ಮೈಸೂರು

ಸಿದ್ದು, ಶ್ರೀನಿವಾಸ್ ಜೋಡಿ ಮೋಡಿ

Published On :

 ಅಂಶಿ ಪ್ರಸನ್ನಕುಮಾರ್
ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಕಳೆದೊಂದು ದಶಕದಿಂದಲೂ ಸಿದ್ದರಾಮಯ್ಯ- ಶ್ರೀನಿವಾಸಪ್ರಸಾದ್ ಜೋಡಿ ಮತದಾರರ ಮೇಲೆ ಮೋಡಿ ಮಾಡುತ್ತಿದೆ. ಇವರಿರುವ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳು ಲಭಿಸುತ್ತಿವೆ.
ಒಂದು ಕಾಲಕ್ಕೆ ಸಿದ್ದರಾಮಯ್ಯ ಹಾಗೂ ಶ್ರೀನಿವಾಸಪ್ರಸಾದ್ ಅವರು ಉತ್ತರ- ದಕ್ಷಿಣ ಎಂಬಂತೆ ಇದ್ದರು. ಅಂದರೆ ಸಿದ್ದರಾಮಯ್ಯ ಅವರು ಜನತಾ ಪರಿವಾರದಲ್ಲಿದ್ದರೆ, ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್‌ನಲ್ಲಿದ್ದರು. 2004ರ ಚುನಾವಣೆಗೂ ಮೊದಲು ಶ್ರೀನಿವಾಸಪ್ರಸಾದ್ ಅವರು ಕೂಡ ಜನತಾ ಪರಿವಾರ ಸೇರುವಂತೆ ಆಯಿತು. ನಂತರ 2006ರ ಹೊತ್ತಿಗೆ ಇಬ್ಬರೂ ಕಾಂಗ್ರೆಸ್ ಕಡೆ ವಾಲಿದರು. ಇದರ ಪರಿಣಾಮವೇ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ 257 ಅಲ್ಪ ಮತಗಳ ಪ್ರಯಾಸದ ಗೆಲವು.
2004 ರಿಂದ ಉಭಯ ಜಿಲ್ಲೆಗಳಲ್ಲಿ ನಡೆದಿರುವ ಎಲ್ಲಾ ಚುನಾವಣೆಗಳಲ್ಲಿ ಈ ಜೋಡಿ ಮೋಡಿ ಮಾಡಿದೆ. ಅವರಿಗೆ ಡಾ.ಎಚ್‌ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್ ಕೂಡ ಸಾಥ್ ನೀಡುತ್ತಿದ್ದಾರೆ.
1952 ರಿಂದ 1977 ರವರೆಗೆ ಕಾಂಗ್ರೆಸ್, ಸಂಸ್ಥಾ ಕಾಂಗ್ರೆಸ್ ನಡುವಿನ ಹೋರಾಟದಲ್ಲಿ ಬಹುತೇಕ ಕಾಂಗ್ರೆಸಿಗರೇ ಗೆಲ್ಲುತ್ತಿದ್ದರು. 1977 ರಲ್ಲಿ ಜನತಾ ಪಕ್ಷದ ಉದಯವಾಯಿತು. 1983 ರಲ್ಲಿ ರಾಜ್ಯದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನಿಂದಲೂ ಈ ಭಾಗದಲ್ಲಿ ಕಾಂಗ್ರೆಸ್ ಹಾಗೂ ಜನತಾ ಪರಿವಾರ ಸಾಂಪ್ರದಾಯಿಕ ಎದುರಾಳಿಗಳಾಗಿದ್ದವು. 1983, 1985 ರಲ್ಲಿ ಜನತಾ ಪರಿವಾರ. ನಂತರ ಒಮ್ಮೆ ಕಾಂಗ್ರೆಸ್, ಮತ್ತೊಮ್ಮೆ ಜನತಾ ಪರಿವಾರ ಎಂಬಂತೆ ಹೆಚ್ಚು ಸ್ಥಾನ ಪಡೆಯುತ್ತಿದ್ದವು. 1989 ರಲ್ಲಿ ಕಾಂಗ್ರೆಸ್, 1994 ರಲ್ಲಿ ಜನತಾದಳ, 1999 ರಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಪಡೆದಿದ್ದವು.
