ಬ್ಯಾಂಕಿಂಗ್ ಕಾನೂನು ತಿಳಿಸಿದ ವಿದ್ಯಾರ್ಥಿಗಳು
ಮೈಸೂರು: ಆ ಸ್ಥಳ ಬ್ಯಾಂಕ್ನದ್ದು ಅಲ್ಲ. ಅಲ್ಲಿರುವವರು ಬ್ಯಾಂಕಿಂಗ್ ಉದ್ಯೋಗಿಗಳೂ ಆಗಿರಲಿಲ್ಲ. ಆದರೆ, ಬ್ಯಾಂಕಿಂಗ್ ನಿರ್ವಹಣೆ, ಅದಕ್ಕೆ ಸಂಬಂಧಪಟ್ಟ ಕಾನೂನಿನ ಬಗ್ಗೆ ಸಾರ್ವಜನಿಕರಿಗೆ ಸಂಪೂರ್ಣ ಮಾಹಿತಿ ನೀಡಿದ್ದು ವಿಶೇಷವಾಗಿತ್ತು.
ಕುವೆಂಪುನಗರದಲ್ಲಿರುವ ಜೆಎಸ್ಎಸ್ ಕಾನೂನು ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಬ್ಯಾಂಕಿಂಗ್ ಅರಿವು ಕಾರ್ಯಕ್ರಮದಲ್ಲಿ ಕಾನೂನು ಪದವಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಸಾಕಷ್ಟು ಮಾಹಿತಿ ಒದಗಿಸಿದರು.
ಬ್ಯಾಂಕಿಂಗ್ ನಿರ್ವಹಣೆ, ಗ್ರಾಹಕರಿಗೆ ನೀಡಲೇಬೇಕಾದ ಮಾಹಿತಿ, ಬ್ಯಾಂಕಿಂಗ್ನವರು ಅನುಸರಿಸಬೇಕಾದ ನೀತಿ ನಿಯಮಗಳು, ಆರ್ಥಿಕ ಸೇರ್ಪಡೆಗೆ ರೂಪಿಸಿರುವ ಕಾರ್ಯಚಟುವಟಿಕೆಗಳು, ಆರ್ಬಿಐ ಕಾರ್ಯನೀತಿ, ಹಣಕಾಸು ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಮೂರನೇ ವರ್ಷದಲ್ಲಿ ಓದುತ್ತಿರುವ ತೆಸಿನ್, ಜೂಹಾನ್ನಾ, ಬಿ.ಆರ್. ರವಿಕಿರಣ್ ವಿವರಿಸಿದರೆ, ಸತ್ಯಮೂರ್ತಿ ಅವರು ಬರೋಬ್ಬರಿ 20 ದೇಶಗಳ ನೋಟುಗಳನ್ನು ಪ್ರದರ್ಶಿಸಿದರು. ಏಷ್ಯಾಖಂಡ, ಆಫ್ರಿಕಾ ಖಂಡ, ಯೂರೋಪ್ ಖಂಡಗಳ ನೋಟುಗಳನ್ನು ಸಂಗ್ರಹಿಸಿದ್ದಾರೆ. ಅವುಗಳಲ್ಲಿ ಅಮೆರಿಕ, ಮಲೇಷ್ಯಾ, ಬರ್ಮಾ, ಚೈನಾ, ತಾಂಜೇನಿಯಾ, ಅಂಗೋಲ ದೇಶಗಳದ್ದು ಪ್ರಮುಖವಾದವು.
ಮತ್ತೊಂದು ಮಳಿಗೆಯಲ್ಲಿ ಅರ್ಚನಾ ಮತ್ತು ರೂಪೇಶ್ ತಂಡದವರು ವಿದೇಶದಲ್ಲಿ ಬ್ಯಾಂಕಿಂಗ್ ಕುರಿತು ಮಾಹಿತಿ ನೀಡಿದರು. ನೇರ ಬಂಡವಾಳ ಹೂಡಿಕೆಯ ಫಲಪ್ರದ, ಎಡರತೊಡರುಗಳು, ವಿದೇಶದಲ್ಲಿ ಭಾರತದ ಬ್ಯಾಂಕುಗಳು, ಭಾರತದಲ್ಲಿ ವಿದೇಶಿ ಬ್ಯಾಂಕುಗಳು, ವಿವಿಧ ಯೋಜನೆಗಳು, ಆರ್ಬಿಐ ನೀಡಿರುವ ಸದಾವಕಾಶಗಳು ಹಾಗೂ ಭವಿಷ್ಯದ ಬ್ಯಾಂಕಿಂಗ್ ಎಂಬ ದೃಷ್ಟಿಕೋನವನ್ನು ವಿಸ್ತೃತವಾಗಿ ತಿಳಿಸಿದರು. ಉಳಿದಂತೆ ಇ- ಬ್ಯಾಂಕಿಂಗ್ ಬಗೆಗೂ ಪ್ರಾತ್ಯಕ್ಷಿಕೆ ನೀಡಲಾಯಿತು.
ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿದ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಮಾತನಾಡಿ, ನಾನು ಪೊಲೀಸ್ ಅಧಿಕಾರಿಯಾಗಿದ್ದರೂ ವೃತ್ತಿ ಆರಂಭಿಸಿದ್ದು ಕೆನರಾ ಬ್ಯಾಂಕ್ನಿಂದ. ಈಗಂತೂ ಅತಿ ಹೆಚ್ಚು ಪ್ರಕರಣಗಳು ಆರ್ಥಿಕ ಅಪರಾಧಕ್ಕೆ ಸಂಬಂಧಿಸಿದ್ದಾಗಿವೆ. ಶೇ.50 ರಷ್ಟು ಪ್ರಕರಣಗಳು ದಾಖಲಾಗಿದ್ದು ಬ್ಯಾಂಕಿಂಗ್ ಕಾನೂನು ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಕಾರ್ಪೊರೆಟ್ ಕಂಪನಿಗಳು ಈ ಕಾನೂನು ಬಗ್ಗೆ ಮಾಹಿತಿ ಪಡೆದುಕೊಳ್ಳಲಿ ಎಂದರು.
ಜೆಎಸ್ಎಸ್ ಕಾನೂನು ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್. ಸುರೇಶ್, ಬ್ಯಾಂಕಿಂಗ್ ಕಾನೂನು ಪ್ರಾಧ್ಯಾಪಕಿ ವೀಣಾಶ್ರೀ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

