ಪುರಸಭೆ ಸದಸ್ಯನಿಂದ ಗೂಂಡಾವರ್ತನೆ
ಹುಣಸೂರು: ಕುಡಿದ ಮತ್ತಿನಲ್ಲಿದ್ದ ಪುರಸಭಾ ಸದಸ್ಯ ಮತ್ತವರ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ ಬಾರ್ ಮಾಲೀಕ ಹಾಗೂ ಮತ್ತಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ರಸ್ತೆಯ ವೀರನಹೊಸಳ್ಳಿ ಬಳಿಯ ಬಾರ್ ರೆಸಿಡೆನ್ಸಿಯೊಂದರಲ್ಲಿ ಶನಿವಾರ ರಾತ್ರಿ ನಡೆದಿದೆ.
ಹನಗೂಡು ಹೋಬಳಿಗೆ ಸೇರಿದ ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ರಸ್ತೆಯ ವೀರನಹೊಸಳ್ಳಿ ಬಳಿಯ ಜಂಗಲ್ ರೆಸಿಡೆನ್ಸಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕ ಶ್ರೀಕಾಂತ್ ಹಾಗೂ ಅವರ ಅಣ್ಣನ ಮಗ ಕ್ಯಾಷಿಯರ್ ರಾಘು, ರಾಖೇಶ್ ಅವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇವರೆಲ್ಲ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿರುವ ಹುಣಸೂರು ಪುರಸಭಾ ಸದಸ್ಯ ಯೋಗಾನಂದ (ಯೋಗಿ) ಮತ್ತವರ ಸ್ನೇಹಿತರಾದ ಪಟ್ಟಣದ ಅಂಜನಿ, ಸೇಲ್ವಕುಮಾರ್, ಶಿವಣ್ಣ ಬಂಧಿತ ಆರೋಪಿಗಳು. ಈ ಪೈಕಿ ಪುರಸಭಾ ಸದಸ್ಯ ಯೋಗಾನಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಘಟನೆ ವಿವರ: ಶನಿವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಕಾರಿನಲ್ಲಿ ವೀರನಹೊಸಳ್ಳಿಯ ಜಂಗಲ್ ರೆಸಿಡೆನ್ಸಿ ಬಾರ್ಗೆ ಬಂದ ಮೂವರು ಆರೋಪಿಗಳು ಮದ್ಯ ಸೇವಿಸಿದ ನಂತರ ಮಾಂಸದ ಊಟಕ್ಕಾಗಿ ಒತ್ತಾಯಿಸಿದ್ದಾರೆ. ಬಾಗಿಲು ಹಾಕುವ ಸಮಯವಾಗಿದ್ದು, ಊಟ ಸಿಗಲ್ಲಾ ಎಂದು ಹೇಳಿದಾಗ ಕೋಪಗೊಂಡು ಗಲಾಟೆ ನಡೆಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಕ್ಯಾಷಿಯರ್ ರಾಘವ, ಮಾಲೀಕ ಶ್ರೀಕಾಂತ್ರ ಮೇಲೆ ಮೊದಲೇ ಸಿದ್ಧಪಡಿಸಿಕೊಂಡು ಬಂದಿದ್ದ ಮಚ್ಚು ಹಾಗೂ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದವರು ರಕ್ತದ ಮಡುವಿನಲ್ಲಿ ಬಿದ್ದಿದಾರೆ. ಹಲ್ಲೆ ಮಾಡುವವರನ್ನು ಪಕ್ಕದಲ್ಲಿದ್ದ ಬೇಕರಿಯ ರಾಜೇಶ್ ತಡೆಯಲು ಬಂದಾಗ ಅವರ ಮೇಲೂ ಹಲ್ಲೆ ನಡೆಸಿ ಎಲ್ಲರೂ ಪರಾರಿಯಾಗಿದ್ದಾರೆ.
ಗಾಯಾಳುಗಳನ್ನು ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ ನಂತರ ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲಿಸಿ, ಗಾಯಾಳುಗಳನ್ನು ತೀವ್ರ ನಿಗಾ ಘಟಕದಲ್ಲಿಡಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಪುರಸಭಾ ಸದಸ್ಯ ಯೋಗಾನಂದನನ್ನು ಆಸ್ಪತ್ರೆಯಿಂದಲೇ ವಶಕ್ಕೆ ತೆಗೆದುಕೊಳ್ಳುವಂತೆ ಹಿರಿಯ ಅಧಿಕಾರಿಗಳು ಸೂಚಿಸಿದ್ದು ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಗ್ರಾಮಾಂತರ ಠಾಣೆ ಎಸ್ಐ ರಾಘವೇಂದ್ರ ತಿಳಿಸಿದ್ದಾರೆ.
ಅಕ್ರಮ ಲಾಟರಿ ಮಾರಾಟ: ಇಬ್ಬರ ಸೆರೆ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆ ಗ್ರಾಮದ ಬಸ್ ನಿಲ್ದಾಣದ ಬಳಿ ಮಾನಂದವಾಡಿ ಕಡೆಯಿಂದ ಬರುತ್ತಿದ್ದ ಬಸ್ಸಿನಲ್ಲಿ ಕೇರಳ ಮೂಲದ ಲಾಟರಿಗಳನ್ನು ಮಾರಾಟ ಮಾಡಲು ತರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸರಗೂರಿನವರಾದ ನಾಗರಾಜು, ಚಂದ್ರಪ್ಪ ಬಂಧಿತ ಆರೋಪಿಗಳು. ಇವರನ್ನು ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್ಸ್ಪೆಕ್ಟರ್ ಶ್ರೀನಿವಾಸು ನೇತೃತ್ವದಲ್ಲಿ ಬಂಧಿಸಲಾಯಿತು. ಈ ಲಾಟರಿ ಮಾರಾಟಗಾರರು ಸುಮಾರು ಕಾಲಗಳಿಂದ ಕೇರಳ ಮೂಲದ ಲಾಟರಿಗಳನ್ನು ತೆಗೆದುಕೊಂಡು ಬಂದು ಸರಗೂರಿನ ಸುತ್ತಮುತ್ತ ಮಾರಾಟ ಮಾಡುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

