ಡಾ. ನಾರಾಯಣಾಚಾರ್ಯ ಹೇಳಿಕೆ ಖಂಡಿಸಿ ಧರಣಿ
ಮೈಸೂರು: ವಾಲ್ಮೀಕಿ ಅವರ ಬಗ್ಗೆ ವಿದ್ವಾಂಸ ಡಾ.ಕೆ.ಎಸ್. ನಾರಾಯಣಚಾರ್ಯ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಖಂಡಿಸಿ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯವರು ನಗರದ ಗಾಂಧಿ ಚೌಕದಲ್ಲಿ ಭಾನುವಾರ ಪ್ರತಿಭಟಿಸಿದರು.
ನಗರದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ವಾಲ್ಮೀಕಿ ಯಾರು ಎಂಬ ಕೃತಿ ಕುರಿತು ಮಾತನಾಡಿದ ಡಾ. ನಾರಾಯಣಚಾರ್ಯರು, ವಾಲ್ಮೀಕಿ ಬೇಡ ಸಮುದಾಯದವರಲ್ಲ, ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು ಎನ್ನುವ ಮೂಲಕ ಇತಿಹಾಸ ತಿರುಚುವಂತ ಕೆಲಸ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಜನಾಂಗವನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡಿರುವ ಡಾ. ನಾರಾಯಣಚಾರ್ಯರು ವಾಲ್ಮೀಕಿ ಸಮುದಾಯವನ್ನು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ವೇದಿಕೆಯ ರಾಜ್ಯಾಧ್ಯಕ್ಷ ದ್ಯಾವಪ್ಪ ನಾಯಕ, ಉಪಾಧ್ಯಕ್ಷ ಎಸ್. ಶ್ರೀಧರ್ ಬೆಟ್ಟ, ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಮುಖಂಡರಾದ ರಮೇಶ್, ಪ್ರಕಾಶ್, ರಂಗಪ್ಪ, ರಘು, ರಾಜೇಶ್, ಆನಂದ್, ಶ್ರೀನಿವಾಸಮೂರ್ತಿ, ಕೃಷ್ಣ, ಶ್ರೀನಿವಾಸ್ ಕಡಕೊಳ ಇದ್ದರು.
ನಗರದಲ್ಲಿ ಸುರಪುರ ಕಲಾ ಪ್ರದರ್ಶನ ಆರಂಭ
ಮೈಸೂರು: ರಾಮ್ಸನ್ಸ್ ಕಲಾ ಪ್ರತಿಷ್ಠಾನವು ಭಾನುವಾರದಿಂದ ಸುರಪುರ ಕಲೆಯ ಪ್ರದರ್ಶನ ಆರಂಭಿಸಿತು.
ವಿಜಯ್ ಹಾಗರಗುಂಡಿಗಿ ಅವರು ಸಂರಕ್ಷಿಸಿ, ಪೋಷಿಸಿಕೊಂಡು ಬರುತ್ತಿರುವ ಸುರಪುರ ಕಲೆಯ ಪ್ರದರ್ಶನ ಇಂದಿನಿಂದ ಮೇ 4 ರವರೆಗೆ ನಡೆಯುವುದು. ಸುರಪುರ ಕಲೆ ಕುರಿತು ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಗ್ ಉಪನ್ಯಾಸ ನೀಡುತ್ತ, ಸುಮಾರು 200 ವರ್ಷಗಳಷ್ಟು ಹಳೆಯದಾದ ಸುರಪುರ ಕಲೆಯು ಸುಮಾರು 3 ವರ್ಷಗಳಿಗೂ ಹೆಚ್ಚು ಕಾಲ ಕಾಣದಂತಾಗಿತ್ತು.
ಆದರೆ ವಿಜಯ ಹಾಗರಗುಂಡಿ ಅವರು ಕಳೆದ 35 ವರ್ಷಗಳಿಂದ ಈ ಕಲೆಯನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಮೈಸೂರು ಸಾಮ್ರಾಜ್ಯಕ್ಕೆ ಹೋಲಿಕೆ ಹೊಂದುವ ಅನೇಕ ಅಂಶಗಳನ್ನು ಸುರಪುರ ಕಲೆ ಹೊಂದಿದೆ ಎಂದು ಹೇಳಿದರು.
ಈ ಕಲೆಯ ಜೊತೆಗೆ ಎಂ.ಎಸ್. ಆನಂದ್, ಬಿ.ಕೆ. ಬಡಿಗೇರ್, ಎಂ.ಜಿ. ದೊಡ್ಡಮನಿ, ಎಚ್. ಗುರುಪಾದ, ಜಿ.ಎಂ. ಹೆಗ್ಡೆ, ಜಗದೀಶ್ ಕಾಂಬಳೆ, ಎಂ.ಕಂಬಾರ್, ಎಂ.ಎಸ್. ನಿರ್ಮಲ್ಕುಮಾರ್, ರಾಮದಾಸ್ ಅಡ್ಯಂತಾಯ, ಜೆ.ಎಸ್. ಶ್ರೀಧರ್ರಾವ್, ಜಿ. ಸುಬ್ರಹ್ಮಣ್ಯಂ, ಎನ್. ವೇದಮೂರ್ತಿ, ಡಿ.ಎಂ. ವೀರೇಶ್, ವಿಜಯ್ ಹಾಗರಗುಂಡಗಿ ಮತ್ತು ವಿಜಯ್ ನಾಗವೇಕರ್ ಅವರ ಕಲಾಕೃತಿಗಳು ಪ್ರದರ್ಶನಗೊಳ್ಳುತ್ತಿವೆ.
