ಅನಕ್ಷರತೆಯೇ ಮಕ್ಕಳ ಅಪರಾಧಕ್ಕೆ ಕಾರಣ
ಕ.ಪ್ರ.ವಾರ್ತೆ ಮೈಸೂರು ಮಾ. 23
ಮಕ್ಕಳು ಅಪರಾಧ ಮಾಡದಂತೆ ತಡೆಯಬೇಕು ಎಂದು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಸಮಿತಿ ಅಧ್ಯಕ್ಷ ಹಾಗೂ ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ಹುಲವಾಡಿ ಜಿ. ರಮೇಶ್ ಹೇಳಿದರು.
ಕರ್ನಾಟಕ ರಾಜ್ಯ ಮತ್ತು ಮೈಸೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮೈಸೂರು ವಕೀಲರ ಸಂಘ ಸಂಯುಕ್ತವಾಗಿ ಮಾನಸ ಗಂಗೋತ್ರಿ ಸೆನೆಟ್ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಕ್ಕಳ ಸಂರಕ್ಷಣೆ ಮತ್ತು ಹಕ್ಕುಗಳ ಕುರಿತು ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಯುವಕರು, ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಮಕ್ಕಳನ್ನು ಸತ್ಪ್ರಜೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. 7 ವರ್ಷದೊಳಗಿನ ಮಕ್ಕಳು ಮಾಡುವ ತಪ್ಪುಗಳು ಅಪರಾಧವಲ್ಲ. 7 ರಿಂದ 18 ವರ್ಷದೊಳಗಿನ ಮಕ್ಕಳು ಅಪರಾಧ ಎಸಗುತ್ತಿದ್ದಾರೆ. ಈ ವಯೋವಾನದ ಮಕ್ಕಳು ಹೆಚ್ಚಾಗಿ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಬಡತನ, ಅನಕ್ಷರತೆಯಿಂದ ಅಪರಾಧ ನಡೆಯುತ್ತಿದೆ. ಈಗಿನ ಪರಿಸರ ಮಕ್ಕಳನ್ನು ಬೆಳೆಸಲು ಆಗುತ್ತಿಲ್ಲ. ಮಕ್ಕಳನ್ನು ತಪ್ಪು ಮಾಡದಂತೆ ತಡೆಯಬೇಕು. ತಪ್ಪು ಮಾಡಿದರೆ ತಿದ್ದಿ ಸತ್ಪ್ರಜೆ ಮಾಡಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ತಿಳಿವಳಿಕೆ ನೀಡಿ: ಅಪರಾಧ ಎಸಗುವ ಮಕ್ಕಳಿಗೆ ಶಿಕ್ಷೆ ಕೊಡುವುದರ ಜೊತೆಗೆ ರಕ್ಷಣೆ, ಪಾಲನೆ ಮಾಡಬೇಕು ಎಂಬ ಕಾನೂನು ಇದೆ. ಮಕ್ಕಳ ನೈತಿಕ, ಮೌಲ್ಯಯುತ ಜೀವನ ರೂಪಿಸುವ ಜವಾಬ್ದಾರಿ ಹೆತ್ತವರು, ಪೋಷಕರು ಹಾಗೂ ಶಿಕ್ಷಕರ ಮೇಲಿದೆ. ಮೂಲಭೂತ ಶಿಕ್ಷಣದಿಂದ ಮಕ್ಕಳ ಜೀವನ ರೂಪಿಸಲು ಸಾಧ್ಯ. ನಮ್ಮಲ್ಲಿ ಕೃಷಿ, ನೈಸರ್ಗಿಕ ಸಂಪನ್ಮೂಲ ಜೊತೆಗೆ ಮಾನವ ಸಂಪನ್ಮೂಲ ಬಳಕೆ ಆಗುತ್ತಿದ್ದು, ಈ ಬಗ್ಗೆ ಯುವಪೀಳಿಗೆಗೆ ತಿಳಿವಳಿಕೆ ನೀಡಬೇಕು ಎಂದರು.
