3,084 ವಿದ್ಯಾರ್ಥಿಗಳು
ಪಿರಿಯಾಪಟ್ಟಣ: ಮಾ.28ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಾಲೂಕಿನಾದ್ಯಂತ ಒಟ್ಟು 3,084 ವಿದ್ಯಾರ್ಥಿಗಳು ಹಾಜರಾಗುವರು. ಇವರಲ್ಲಿ 1,483 ಬಾಲಕರು ಹಾಗೂ 1,601 ಬಾಲಕಿಯರು ಪರೀಕ್ಷೆ ಬರೆಯಲಿದ್ದಾರೆ. ತಾಲೂಕಿನಾದ್ಯಂತ ಒಟ್ಟು 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಯಾವುದೇ ಸೂಕ್ಷ್ಮ, ಅತಿಸೂಕ್ಷ ಕೇಂದ್ರಗಳಿಲ್ಲ.
ನೇಮಕ
ಕೆ.ಆರ್. ನಗರ: ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯಾಗಿ ಪುರಸಭಾ ಮಾಜಿ ಸದಸ್ಯ, ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕೆ.ಎಸ್. ರೇವಣ್ಣ ಅವರನ್ನು ನೇಮಿಸಲಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದ್ದಾರೆ.
ಧರಣಿ ಮುಂದಕ್ಕೆ
ಟಿ. ನರಸೀಪುರ: ತಲಕಾಡು ಪೊಲೀಸ್ ಠಾಣೆಯ ಎಸ್ಐ ಎಸ್.ಆನಂದ್ ಅಮಾನತಿಗೆ ಆಗ್ರಹಿಸಿ ಮಾ.28ರ ಶುಕ್ರವಾರದಿಂದ ಹಮ್ಮಿಕೊಳ್ಳಬೇಕಿದ್ದ ಧರಣಿಯನ್ನು ಮುಂದೂಡಲಾಗಿದೆ ಎಂದು ಟಿಪ್ಪರ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಂ.ಪರಶಿವಮೂರ್ತಿ ಹಾಗೂ ಲೈಲ್ಯಾಂಡ್ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಎಲ್.ರವಿ ಹೇಳಿದ್ದಾರೆ. ಸಾರ್ವಜನಿಕರೊಂದಿಗೆ ಅಸಭ್ಯ ವರ್ತಿಸುವ ಎಸ್.ಆನಂದ್ ಅವರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ಮಾ.28ರಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತಾದರೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಭರವಸೆಯ ಹಿನ್ನೆಲೆಯಲ್ಲಿ ಹೋರಾಟ ಮುಂದೂಡಲಾಗಿದೆ.
ತರಬೇತಿ ನಾಳೆ
ಹುಣಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ನೇಮಕಗೊಂಡಿರುವ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಒಂದನೇ ಮತಗಟ್ಟೆ ಅಧಿಕಾರಿಗಳಿಗೆ ಮಾ.29ರ ಬೆಳಗ್ಗೆ 9ಕ್ಕೆ ತರಬೇತಿ ಆಯೋಜಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಜಗದೀಶ್ ಹೇಳಿದರು. ತರಬೇತಿಯನ್ನು ಪಟ್ಟಣದ ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಅದೇ ದಿನ ಮಧ್ಯಾಹ್ನ 3ಕ್ಕೆ ಮೂರು ಮತ್ತು ನಾಲ್ಕನೇ ಮತಗಟ್ಟೆ ಅಧಿಕಾರಿಗಳಿಂದ ಫಾರಂ 12 ಮತ್ತು 12ಎ ಗಳನ್ನು ಸ್ವೀಕರಿಸುವ ವ್ಯವಸ್ಥೆ ಮಾಡಲಾಗಿರುತ್ತದೆ. ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಎಲ್ಲ ಸಿಬ್ಬಂದಿಗೆ ಅಂಚೆ ಮತದಾನ ಮಾಡಲು ಅನುಕೂಲವಾಗುವಂತೆ ನಮೂನೆ 12ನ್ನು ಸ್ವೀಕರಿಸಿಲು ತರಬೇತಿ ಸ್ಥಳದಲ್ಲಿ 14 ಕೌಂಟರ್ಗಳನ್ನು ತೆರೆಯಲಾಗಿದೆ. ಎಂ.ಎಂ. ಗಣೇಶ್, ಗ್ರೇಡ್-2 ತಹಸೀಲ್ದಾರ್ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಎರಡು ಸಹಾಯವಾಣಿ ಕೌಂಟರ್ ಸಹ ತೆರೆಯಲಾಗಿದ್ದು, ಮತದಾರರು 8ರಿಂದ ನೋಂದಾವಣೆ ಹಾಗೂ ಇತರೆ ಮಾಹಿತಿಯನ್ನು ಸಹಾಯವಾಣಿ ಕೇಂದ್ರದಿಂದ ಪಡೆಯಬಹುದು. ಮತಗಟ್ಟೆ ಸಿಬ್ಬಂದಿ ಕಡ್ಡಾಯವಾಗಿ ತರಬೇತಿಗೆ ಎಪಿಕ್ ಕಾರ್ಡ್ನೊಂದಿಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
