ಪ್ರೇರಣಾ ದಿನ ನಾಳೆ
ಟಿ. ನರಸೀಪುರ: ಪಟ್ಟಣದ ರೇಣುಕಾ ಸಭಾ ಭವನದಲ್ಲಿ ಮಾ. 27ರ ಬೆಳಗ್ಗೆ 10.30ಕ್ಕೆ ಕಾನ್ಷಿರಾಂ ಜನ್ಮದಿನ-ಬಹುಜನರ ಪ್ರೇರಣಾ ದಿನ ಕಾರ್ಯಕ್ರಮ ನಡೆಯಲಿದೆ. ಬಹುಜನ ಸಮಾಜ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮವನ್ನು ರಾಜ್ಯ ಸಂಚಾಲಕ ಎನ್. ಮಹೇಶ್ ಉದ್ಘಾಟಿಸುವರು. ಕ್ಷೇತ್ರಾಧ್ಯಕ್ಷ ಬಿ.ಆರ್. ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶಿವಮಲ್ಲು, ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾಧ್ಯಕ್ಷ ಗೋಪಿನಾಥ್, ಸಂಯೋಜಕ ಶಿವಮಹದೇವ, ಮುಖಂಡರಾದ ಲಕ್ಷ್ಮೀಗೋಪಿನಾಥ್, ನಂಜುಂಡಸ್ವಾಮಿ, ಮರಿಮಹದೇವಯ್ಯ ಭಾಗವಹಿಸುವರು.
ಚಿರತೆ ಪ್ರತ್ಯಕ್ಷ
ಅಂತರಸಂತೆ: ಎಚ್.ಡಿ. ಕೋಟೆ ತಾಲೂಕಿನ ಶೀರನಹುಂಡಿ ಗ್ರಾಮದ ಹತ್ತಿರ ಕಳೆದ ಎರಡು- ಮೂರು ದಿನಗಳಿಂದ ಚಿರತೆಯೊಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡಿದ್ದು, ಸಾರ್ವಜನಿಕರು ಆತಂಕಕ್ಕಿಡಾಗಿದ್ದಾರೆ. ಮಂಗಳವಾರ ಬೆಳಗಿನ ಜಾವ ವಾಯುವಿಹಾರ ಮಾಡುತ್ತಿರುವವರಿಗೆ ಕಾಣಿಸಿಕೊಂಡಿದ್ದು, ಸಮೀಪದ ಕಬ್ಬಿನ ಗದ್ದೆಯೊಳಗೆ ನುಸುಳಿ ಹೋಗಿದ್ದನ್ನು ಸಾರ್ವಜನಿಕರು ನೋಡಿ ಗಾಬರಿಗೊಂಡಿದ್ದಾರೆ. ನೂರಲಕುಪ್ಪೆ ಬಿ ಗ್ರಾಮದ ಶ್ರೀಕಂಠ ಎಂಬುವವರು ಬಹಿರ್ದೆಸೆಗೆ ತೆರಳಿದ್ದು, ಅವರ ಮುಂದೆಯೇ ಓಡಿ ಹೋಗಿದ್ದನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ. ಸುಮಾರು 8 ರಿಂದ 9 ವರ್ಷದೊಳಗಿನ ಚಿರತೆಯು ಭಾರಿ ಗಾತ್ರವಿದ್ದು, ನೋಡುಗರಿಗೆ ಭಯ ಹುಟ್ಟಿಸುವಂತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮತ ಹಾಕಿ
ಹುಣಸೂರು: ಕಾಂಗ್ರೆಸ್- ಬಿಜೆಪಿ ತಿರಸ್ಕರಿಸಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಸೂಕ್ತ ಅಭ್ಯರ್ಥಿಗೆ ಮತ ನೀಡುವಂತೆ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು ಮನವಿ ಮಾಡಿದರು. ಪಟ್ಟಣದ ವಿಜಯ ರಂಗಮಂದಿರದಲ್ಲಿ ಸಿಐಟಿಯು ಹಮ್ಮಿಕೊಂಡಿದ್ದ ಕಾರ್ಮಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಬಡವರು ಬಡವರಾಗಿಯೇ ಉಳಿಯುತ್ತಿದ್ದಾರೆ. ದೇಶದಲ್ಲಿ ಆಳ್ವಿಕೆ ನಡೆಸಿರುವ ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡ- ದೊಡ್ಡ ಬಂಡವಾಳಶಾಹಿಗಳ ಪರ ನೀತಿಯನ್ನು ಜಾರಿಮಾಡಿ ಜನರ ತೆರಿಗೆ ಹಣವನ್ನು ಲೂಟಿ ಮಾಡುತ್ತಿದ್ದಾರೆ. ಇದರ ಪರಿಣಾಮವೇ ಮೋದಿ ಮತ್ತು ರಾಹುಲ್ ಗಾಂದಿಗೆ ಬಂಡವಾಳ ಶಾಹಿಗಳು ಬೆಂಬಲ ನೀಡಿರುವುದು ಎಂದು ಹರಿಹಾಯ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಸಿಪಿಎಂ ತಾಲೂಕು ಕಾರ್ಯದರ್ಶಿ ವಿ. ಬಸವರಾಜು, ಮುಖಂಡರಾದ ತ್ಯಾಗರಾಜು, ಸಾವಿತ್ರಿ. ಮೀನಾ, ರಾಮಚಂದ್ರರೆಡ್ಡಿ, ಲಿಂಗರಾಜು ಇದ್ದರು.
ಮಹಿಳಾ ಕಾಲೇಜಿಗೆ ಬಹುಮಾನ
ಹುಣಸೂರು: ಮೈಸೂರಿನ ಎಸ್ಬಿಆರ್ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ಮಹಿಳೆಯರ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹುಣಸೂರು ಸರ್ಕಾರಿ ಮಹಿಳಾ ಕಾಲೇಜು ತಂಡ ಸೆಮಿಫೈನಲ್ನಲ್ಲಿ ಅತಿಥೇಯ ಮಹಾಜನ ಪ್ರಥಮ ದರ್ಜೆ ಕಾಲೇಜು ತಂಡದ ವಿರುದ್ಧ 2-1 ನೇರ ಸೆಟ್ಗಳ ಅಂತರದಲ್ಲಿ ವಿಜೇತರಾಗಿ, ಫೈನಲ್ ಪಂದ್ಯಾವಳಿಯಲ್ಲಿ ಸ್ನಾತಕೋತ್ತರ ವಿಶ್ವವಿದ್ಯಾಲಯ ತಂಡದೊಂದಿಗೆ ಸೆಣಸಾಡಿ ದ್ವಿತೀಯ ಸ್ಥಾನ ಪಡೆಯಿತು.
ಹುಲ್ಲಿನ ಮೆದೆಗೆ ಬೆಂಕಿ
ಪಿರಿಯಾಪಟ್ಟಣ: ಹುಲ್ಲಿನ ಮೆದೆಗೆ ಬೆಂಕಿಬಿದ್ದು ಸಾವಿರಾರು ರು. ಮೌಲ್ಯದ ಹುಲ್ಲು ಸುಟ್ಟುಹೋಗಿರುವ ಘಟನೆ ತಾಲೂಕಿನ ಆವರ್ತಿ ಗ್ರಾಮದಲ್ಲಿ ಸೋಮವಾರ ರಾತ್ರಿ ಜರುಗಿದೆ. ಗ್ರಾಮದ ಎ.ಎಆರ್. ಮಹದೇವಪ್ಪ ಎಂಬುವರಿಗೆ ಸೇರಿದ ಹುಲ್ಲಿನ ಮೆದೆಗೆ ದುಷ್ಕರ್ಮಿಗಳು ಸೋಮವಾರ ರಾತ್ರಿ ಬೆಂಕಿ ಹಚ್ಚಿದ್ದು ಬಹುತೇಕ ಹುಲ್ಲು ಸುಟ್ಟುಹೋಗಿದ್ದೆ. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು ಸುತ್ತಮುತ್ತಲು ಇದ್ದ ಅನೇಕ ಹುಲ್ಲಿನ ಮೆದೆಗಳು ಬೆಂಕಿಗಾಹುತಿಯಾಗುವುದನ್ನು ತಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಬೈಲುಕುಪ್ಪೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

