಯ್ಕೆ ಬಹುತೇಕ ಖಚಿತವಾಗಿದೆ.
ಪುರಸಭೆಯಲ್ಲಿ ಒಟ್ಟು 27 ಸದಸ್ಯರ ಪೈಕಿ ಕಾಂಗ್ರೆಸ್ 10, ಜೆಡಿಎಸ್ 9, ಬಿಜೆಪಿ 7 ಹಾಗೂ ಪಕ್ಷೇತರ ಒಬ್ಬರು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲಾಗಿರುವುದರಿಂದ 6ನೇ ವಾರ್ಡಿನಿಂದ ಆಯ್ಕೆಯಾದ ಮೀನಾಕ್ಷಿ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇನ್ನು ಉಪಾಧ್ಯಕ್ಷ ಸ್ಥಾನ ಎಸ್ಸಿ ಅಭ್ಯರ್ಥಿಗೆ ಮೀಸಲಾದ ಹಿನ್ನೆಲೆಯಲ್ಲಿ 17ನೇ ವಾರ್ಡ್‌ನಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ದೊರೆಸ್ವಾಮಿ ಹಾಗೂ ಡಿ.ಆರ್. ರಾಜು ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಂತಿಮವಾಗಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಸಂಸದ ಆರ್. ಧ್ರುವನಾರಾಯಣ್, ಯು.ಎನ್. ಪದ್ಮನಾಭರಾವ್ ಅವರ ಬೆಂಬಲದ ಮೇಲೆ ಆಯ್ಕೆ ನಿರ್ಧಾರವಾಗಲಿದೆ.
ಇದೇ ವೇಳೆ ಬಿಜೆಪಿ ಸದಸ್ಯರು ತಟಸ್ಥರಾಗಿ ಉಳಿಯುವ ಮುನ್ಸೂಚನೆ ಇದೆ. ಇದರ ಲಾಭ ಕಾಂಗ್ರೆಸ್‌ಗೆ ಆಗುವ ಲಕ್ಷಣಗಳು ಗೋಚರಿಸುತ್ತಿದ್ದು, ಪಕ್ಷೇತರ ಅಭ್ಯರ್ಥಿ ಸುಂದರ್‌ರಾಜ್ ಕಾಂಗ್ರೆಸ್ ಬೆಂಬಲಿಸುವ ಸೂಚನೆ ಸಿಕ್ಕಿದೆ. ಜತೆಗೆ ಸಚಿವ ವಿ.ಶ್ರೀನಿವಾಸಪ್ರಸಾದ್, ಸಂಸದ ಆರ್. ಧ್ರುವನಾರಾಯಣ್ ಅವರ ಮತಗಳೂ ಸೇರುವುದರಿಂದ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಲಿದೆ.
ಜೆಡಿಎಸ್ ಪಕ್ಷದಿಂದ ಪುರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬಿ. ಚೆಲುವರಾಜ್ ಅವರನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಔಪಚಾರಿಕವಾಗಿ ಸ್ಪರ್ಧಿಸಲು ವರಿಷ್ಠರು ಸೂಚಿಸಿದ್ದಾರೆ. ಮೀಸಲಾತಿಯ ಲಾಭದಿಂದಾಗಿ ಜೆಡಿಎಸ್‌ಗೆ ನಂಜನಗೂಡು ಪುರಸಭೆ ಅಧ್ಯಕ್ಷೆ ಸ್ಥಾನ ಅನಾಯಾಸವಾಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ.
ಶಾಲೆಯ ಮೆಟ್ಟಿಲು ಹತ್ತದ ಮೀನಾಕ್ಷಿ: ಪಟ್ಟಣದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗುತ್ತಿರುವ ಪ್ರಜಾಪ್ರಭುತ್ವದ ಸೋಜಿಗ ಈ ಹಿಂದೆ ದಿ.ಎನ್. ನಾಗರಾಜ್ ಸಹ ಶಿಕ್ಷಣದ ಅರ್ಹತೆ ಇಲ್ಲದೆ ಪುರಸಭೆ ಅಧ್ಯಕ್ಷರಾಗಿ ಲಾಟರಿ ಮೂಲಕ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.


-ನಂಜನಗೂಡು ಮೋಹನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.