ಸಮಾರಂಭದಲ್ಲಿ ಮೈಸೂರು ರೇಸ್ ಕ್ಲಬ್ನ ಮಾಜಿ ಅಧ್ಯಕ್ಷ ಚದುರಂಗ ಕಾಂತರಾಜ ಅರಸ್ ಇದ್ದರು.
ನೆರವಿಗಾಗಿ, ಬದಲಾವಣೆಗಾಗಿ ಮ್ಯಾರಥಾನ್
ಮೈಸೂರು: ವಿದ್ಯಾವರ್ಧಕ ಎಂಜಿನಿಯರು ಕಾಲೇಜು ವಿದ್ಯುತ್- 2014 ಎಂಬ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಮ್ಯಾರಥಾನ್ ಆಯೋಜಿಸಿತ್ತು.
ಮೇಕ್ ಎ ಡಿಫೆರೆನ್ಸ್ (ಎಂಎಡಿ) ಸಂಸ್ಥೆಯ ನೆರವಿಗಾಗಿ ಹಾಗೂ ಬದಲಾವಣೆಗಾಗಿ ಆಯೋಜಿಸಲಾಗಿದ್ದ ಈ ಮ್ಯಾರಥಾನ್ಗೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಚಾಲನೆ ನೀಡಿದರು.
ಗೋಕುಲಂನಲ್ಲಿರುವ ಕಾಲೇಜು ಆವರಣದಿಂದ ಆರಂಭವಾದ ಮ್ಯಾರಥಾನ್ ತ್ರಿನೇತ್ರ ವೃತ್ತ, ಆದಿತ್ಯ ಆಸ್ಪತ್ರೆ, ಗೋಕುಲ್ ಚಾಟ್ಸ್, ಕೆಆರ್ಎಸ್ ರಸ್ತೆ, ಒಂಟಿಕೊಪ್ಪಲು ದೇವಸ್ಥಾನ, ಕಾರ್ನರ್ ಹೌಸ್, ಕಾಳಿದಾಸ ರಸ್ತೆ, ಯೋಗಾನರಸಿಂಹಸ್ವಾವು ದೇವಸ್ಥಾನ, ವಾಟರ್ ಟ್ಯಾಂಕ್ ಮೂಲಕ ಮತ್ತೆ ಕಾಲೇಜಿಗೆ ತಲುಪಿತು. 400ಕ್ಕೂ ಹೆಚ್ಚಿನ ಸ್ಪರ್ಧಿಗಳು, ವಿದೇಶಿ ಪ್ರಜೆಗಳು ಸಬ ಈ ಮ್ಯಾರಥಾನ್ನಲ್ಲಿ ಪಾಲ್ಗೊಂಡಿದ್ದರು.
ವಿಜೇತರು: ಈ ಮ್ಯಾರಥಾನ್ನಲ್ಲಿ ನಾಲ್ವರು ಜಯ ಸಾಧಿಸಿದ್ದಾರೆ. ಪುರುಷರ ವಿಭಾಗದಲ್ಲಿ ನಂಜುಂಡೇಗೌಡ (ಪ್ರಥಮ) ಮತ್ತು ರಾಜೇಶ್ (ದ್ವಿತೀಯ). ಮಹಿಳೆಯರ ವಿಭಾಗದಲ್ಲಿ ಅಶ್ವಿನಿ (ಪ್ರಥಮ) ಮತ್ತು ಸುಪ್ರಿತಾ (ದ್ವಿತೀಯ) ಬಹುಮಾನ ಪಡೆದಿದ್ದಾರೆ.
ವಿದ್ಯಾರ್ಥಿನಿಯರ ಪಾರಂಪರಿಕ ನಡಿಗೆ
ಮೈಸೂರು: ನಗರದ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಭಾನುವಾರ ಪಾರಂಪರಿಕ ನಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಪಾರಂಪರಿಕ ಕಟ್ಟಡಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸುವ ಸಲುವಾಗಿ ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆಯ ಸಹಕಾರದೊಂದಿಗೆ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನವರು ಈ ಪಾರಂಪರಿಕ ನಡಿಗೆ ಹಮ್ಮಿಕೊಂಡಿದ್ದರು.