ಮಕ್ಕಳಿಗಾಗಿ ಸರ್ಕಾರವು ಹಲವು ಸೌಲಭ್ಯಗಳನ್ನು ಜಾರಿಗೊಳಿಸಿದೆ. ಕೆಲವೊಮ್ಮೆ ಮಕ್ಕಳ ಸೌಲಭ್ಯಗಳು ದುರ್ಬಳಕೆ ಆಗುತ್ತಿದ್ದು, ಇದನ್ನು ಜನ ತಡೆಗಟ್ಟಬೇಕು. ಮಕ್ಕಳಿಗೆ ಮಧ್ಯಾಹ್ನ ಊಟ, ಹಾಲು ಕೊಡುವುದು ವೈಜ್ಞಾನಿಕವಾಗಿದೆ. ಮಕ್ಕಳನ್ನು ತಿದ್ದಲು ಹೋಗುವ ಶಿಕ್ಷಕರು ಕೆಲವೊಮ್ಮೆ ಸಮಸ್ಯೆಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳ ಸೂಕ್ಷ್ಮತೆ ಅರ್ಥ ಮಾಡಿಕೊಂಡು ತಿಳಿ ಹೇಳಬೇಕು. ತಪ್ಪು ಮಾಡುವ ಮಕ್ಕಳ ಬಗ್ಗೆ ಪೋಷಕರಿಗೆ ತಿಳಿಸಬೇಕು. ಇತರೆ ಆರೋಪಿಗಳಂತೆ ಮಕ್ಕಳನ್ನು ಪೊಲೀಸರು ನಡೆಸಿಕೊಳ್ಳಬಾರದು ಎಂದು ಸಲಹೆ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಅಶೋಕ್ ನಿಜಗಣ್ಣನವರ್ ಮಾತನಾಡಿ, ಪುಸ್ತಕದಲ್ಲಿರುವ ಕಾನೂನು ಅನುಷ್ಠಾನಕ್ಕೆ ಬರಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಆಗಬೇಕು. ವೀರಪ್ಪನ್ ಮಕ್ಕಳಿಗೂ ಶಾಲೆಗೆ ಸೇರಿಸಿಕೊಳ್ಳುವುದಿಲ್ಲ ಎಂಬ ವಿವಾದ ಎದ್ದಿತ್ತು. ಪೋಷಕರು ಮಾಡಿದ ತಪ್ಪಿಗೆ ಮಕ್ಕಳನ್ನು ಕಡೆಗಣಿಸುವುದು ಸರಿಯಲ್ಲ. ಮಕ್ಕಳು ನಮ್ಮ ಸಂಪತ್ತು, ಅವರನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.
ಮಕ್ಕಳ ಆತ್ಮಹತ್ಯೆ- ಆತಂಕ: ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಕೆ.ಎಸ್. ಮುದಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಟ್ಟಾರೆ ಅಪರಾಧದಲ್ಲಿ ಶೇ.1 ಬಾಲಾಪಾರಾಧಿಗಳು ಇದ್ದಾರೆ. ಅತ್ಯಾಚಾರ, ಕೊಲೆ, ಜೂಜಾಟ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ಮಕ್ಕಳು ತೊಡಗಿರುವುದು ಆತಂಕಕಾರಿ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಒತ್ತಡ ಇನ್ನಿತರೆ ಕಾರಣಗಳಿಗಾಗಿ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಸಂಪೂರ್ಣ ಬೆಳವಣಿಗೆ ಆಗುತ್ತಿಲ್ಲ. ನಮ್ಮ ಸುತ್ತಮುತ್ತ ಮಕ್ಕಳು ಆರೋಗ್ಯಕರ ವಾತಾವರಣದಲ್ಲಿ ಬೆಳೆಯುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಸಿ.ಶಿಖಾ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ, ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಜಿಪಂ ಸಿಇಒ ಪಿ.ಎ.ಗೋಪಾಲ್, ನಂಜನಗೂಡು ಉಪ ವಿಭಾಗದ ಹೆಚ್ಚುವರಿ ಎಸ್ಪಿ ಡಾ.ಎ.ರಾಜಾ, ವಾರ್ತಾ ಇಲಾಖೆ ಉಪ ನಿರ್ದೇಶಕ ಎ.ಆರ್. ಪ್ರಕಾಶ್, ವಕೀಲರ ಸಂಘದ ಅಧ್ಯಕ್ಷ ಸಿ.ಬಸವರಾಜು, ರಾಜ್ಯ ವಕೀಲರ ಪರಿಷತ್ತು ಸದಸ್ಯ ಸಿ.ಎಂ. ಜಗದೀಶ್ ಇದ್ದರು. 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎನ್. ರುದ್ರಮುನಿ ಸ್ವಾಗತಿಸಿದರು.
ನಂತರ ಮಕ್ಕಳ ಮಾನಸಿಕ ಆರೋಗ್ಯ, ಮಕ್ಕಳ ಪಾಲನೆ ಮತ್ತು ರಕ್ಷಣೆ- ವಿವಿಧ ಅಧಿಕಾರಿಗಳ ಪಾತ್ರ, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆ ಕುರಿತು ಮೂರು ಅಧಿವೇಶನಗಳು ನಡೆದವು. ವಿಷಯ ಪರಿಣಿತರು ವಿಚಾರ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

