ಮೈಸೂರು

ಹುರಿಯಾಳುಗಳ ಜಿದ್ದಾಜಿದ್ದಿಗೆ ಅಖಾಡ ಸಿದ್ಧ

Published On :

 ಅಂಶಿ ಪ್ರಸನ್ನಕುಮಾರ್
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಬಹುಮುಖ ಹೋರಾಟಕ್ಕೆ ಕಣ ಸಜ್ಜಾಗಿದೆ. ಪ್ರಮುಖ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಜೊತೆಗೆ ಬಿಎಸ್ಪಿ, ಆಮ್ ಆದ್ಮಿ ಪಾರ್ಟಿ, ಸಿಪಿಐ-ಎಂಎಲ್, ಕರುನಾಡ ಪಕ್ಷ, ಆರ್‌ಪಿಐ ಮತ್ತಿತರ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ನಾಮಪತ್ರ ವಾಪಸ್‌ಗೆ ಮಾ.29 ಕೊನೆಯ ದಿನ. ಅಂದು ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳು ಎಷ್ಟು ಎಂಬುದು ಗೊತ್ತಾಗಲಿದೆ. ಕೆಲ ಪಕ್ಷೇತರರು ಕಣದಿಂದ ಹಿಂದೆ ಸರಿದರೂ ಮೂರು ಪ್ರಮುಖ ಪಕ್ಷಗಳ ಜೊತೆಗೆ ಇನ್ನೂ ಮೂರ್ನಾಲ್ಕು ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿ ಉಳಿಯುವುದರಿಂದ ಬಹುಮುಖ ಸ್ಪರ್ಧೆ ನಿಶ್ಚಿತ.
ಕಾಂಗ್ರೆಸ್‌ನಿಂದ ಹಾಲಿ ಸಂಸದ ಎಚ್.ವಿಶ್ವನಾಥ್ ಪುನರಾಯ್ಕೆ ಬಯಸಿದ್ದಾರೆ. ಬಿಜೆಪಿಯಿಂದ ಅಂಕಣಕಾರ ಪ್ರತಾಪ್ ಸಿಂಹ, ಜೆಡಿಎಸ್‌ನಿಂದ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಹಾಗೂ ಮಾಜಿ ಉಪ ಲೋಕಾಯುಕ್ತ ಚಂದ್ರಶೇಖರಯ್ಯ ಹುರಿಯಾಳು. ಬಿಎಸ್ಪಿಯಿಂದ ಮೋಹನಕುಮಾರ್, ಕರುನಾಡು ಪಕ್ಷದಿಂದ ರತಿ ಪೂವಯ್ಯ, ಸಿಪಿಐಎಂಎಲ್‌ನಿಂದ ನಿರ್ವಾಣಪ್ಪ, ಆಮ್ ಅದ್ಮಿ ಪಾರ್ಟಿಯಿಂದ ಎಂ.ವಿ. ಪದ್ಮಮ್ಮ, ಜೆಡಿಯುನಿಂದ ಎಸ್.ಪಿ. ಮಹದೇವಪ್ಪ, ಡೆಮಾಕ್ರೆಟಿಕ್ ಪ್ರಜಾಕ್ರಾಂತಿ ಪಾರ್ಟಿಯಿಂದ ಹುಣಸೂರು ಕೆ.ಚಂದ್ರಶೇಖರ್, ಸರ್ವ ಜನ ಪಾರ್ಟಿಯಿಂದ ತಿಮ್ಮೇಗೌಡ, ಆರ್‌ಪಿಐನಿಂದ ಈಶ್ವರ ತೊರೆಮಾವು, ಪಕ್ಷೇತರರಾಗಿ ಬೋಜಣ್ಣ ಎನ್. ಸೋಮಯ್ಯ, ಶ್ರೀನಿವಾಸ, ಎನ್.ಸಂಪತ್ತು, ಎಂ. ಖಲೀಲ್, ಪಿ.ಎಸ್. ಯಡಿಯೂರಪ್ಪ, ಬಿ.ಎಸ್. ಕುಮಾರಸ್ವಾಮಿ, ಎಂ.ಎಸ್. ಪ್ರವೀಣ್, ಜ್ಞಾನಪ್ರಕಾಶ್, ಆರ್. ವಿಶ್ವನಾಥ್  ಕಣದಲ್ಲಿದ್ದಾರೆ.
16 ಲಕ್ಷ ಮತದಾರರು: ಕ್ಷೇತ್ರ ವ್ಯಾಪ್ತಿಯಲ್ಲಿ 16,77,428 ಮತದಾರರು ಇದ್ದಾರೆ. ಇವರ ಪೈಕಿ 8,44,767 ಪುರುಷರು ಹಾಗೂ 8,32,661 ಮಹಿಳೆಯರು. ಮೈಸೂರು ನಗರದ ಕೃಷ್ಣರಾಜ, ಚಾಮರಾಜ, ನರಸಿಂಹರಾಜ, ಚಾಮಂಡೇಶ್ವರಿ, ಹುಣಸೂರು, ಪಿರಿಯಾಪಟ್ಟಣ, ಕೊಡಗಿನ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳು ಒಳಪಡುತ್ತವೆ. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಜೆಡಿಎಸ್, ಕೊಡಗಿನ ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ, ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
2004ರ ಚುನಾವಣೆಯಲ್ಲಿ ಗೆಲುವಿಗಾಗಿ ಬಿಜೆಪಿ- ಜೆಡಿಎಸ್ ನಡುವೆ ಜಿದ್ದಾಜಿದ್ದಿ ನಡೆದಿತ್ತು. ಬಿಜೆಪಿ ಗೆದ್ದಿತ್ತು. ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಹೋಗಿತ್ತು. ಆಗಿನ್ನೂ ಎಚ್.ಡಿ. ಕೋಟೆ ಹಾಗೂ ಕೆ.ಆರ್. ನಗರ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿಯೇ ಇದ್ದವು. ಆದರೆ ಕಳೆದ ಲೋಕಸಭಾ ಚುನಾವಣೆ ವೇಳೆಗೆ ಅಂದರೆ 2009 ರಲ್ಲಿ ಕೆ.ಆರ್. ನಗರವು ಮಂಡ್ಯಕ್ಕೆ, ಎಚ್.ಡಿ. ಕೋಟೆಯು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದವು. ಕೊಡಗು ಮೈಸೂರಿನ ತೆಕ್ಕಿಗೆ ಬಂದಿತು. ಇದಾದ ನಂತರ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿ. ಸುಮಾರು ಏಳು ಸಾವಿರ ಮತಗಳ ಅಂತರದಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿತ್ತು. ಬಿಜೆಪಿ ಸೋತಿತ್ತು.
ಕಳೆದ ನಾಲ್ಕು ಚುನಾವಣೆಗಳಲ್ಲೂ ಬಿಜೆಪಿ ಅಭ್ಯರ್ಥಿಯಾಗಿದ್ದ ಹಾಗೂ ತಲಾ ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದ ಸಿ.ಎಚ್. ವಿಜಯಶಂಕರ್ ಈ ಬಾರಿ ಹಾಸನಕ್ಕೆ ಸ್ಥಳಾಂತರವಾಗಿದ್ದಾರೆ. ಹೀಗಾಗಿ ವಿಶ್ವನಾಥ್ ಮಾತ್ರ ಹಳೇ ಹುಲಿ. ಇತರರು ಹೊಸಬರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐದು ಕಡೆ, ಬಿಜೆಪಿ ಎರಡು ಕಡೆ, ಜೆಡಿಎಸ್ 1 ಕಡೆ ಮಾತ್ರ ಪ್ರಥಮ ಸ್ಥಾನ. ಕಾಂಗ್ರೆಸ್ ಉಳಿದೆರಡು ಕಡೆ ದ್ವಿತೀಯ, ಒಂದು ಕಡೆ ತೃತೀಯ ಸ್ಥಾನ ಪಡೆದಿತ್ತು. ಬಿಜೆಪಿ ಕೃಷ್ಣರಾಜ, ಚಾಮರಾಜದಲ್ಲಿ ಮಾತ್ರ ದ್ವಿತೀಯ ಸ್ಥಾನ, ಉಳಿದೆಡೆ ತೃತೀಯ ಸ್ಥಾನ. ಜೆಡಿಎಸ್ ನಾಲ್ಕು ಕಡೆ ದ್ವಿತೀಯ ಹಾಗೂ ಒಂದು ಕಡೆ ತೃತೀಯ ಸ್ಥಾನ ಪಡೆದಿತ್ತು.
ಈ ಅಂಕಿ ಅಂಶಗಳ ಆಧಾರದ ಮೇಲೆ ನೋಡಿದರೆ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಬಲ ಪ್ರತಿಪಕ್ಷ. ಆದರೆ ಲೋಕಸಭಾ ಚುನಾವಣೆ ಬಂದಾಗ 1998 ರಿಂದಲೂ ಈ ಸ್ಥಾನವನ್ನು ಬಿಜೆಪಿ ಕಸಿದುಕೊಂಡಿದೆ.
ಎರಡು ಸುತ್ತು ಪ್ರಚಾರ: ಕಾಂಗ್ರೆಸ್ ಯಾವುದೇ ಗೊಂದಲ ಇಲ್ಲದಂತೆ ಹಾಲಿ ಸಂಸದ ಎಚ್. ವಿಶ್ವನಾಥ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತು. ಅವರು ಈಗಾಗಲೇ ಎರಡು ಸುತ್ತು ಪ್ರಚಾರ ಮುಗಿಸಿದ್ದಾರೆ. ಬಿಜೆಪಿ ಕೂಡ ನಾನಾ ಗೊಂದಲಗಳ ನಡುವೆಯೂ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ಘೋಷಿಸಿತು. ಆದರೆ ಜೆಡಿಎಸ್ ಅಭ್ಯರ್ಥಿ ಆಯ್ಕೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ಕಾಯಬೇಕಾಯಿತು. ಅವರ ಬಿಟ್ಟು ಇವರ್ಯಾರು... ಎಂದು ಕೊನೆಗೆ ಚಂದ್ರಶೇಖರಯ್ಯ ಅವರನ್ನು ಆಯ್ಕೆ ಮಾಡಿದೆ. ಮೇಲ್ನೋಟಕ್ಕೆ ಬಹುಮುಖ ಸ್ಪರ್ಧೆ ಇದ್ದರೂ ಕ್ಷೇತ್ರದ ಇತಿಹಾಸ ಗಮನಿಸಿದಾಗ ಗೆಲುವಿಗಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಹೋರಾಟ ನಡೆಯಲಿದೆ. ಬಿಎಸ್ಪಿ ಕಣದಲ್ಲಿರುವುದು, ಜೆಡಿಎಸ್‌ಗೆ ಎಸ್‌ಡಿಪಿಐ ಬೆಂಬಲ ಘೋಷಿಸಿರುವುದರಿಂದ ಯಾರು ಯಾರ ಮತಬುಟ್ಟಿಗೆ ಕೈಹಾಕುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.