ಹಗರಣ ರಹಿತ ಸರ್ಕಾರ ನಡೆಸಿದ ದೇವೇಗೌಡ
ಮೈಸೂರು: ದೇಶದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ ಎಚ್.ಡಿ. ದೇವೇಗೌಡ ಅವರು ಹಗರಣ ರಹಿತ ಸರ್ಕಾರ ನೀಡಿದವರು ಎಂದು ಮೈಸೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹಾಗೂ ನಿವೃತ್ತ ನ್ಯಾಯಮೂರ್ತಿ ಚಂದ್ರಶೇಖರಯ್ಯ ಹೇಳಿದರು.
ಈ ಹಿಂದೆ ತೃತೀಯ ರಂಗದ ಮೂಲಕ 11 ತಿಂಗಳು ಪ್ರಧಾನಿಯಾಗಿ ಅಧಿಕಾರ ನಡೆಸಿದ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಅವರು ಹಗರಣ ರಹಿತ ಸರ್ಕಾರ ನೀಡಿದವರು. ಅವರು ಪ್ರಧಾನಿಯಾಗಿದ್ದಾಗ ಕೊಟ್ಟ ಬಜೆಟ್ ಅನ್ನು ಇವರೆಗೂ ಯಾರೂ ನೀಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ದಲಿತರಿಗೆ ಸಾಮಾಜಿಕ ನ್ಯಾಯ ಒದಗಿಸಿದ ಪಕ್ಷ ಜೆಡಿಎಸ್. ಸಮಾಜಕ್ಕೆ ನಿಮ್ಮಿಂದ ಒಳಿತಾಗಲಿದೆ ಎಂದು ಎಚ್.ಡಿ. ದೇವೇಗೌಡ, ಕೃಷ್ಣಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರು ಬಯಸಿದ ಹಿನ್ನೆಲೆಯಲ್ಲಿ ಹಾಗೂ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರಿ ಸ್ಪರ್ಧಿಸಿದ್ದೇನೆ ಎಂದು ತಿಳಿಸಿದರು.
ನಾನು ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ ಹೋಬಳಿಯ ರಾಂಪುರದ ರೈತ ಕುಟುಂಬಕ್ಕೆ ಸೇರಿದವನು. ಚಿಕ್ಕ ವಯಸ್ಸಿನಿಂದ ಎಲ್ಲಾ ರೀತಿಯ ಕೃಷಿ ಕಾಯಕ ಮಾಡಿದ್ದೇನೆ. ಅದರ ಜತೆಗೆ ಯುವರಾಜ ಕಾಲೇಜಿನಲ್ಲಿ ಪಿಯುಸಿ, ಮಹಾರಾಜ ಕಾಲೇಜಿನಲ್ಲಿ ಬಿ.ಎ ಹಾಗೂ ಮಾನಸಗಂಗೋತ್ರಿಯಲ್ಲಿ ಎಂ.ಎ ಪದವಿ ಪಡೆದೆ. ನಂತರ ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪೂರೈಸಿದೆ ಎಂದರು. ವಕೀಲನಾದ ನಂತರ ಕೆ.ಆರ್. ನಗರದಿಂದ ಸ್ಪರ್ಧಿಸುವಂತೆ ದೇವರಾಜ ಅರಸರು ಸಲಹೆ ನೀಡಿದ್ದರು. ಆದರೆ ಹಿರಿಯ ವಕೀಲರಾಗಿದ್ದ ದೊಡ್ಡಕಾಳಯ್ಯ ಅವರು ವಕೀಲಿ ವೃತ್ತಿ ಮುಂದುವರಿಸು ಎಂದ ಸಲಹೆ ನೀಡಿದ ಕಾರಣ ಆಗ ರಾಜಕೀಯಕ್ಕೆ ಬರಲಿಲ್ಲ. ಹೈಕೋರ್ಟ್, ಸುಪ್ರಿಂ ಕೋರ್ಟ್ ವಕೀಲರಾಗಿ, ನ್ಯಾಯಾಧೀಶರಾಗಿ, ಉಪಲೋಕಾಯುಕ್ತರಾಗಿ, ಗ್ರಾಹಕರ ವೇದಿಕೆಯ ನ್ಯಾಯಾಧೀಶರಾಗಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಒದಗಿಸಿದ್ದೇನೆ. ಈಗ ರಾಜಕೀಯದ ಮೂಲಕ ಮತ್ತೊಷ್ಟು ಸೇವೆಗೆ ಅವಕಾಶ ದೊರಕಿದ್ದು, ಪ್ರಜ್ಞಾವಂತ ಜನರು ಬೆಂಬಲ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್. ಚಿಕ್ಕಮಾದು ಮಾತನಾಡಿ, ಜೆಡಿಎಸ್ನಿಂದ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಲಾಗಿತ್ತು. ನಂತರ ಬದಲಾದ ಸನ್ನಿವೇಶದಿಂದ ಹಿರಿಯ ರಾಜಕಾರಣಿ ಸಿ.ಕೆ. ಜಾಫರ್ ಷರೀಫ್ ಅವರನ್ನು ಸ್ಪರ್ಧಿಸುವಂತೆ ಕೋರಲಾಗಿತ್ತು. ಆದರೆ ಅವರು ಒಪ್ಪದ ಕಾರಣ ಈಗ ಮೈಸೂರು ಜಿಲ್ಲೆಯವರೇ ಆದ ನಿವೃತ್ತ ನ್ಯಾಯಾಧೀಶ ಚಂದ್ರಶೇಖರಯ್ಯ ಅವರನ್ನು ಕಣಕ್ಕಿಳಿಸಲಾಗಿದೆ ಎಂದರು.
ವಿಪ ಸದಸ್ಯ ಸಂದೇಶ್ ನಾಗರಾಜ್, ಶಾಸಕರಾದ ದೇವೇಗೌಡ, ಸಾ.ರಾ. ಮಹೇಶ್, ಜೆಡಿಎಸ್ ನಗರಾಧ್ಯಕ್ಷ ರಾಜಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

