ಬದುಕಿನ ಸಾಧನೆಗೆ ವ್ಯಕ್ತಿತ್ವ ಅರಳಲಿ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ. 21
ಬದುಕಿನ ಸಾಧನೆಗೆ ವ್ಯಕ್ತಿತ್ವ ಅರಳುವುದು ಬಹುಮುಖ್ಯ ಪಾತ್ರ ವಹಿಸಲಿದೆ ಎಂದು ಮೆಂಡ್ಟ್ರೀ ಸಂಸ್ಥೆಯ ಅಧ್ಯಕ್ಷ ಹಾಗೂ ಹೆಸರಾಂತ ವಾಣಿಜ್ಯೋದ್ಯಮಿ ಸುಬ್ರತೋ ಬಗ್ಚಿ ಹೇಳಿದರು.
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ನಿರ್ವಹಣಾ ಅಭಿವೃದ್ಧಿ ಸಂಸ್ಥೆಯು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ಏರ್ಪಡಿಸಿದ್ದ 19ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಮತ್ತೊಬ್ಬರ ಬಗ್ಗೆ ಕರುಣೆ ತೋರುವ ಮನೋಭಾವ ಬೆಳೆಸಿಕೊಳ್ಳಬೇಕು. ಸಮಸ್ಯೆ ಎದುರಿಸುವ ಸಾಮರ್ಥ್ಯವನ್ನೂ ಹಾಗೂ ಪರರ ಒಳತಿಗಾಗಿ ತ್ಯಾಗವನ್ನು ರೂಢಿಸಿಕೊಳ್ಳಬೇಕು. ಯಾವುದೇ ಸೋಲಿನಿಂದ ಧೃತಿಗೆಡದೆ ಮುನ್ನುಗ್ಗುವ ಆತ್ಮಸ್ಥೈರ್ಯ ಇರಬೇಕು. ಇಂತಹ ಗುಣಗಳು ಮೌಲ್ಯಯುತ ಬದುಕಿಗೆ ಸಹಕಾರಿ ಎಂದರು.
ನಾನು ಒಮ್ಮೆ ಮೈಸೂರಿಗೆ ಬಂದಿದ್ದಾಗ ಹೊಟೇಲ್ ಒಂದರಲ್ಲಿ ಉಳಿದುಕೊಂಡಿದ್ದೆ. ಮಾರನೇ ದಿನ ಬೆಳಗ್ಗೆ ಅಮೆರಿಕದಿಂದ ಬಂದಿದ್ದ ಗಣ್ಯರನ್ನು ಭೇಟಿ ಮಾಡುವ ಕಾರ್ಯಕ್ರಮವಿತ್ತು. ಆದರೆ ಬರುವಾಗ ಶೂ ಮರೆತ್ತಿದ್ದೆ. ಆಗ ಅಲ್ಲಿನ ರಿಸೆಪ್ಷನಿಸ್ಟ್ ಒಬ್ಬರು ತಮ್ಮ ಶೂ ಕೊಟ್ಟು ಉಪಕಾರ ಮಾಡಿದರು. ಕಾರ್ಯಕ್ರಮದ ನಂತರ ಶೂ ಹಿಂದಿರುಗಿಸುವ ಸಂದರ್ಭದಲ್ಲಿ ಆತ ಕರ್ತವ್ಯ ಮುಗಿಸಿ ಹೊರಟು ಹೋಗಿದ್ದ. ಶೂ ಮತ್ತು ಥ್ಯಾಂಕ್ಸ್ ಚೀಟಿ ಬರೆದಿಟ್ಟೆ. ಆದರೆ ಮುಂದೆ ಯಾವಾಗಲು ಅವರನ್ನು ಭೇಟಿ ಮಾಡುವ ಸೌಜನ್ಯತೆ ತೋರದಿರುವುದಕ್ಕೆ ಇಂದಿಗೂ ನನಗೆ ವಿಷಾದವಾಗುತ್ತಿದೆ ಎಂದರು.
ಲಾಭದ ಆತ್ಮವಿಶ್ವಾಸ: ಬೀದಿಯಲ್ಲಿ ತಳ್ಳುವಗಾಡಿ ಮೂಲಕ ಟೊಮೆಟೋ ವ್ಯಾಪಾರ ಮಾಡುವ ವ್ಯಕ್ತಿ ತನಗೆ ನಷ್ಟವಾದರೂ ಸಹ ಮಾರನೇ ದಿನ ಅದೇ ವ್ಯಾಪಾರ ಮಾಡುತ್ತಾನೆ. ಏಕೆಂದರೆ ಆತನಲ್ಲಿ ಅದೇ ವ್ಯಾಪಾರದಿಂದ ಲಾಭ ಪಡೆಯುವ ಆತ್ಮವಿಶ್ವಾಸ ಇರುತ್ತದೆ. ಇಂಥವರಿಂದ ನೋಡಿ ಕಲಿಯುವುದು ಸಾಕಷ್ಟಿದೆ. ನೂತನ ಪದವೀಧರರು ಸಮಾಜದ ಅನುಭವವನ್ನು ಅಳವಡಿಸಿಕೊಂಡು ಉಜ್ವಲ ಬದುಕು ರೂಪಿಸಿಕೊಳ್ಳಬೇಕು ಎಂದು ಆಶಿಸಿದರು.
ನಿರ್ವಹಣಶಾಸ್ತ್ರದ ಸ್ನಾತಕೋತ್ತರ ಡಿಪ್ಲೋಮಾ ಪದವಿಯ ವಿವಿಧ ವಿಷಯಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುವ ವರುಣ್ ಕುಮಾರ್, ದೀಪಕ್ ನೆಸಾರ್ಕರ್, ಟಿ.ವಾಸುದೇವ ನಾಯಕ್, ಸ್ಪೂರ್ತಿ ಎಸ್. ಗೌಡ ಹಾಗೂ ಜುತಿಕ್ ಕಾಮ್ದರ್ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಪ್ರೊ.ಎಸ್. ಪ್ರಭಾಕರ್ ಅವರು ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ ವಿತರಿಸಿದರು. ಮಾರುಕಟ್ಟೆ ಅಧ್ಯಯನ, ಹಣಕಾಸು ಅಧ್ಯಯನ, ಕಾರ್ಯಾಚರಣೆ ಅಧ್ಯಯನ, ಮಾನವ ಸಂಪನ್ಮೂಲ ಅಧ್ಯಯನ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ಆಯ್ದುಕೊಂಡು 2012- 14ನೇ ಸಾಲಿನಲ್ಲಿ ತೇರ್ಗಡೆಯಾಗಿರುವ 180 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಪಿಜಿಡಿಎಂ ಅಧ್ಯಕ್ಷ ಪ್ರೊ.ನೀತು ಗಣಪತಿ, ಐಐಎಂಬಿ ನಿವೃತ್ತ ಪ್ರಾಧ್ಯಾಪಕ ಡಾ.ಪ್ರಸನ್ನ ಚಂದ್ರ ಇದ್ದರು. ಸಂಸ್ಥೆಯ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್ ವಾರ್ಷಿಕ ವರದಿ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