ಸಿದ್ದರಾಮಯ್ಯ ಹೆಗಲಿಗೆ ಜನತಾ ಪರಿವಾರ: ಮೊದಲೆಲ್ಲಾ ಕಾಂಗ್ರೆಸ್‌ಗೆ ಕೆ.ಎಸ್. ನಾಗರತ್ನಮ್ಮ, ಎಂ. ರಾಜಶೇಖರಮೂರ್ತಿ, ಅಜೀಜ್‌ಸೇಠ್, ಟಿ.ಎನ್. ನರಸಿಂಹಮೂರ್ತಿ, ವಿ.ಶ್ರೀನಿವಾಸಪ್ರಸಾದ್, ಎಚ್. ವಿಶ್ವನಾಥ್, ಎಂ. ಮಹದೇವ್, ಎಂ. ಶಿವಣ್ಣ ಮೊದಲಾದವರ ನಾಯಕತ್ವ ಇತ್ತು, ಜನತಾ ಪರಿವಾರಕ್ಕೆ ಬಿ.ರಾಚಯ್ಯ, ಎಂ.ಎಸ್. ಗುರುಪಾದಸ್ವಾಮಿ, ಅಬ್ದುಲ್ ನಜೀರ್‌ಸಾಬ್, ಡಾ.ಎಚ್.ಎಲ್. ತಿಮ್ಮೇಗೌಡ, ಎಸ್. ನಂಜಪ್ಪ ಮೊದಲಾದವರ ನಾಯಕತ್ವ ಇತ್ತು. 1996 ರಲ್ಲಿ ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಜನತಾ ಪರಿವಾರದ ನಾಯಕತ್ವ ಅವರ ಹೆಗಲಿಗೆ ಬಂತು.
2004 ರವರೆಗೆ ಉಭಯ ಜಿಲ್ಲೆಗಳಲ್ಲಿ 16 ವಿಧಾನಸಭಾ ಸ್ಥಾನಗಳಿದ್ದವು. ಸಿದ್ದರಾಮಯ್ಯ ಹಾಗೂ ಶ್ರೀನಿವಾಸಪ್ರಸಾದ್ ಜನತಾ ಪರಿವಾರದಲ್ಲಿದ್ದರಿಂದ ಜೆಡಿಎಸ್‌ಗೆ 10 (ಸಿದ್ದರಾಮಯ್ಯ, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್,  ಡಿ.ಟಿ. ಜಯಕುಮಾರ್, ಕೆ.ವೆಂಕಟೇಶ್, ಜಿ.ಟಿ. ದೇವೇಗೌಡ, ಎಂ.ಪಿ. ವೆಂಕಟೇಶ್, ಪರಿಮಳ ನಾಗಪ್ಪ, ಎಂ.ಕೆ. ಸೋಮಶೇಖರ್, ಮಂಚನಹಳ್ಳಿ ಮಹದೇವ್), ಕಾಂಗ್ರೆಸ್ (ತನ್ವೀರ್ ಸೇಠ್, ಆರ್. ಧ್ರುವನಾರಾಯಣ), ಬಿಜೆಪಿ (ಎಚ್.ಎಸ್. ಶಂಕರಲಿಂಗೇಗೌಡ, ಜೆ. ಸುನೀತಾ ವೀರಪ್ಪಗೌಡ,), ಪಕ್ಷೇತರರಿಗೆ (ವಾಟಾಳ್ ನಾಗರಾಜ್, ಎಸ್. ಬಾಲರಾಜ್) ತಲಾ 2 ಸ್ಥಾನಗಳು ದೊರೆತವು. ಅದೇ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರವೂ (ಕಾಗಲವಾಡಿ ಶಿವಣ್ಣ) ಜೆಡಿಎಸ್ ಪಾಲಾಯಿತು. ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸಿ.ಎಚ್. ವಿಜಯಶಂಕರ್ ಅವರಿಗೆ ಜೆಡಿಎಸ್‌ನ ಎ.ಎಸ್. ಗುರುಸ್ವಾಮಿ ಪ್ರಬಲ ಪೈಪೋಟಿ ನೀಡಿ, ಸೋತರು.
