ಸುತ್ತೂರು ಮಠಕ್ಕೆ ರಾಜಕಾರಣಿಗಳ ಪ್ರದಕ್ಷಿಣೆ
ಅಂಶಿ ಪ್ರಸನ್ನಕುಮಾರ್
ಮೈಸೂರು: ಚುನಾವಣೆ ಬಂತೆಂದರೆ ಸಾಕು ಮೈಸೂರು, ಚಾಮರಾಜನಗರ ಜಿಲ್ಲೆಗಳ ಎಲ್ಲಾ ಪಕ್ಷಗಳ ರಾಜಕಾರಣಿಗಳು ಸುತ್ತೂರು ಮಠಕ್ಕೆ ಎಡತಾಕುತ್ತಾರೆ. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಯಾರೇ ಬಂದರೂ ಆಶೀರ್ವದಿಸುತ್ತಾರೆ.
ಈಗಾಗಲೇ ಕಾಂಗ್ರೆಸ್ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್, ಕೆ.ಜೆ. ಜಾರ್ಜ್, ಮೈಸೂರು ಅಭ್ಯರ್ಥಿ ಎಚ್. ವಿಶ್ವನಾಥ್, ಚಾಮರಾಜನಗರ ಅಭ್ಯರ್ಥಿ ಆರ್. ಧ್ರುವನಾರಾಯಣ, ಹಾಸನ ಅಭ್ಯರ್ಥಿ ಎ. ಮಂಜು, ಬೆಂಗಳೂರು ಸೆಂಟ್ರಲ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಮೊದಲಾದವರು ಭೇಟಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಾಸು, ಎಚ್.ಪಿ. ಮಂಜುನಾಥ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಪರ ಮಾಜಿ ಸಚಿವ ವಿ. ಸೋಮಣ್ಣ, ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ, ಚಾಮರಾಜನಗರ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಮೊದಲಾದವರು ಸ್ವಾಮೀಜಿಯನ್ನು ಭೇಟಿಯಾಗಿದ್ದಾರೆ. ಹಾಗೆಯೇ ಜೆಡಿಎಸ್ ಪರ ಮಾಜಿ ಸಚಿವ ಎಚ್.ಡಿ. ರೇವಣ್ಣ ಸಹ ಭೇಟಿಯಾಗಿದ್ದಾರೆ.
ಸುತ್ತೂರು ಮಠ ದಾಸೋಹಕ್ಕೆ ಹೆಸರುವಾಸಿ. ಬೆಳಗ್ಗೆ ಹಾಗೂ ಸಂಜೆ ಮಠಕ್ಕೆ ಹೋದಲ್ಲಿ ಉಪಾಹಾರ, ಮಧ್ಯಾಹ್ನ ಭೋಜನದ ವ್ಯವಸ್ಥೆ ಇರುತ್ತದೆ. ಸ್ವಾಮಿಗಳು ಪ್ರತಿಯೊಬ್ಬರಿಗೂ ಶಾಲು ಹಾಕಿ, ಫಲ, ತಾಂಬೂಲ ನೀಡಿ, ಆಶೀರ್ವದಿಸಿ ಕಳುಹಿಸಿಕೊಡುತ್ತಾರೆ. ಕುಶಲೋಪರಿ ವಿಚಾರಿಸುತ್ತಾರೆ.
ಚಾಮುಂಡಿಬೆಟ್ಟ- ನಂಜನಗೂಡು: ಸುತ್ತೂರು ಮಠ ಹೊರತುಪಡಿಸಿದರೆ ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಎಚ್. ವಿಶ್ವನಾಥ್, ಪ್ರತಾಪ್ ಸಿಂಹ, ಚಿಕ್ಕಮಗಳೂರು- ಉಡುಪಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮೈಸೂರು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವರನ್ನು ಭೇಟಿ ಮಾಡಿದ್ದಾರೆ.
ಚಾಮರಾಜನಗರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಹಾಗೂ ಜೆಡಿಎಸ್ ಅಭ್ಯರ್ಥಿ ಎಂ. ಶಿವಣ್ಣ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದಿದ್ದಾರೆ. ಅಲ್ಲದೇ ಪ್ರತಾಪ್ ಸಿಂಹ ಆದಿಚುಂಚನಗಿರಿ ಶಾಖಾ ಮಠದ ಸೋಮನಾಥೇಶ್ವರ ಸ್ವಾಮೀಜಿ, ಎ.ಆರ್. ಕೃಷ್ಣಮೂರ್ತಿ ಅವರು ವಾಟಾಳ್ ಮಠದ ಸಿದ್ಧಲಿಂಗ ಶಿವಚಾರ್ಯ ಸ್ವಾಮಿಗಳನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದಾರೆ.
ಎಚ್. ವಿಶ್ವನಾಥ್ ಅವರು ಸರಖಾಜಿ ಮಹಮದ್ ಉಸ್ಮಾನ್ ಷರೀಫ್, ಬಿಷಪ್ ಡಾ. ಥಾಮಸ್ ವಾಜಪಿಳೈ, ಯೋಗಾನರಸ್ವಾವು ದೇವಸ್ಥಾನದ ಪ್ರೊ. ಭಾಷ್ಯಂ ಸ್ವಾಮಿ ಅವರ ಆಶೀರ್ವಾದ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