ನರ್ಸ್ ತರಾಟೆ
ಪಿರಿಯಾಪಟ್ಟಣ: ಸೂಕ್ತ ರೀತಿಯಲ್ಲಿ ಕರ್ತವ್ಯ ನಿರ್ವಹಿಸದ ನರ್ಸ್ಗೆ ಬುದ್ಧಿ ಹೇಳಿದ ವೈದ್ಯರನ್ನು ನರ್ಸ್ ಪತಿ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿಯೇ ತರಾಟೆಗೆ ತೆಗೆದುಕೊಂಡ ಪ್ರಸಂಗ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜರುಗಿದೆ. ಆಸ್ಪತ್ರೆಯ ನರ್ಸ್ ನಾಗವೇಣಿ ಚುಚ್ಚುಮದ್ದು ನೀಡುವ ವಿಚಾರದಲ್ಲಿ ಹಾಗೂ ಕರ್ತವ್ಯದ ವೇಳೆ ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆ ಆಸ್ಪತ್ರೆಯ ದಂತ ವೈದ್ಯ ಡಾ.ತೇಜಸ್ ಅವರು ನಾಗವೇಣಿಗೆ ಬುದ್ಧಿವಾದ ಹೇಳಿದದರು. ನರ್ಸ್ ನಾಗವೇಣಿಯ ಪತಿ ಲೋಕೇಶ್ ಹಾಗೂ ಅವರ ಸಂಗಡಿಗರೊಂದಿಗೆ ಬಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ತ್ರಿವೇಣಿ ಅವರ ಸಮ್ಮುಖದಲ್ಲಿಯೇ ತಾವು ಮಾಜಿ ಮುಖ್ಯಮಂತ್ರಿಯೊಬ್ಬರ ಸಂಬಂಧಿಯಾಗಿರುವುದಾಗಿ ಹೇಳಿಕೊಂಡು ಡಾ.ತೇಜಸ್ ಅವರನ್ನು ತರಾಟೆಗೆ ತೆಗೆದುಕೊಂಡು ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದರು. ಘಟನೆ ನಡೆಯುವ ವೇಳೆ ಡಾ.ಪ್ರಕಾಶ್ ಹಾಗೂ ಅನೇಕ ರೋಗಿಗಳು ಮತ್ತು ಸಾರ್ವಜನಿಕರು ಇದ್ದರು. ಘಟನೆಯ ಬಗ್ಗೆ ಸಾರ್ವಜನಿಕರು ನರ್ಸ್ ಪತಿಯ ದಬ್ಬಾಳಿಕೆ ಖಂಡಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪುಟ್ಟರಾಜು ಪರ ಸಾ.ರಾ ಮಹೇಶ್ ಪ್ರವಾಸ
ಕೆ.ಆರ್. ನಗರ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಸ್ ಅಭ್ಯರ್ಥಿ ಸಿ.ಎಸ್. ಪುಟ್ಟರಾಜು ಪರ ಶಾಸಕ ಸಾ.ರಾ.ಮಹೇಶ್ ಮಾ.28 ಮತ್ತು 29 ತಾಲೂಕಿನ ವಿವಿಧ ಗ್ರಾಮಗಳಲ್ಲಿ ಚುನಾವಣಾ ಪ್ರವಾಸ ಮಾಡಿ ಕಾರ್ಯಕರ್ತರ ಸಭೆ ನಡೆಸಿ ಮತ ಯಾಚಿಸುವರು. ಮಾ.28ರ ಬೆಳಗ್ಗೆ 11ಕ್ಕೆ ಭೇರ್ಯದ ಚಾಮುಂಡೇಶ್ವರಿ ಕಲ್ಯಾಣ ಮಂಟಪದಲ್ಲಿ, ಮಧ್ಯಾಹ್ನ 2ಕ್ಕೆ ಮೇಲೂರು ಗ್ರಾಮದ ರಂಗಸ್ಥಳದ ಆವರಣ, ಸಂಜೆ 4.30ಕ್ಕೆ ಮಿರ್ಲೆ ಗ್ರಾಮದ ಸಾರ್ವಜನಿಕ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸುವರು. ಮಾ.29ರ ಬೆಳಗ್ಗೆ 11ಕ್ಕೆ ಹೆಬ್ಬಾಳು ಲಕ್ಷಮ್ಮ ಕೋಟೇಗೌಡ ಸಮುದಾಯ ಭವನದಲ್ಲಿ, ಮಧ್ಯಾಹ್ನ 3ಕ್ಕೆ ಲಾಳಂದೇವನಹಳ್ಳಿ ಗ್ರಾಮದ ಶಂಭುಲಿಂಗೇಶ್ವರ ರೈಸ್ ಮಿಲ್ ಆವರಣದಲ್ಲಿ ಮತ್ತು ಸಂಜೆ 4.30ಕ್ಕೆ ತಿಪ್ಪೂರಿನ ಕುಂಬಾರರ ಸಮುದಾಯ ಭವನದಲ್ಲಿ ಸಭೆ ನಡೆಯಲಿದೆ. ಪಕ್ಷದ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು ಸಭೆಗೆ ಭಾಗವಹಿಸಬೇಕು ಎಂದು ಪ್ರಧಾನ ಕಾರ್ಯದರ್ಶಿ ಕೆ.ಎಸ್. ರೇವಣ್ಣ, ವಕ್ತಾರ ಕೆ.ಎಲ್. ರಮೇಶ್ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