2008ರ ಚುನಾವಣೆ ವೇಳೆಗೆ ಸಿದ್ದರಾಮಯ್ಯ- ಶ್ರೀನಿವಾಸಪ್ರಸಾದ್ ಅವರು ಕಾಂಗ್ರೆಸ್ ಸೇರಿದ್ದರು. ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಕೆ. ವೆಂಕಟೇಶ್ ಮೊದಲಾದವರು ಕೂಡ ಅವರನ್ನು ಹಿಂಬಾಲಿಸಿದ್ದರು. ಈ ಉಭಯ ಜಿಲ್ಲೆಗಳಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ 1 ಸ್ಥಾನ ಕಡಿಮೆಯಾಯಿತು. 15 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 12ರಲ್ಲಿ, (ಸಿದ್ದರಾಮಯ್ಯ, ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಕೆ.ವೆಂಕಟೇಶ್, ತನ್ವೀರ್ ಸೇಠ್, ಎಚ್.ಪಿ. ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ, ಆರ್. ಧ್ರುವನಾರಾಯಣ, ಆರ್. ನರೇಂದ್ರ, ಎಂ. ಸತ್ಯನಾರಾಯಣ, ಚಿಕ್ಕಣ್ಣ) ಜೆಡಿಎಸ್‌ನ 1ರಲ್ಲಿ (ಸಾ.ರಾ. ಮಹೇಶ್) ಹಾಗೂ ಬಿಜೆಪಿ 2 ರಲ್ಲಿ (ಎಸ್.ಎ. ರಾಮದಾಸ್, ಎಚ್.ಎಸ್. ಶಂಕರಲಿಂಗೇಗೌಡ) ಜಯಗಳಿಸಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೂ ಮೈಸೂರು- ಚಾಮರಾಜನಗರದಲ್ಲಿ ಅದರ ಆಟ ನಡೆದಿರಲಿಲ್ಲ.
ಎರಡೂ ಕೈ ಪಾಲು: 2009ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾದವು. ಮೈಸೂರಿನಿಂದ ಎಚ್.ವಿಶ್ವನಾಥ್ ಹಾಗೂ ಚಾಮರಾಜನಗರದಿಂದ ಆರ್.ಧ್ರುವನಾರಾಯಣ ಆಯ್ಕೆಯಾದರು. ಆದರೆ ಅದೇ ವರ್ಷ ನಡೆದ ಕೊಳ್ಳೇಗಾಲ ವಿಧಾನಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿತ್ತು. ಬಿಜೆಪಿಯ ಜಿ.ಎನ್. ನಂಜುಂಡಸ್ವಾಮಿ ಆಯ್ಕೆಯಾಗಿದ್ದರು.
2013 ರಲ್ಲಿ ಮತ್ತೆ ಕಾಂಗ್ರೆಸ್ 12 (ಸಿದ್ದರಾಮಯ್ಯ, ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಕೆ.ವೆಂಕಟೇಶ್, ತನ್ವೀರ್ ಸೇಠ್, ಎಚ್.ಪಿ. ಮಂಜುನಾಥ್, ಸಿ. ಪುಟ್ಟರಂಗಶೆಟ್ಟಿ, ಆರ್. ನರೇಂದ್ರ, ಎಸ್. ಜಯಣ್ಣ, ವಾಸು, ಎಂ.ಕೆ. ಸೋಮಶೇಖರ್ ), ಜೆಡಿಎಸ್ 3 ಸ್ಥಾನ (ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಎಸ್. ಚಿಕ್ಕಮಾದು) ಗಳಿಸಿದವು. ಬಿಜೆಪಿ ಶೂನ್ಯ ಸಂಪಾದನೆ ಮಾಡಿತು. ಇದೀಗ ಮತ್ತೆ ಈ ಜೋಡಿಯ ಸತ್ವ ಪರೀಕ್ಷೆ ಎದುರಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.