20 ರಂದು ವಿಚಾರ ಸಂಕಿರಣ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ ಅಕ್ಕಮಹಾದೇವಿ ಪೀಠ ಹಾಗೂ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಮಾ.20 ರಂದು ನಟರಾಜ ಸಭಾಭವನದಲ್ಲಿ ಮಹಾದೇವಿ ಅಕ್ಕನ ವಚನ- ನಿರ್ವಚನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಅಂದು ಬೆಳಗ್ಗೆ 10.30ಕ್ಕೆ ಮುಕ್ತ ವಿವಿ ಕುಲಪತಿ ಪ್ರೊ.ಎಂ.ಜಿ. ಕೃಷ್ಣನ್ ಉದ್ಘಾಟಿಸಲಿದ್ದು, ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನಟರಾಜ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ. ಶಾರದ ಭಾಗವಹಿಸುವರು. ನಂತರ ನಡೆಯುವ ಗೋಷ್ಠಿಗಳಲ್ಲಿ ಡಾ. ನಿತ್ಯಾನಂದ ಬಿ. ಶೆಟ್ಟಿ, ಡಾ. ಅನ್ನದಾನೇಶ್, ಡಾ. ಯತೀಶ್ವರ್, ಡಾ.ಜಿ.ಪಿ. ಬಸವರಾಜು, ಡಾ.ಸುರೇಸ್ ನಾಗಲಮಡಿಕೆ, ಶೈನಾ ನಾಗರಾಜ್ ವಿಚಾರ ಮಂಡಿಸುವರು. ಸಂಜೆ 4ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಮರ್ಶಕ ಪ್ರೊ.ಶ್ರೀಕಂಠ ಕೂಡಿಗೆ ಭಾಷಣ ಮಾಡಲಿದ್ದು, ಪ್ರೊ.ಸಿ.ಎಂ. ಧರ್ಮಪ್ಪ, ಎಂ.ಎಸ್. ಸಂಧ್ಯಾರಾಣಿ ಭಾಗವಹಿಸುವರು.
ಶಸ್ತ್ರ ಚಿಕಿತ್ಸೆಗೆ
ನೆರವು ಕೋರಿಕೆ
ಮೈಸೂರು: ನಗರದ ಎಂ. ಗೋಪಾಲ್ ಕೃಷ್ಣ ಎಂಬವವರು ಬೆನ್ನುಮೂಳೆ ನೋವು ಮತ್ತು ಅದರ ಪಕ್ಕ ಬೆಳೆದಿರುವ ಗಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದು, ಶಸ್ತ್ರ ಚಿಕಿತ್ಸೆಗಾಗಿ ದಾನಿಗಳಿಂದ ಸಹಾಯ ಕೋರಿದ್ದಾರೆ. 2004 ರಿಂದ ಕಾಣಿಸಿಕೊಂಡ ಬೆನ್ನು ಮೂಳೆ ನೋವಿಗೆ ಬಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇನೆ. ಆಗಾಗ ತಪಾಸಣೆ ಮಾಡಿಸಿದರೂ ನೋವು ನಿಂತಿಲ್ಲ. ಈವರೆಗೆ ಸುಮಾರು 3 ಲಕ್ಷದವರೆಗೆ ಖರ್ಚಾಗಿದ್ದು, ಇನ್ನು 3 ರಿಂದ 5 ಲಕ್ಷದವರೆಗೆ ವೆಚ್ಚ ತಗುಲಲಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ದಾನಿಗಳು ಸಹಾಯ ಮಾಡುವಂತೆ ಅವರು ಕೋರಿದ್ದಾರೆ. ಸಹಾಯ ಮಾಡಲಿಚ್ಛಿಸುವವರು ಎ. ಗೋಪಾಲ್ಕೃಷ್ಣ, ಉಳಿತಾಯ ಖಾತೆ- 30406164206, ಎಸ್ಬಿಐ ಚಾಮುಂಡಿಪುರಂ ಶಾಖೆ, ಮೈಸೂರು, ಮೊ. 99022 64063 ಸಂಪರ್ಕಿಸಿ.
ಜೆಡಿಎಸ್ ಪಕ್ಷ ಬೆಂಬಲಿಸಲು ಮನವಿ
ಮೈಸೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಲಿತರು ಜೆಡಿಎಸ್ ಪಕ್ಷ ಬೆಂಬಲಿಸುವಂತೆ ನಗರ ಸಂಘಟನಾ ಕಾರ್ಯದರ್ಶಿ ಶೇಖರ್ ಮನವಿ ಮಾಡಿದರು. ಅರವತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ದಲಿತರ ಮತಗಳನ್ನು ಮಾತ್ರ ಬಳಸಿಕೊಂಡಿದೆ. ಆದರೆ ದಲಿತರಾದ ಮಲ್ಲಿಕಾರ್ಜುನ ಖರ್ಗೆ ಅಥವಾ ಡಾ.ಜಿ. ಪರಮೇಶ್ವರ್ ಅವರನ್ನು ಮುಖ್ಯಮಂತ್ರಿಯಾಗಿ ಮಾಡಿಲ್ಲ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದಲಿತರು ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು. ಮುಖಂಡ ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

