'ಆಹಾರ ಭದ್ರತೆ' ಕ್ರಾಂತಿಕಾರಿ ಕಾಯ್ದೆ
ಕ.ಪ್ರ.ವಾರ್ತೆ ಮೈಸೂರು ಮಾ. 30
ಆಹಾರ ಭದ್ರತೆ ಮಸೂದೆ ಅಪೌಷ್ಟಿಕತೆ ನಿವಾರಣೆಗೆ ಕ್ರಾಂತಿಕಾರಕ ಕಾಯ್ದೆ ಎಂದು ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಅಭಿಪ್ರಾಯಪಟ್ಟರು.
ಕರ್ನಾಟಕ ಕಾನೂನು ಮತ್ತು ಸಂಸದೀಯ ಪುನರ್ಸ್ಥಾಪನಾ ಸಂಸ್ಥೆ ಹಾಗೂ ವಿದ್ಯಾವರ್ಧಕ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಆಹಾರ ಭದ್ರತಾ ಕಾಯ್ದೆ 2013 ಸಮಸ್ಯೆ ಮತ್ತು ಸವಾಲುಗಳು ಎಂಬ ವಿಷಯ ಕುರಿತ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಹಸಿವು ಮತ್ತು ಬಡತನದಿಂದಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಕಂಡು ಬಂದಿದ್ದು, ಹುಟ್ಟುವ ಪ್ರತಿಯೊಂದು ಮಗುವಿಗೂ ಮೊದಲ ಎರಡು ವರ್ಷದವರೆಗೆ ಪೌಷ್ಟಿಕ ಆಹಾರ ನೀಡದಿದ್ದರೆ ಬೌದ್ಧಿಕ ಹಾಗೂ ಮಾನಸಿಕ ಬೆಳವಣಿಗೆ ಅಸಾಧ್ಯ. ಹಸಿವು ಮುಕ್ತಗೊಳಿಸಿ ಎಲ್ಲರಿಗೂ ಪೌಷ್ಟಿಕ ಆಹಾರ ಒದಗಿಸುವಲ್ಲಿ ಆಹಾರ ಭದ್ರತಾ ಕಾಯ್ದೆ ಸಹಕಾರಿಯಾಗಿದೆ ಎಂದರು.
ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಹಾಗೂ ಕುಟುಂಬಕ್ಕೆ 35 ಕೆಜಿ ಆಹಾರವನ್ನು ನೀಡಬೇಕಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.75 ಹಾಗೂ ನಗರ ಪ್ರದೇಶದಲ್ಲಿ ಶೇ. 50 ಮಂದಿಗೆ ಇದರ ಸವಲತ್ತು ತಲುಪಬೇಕು. ಗರ್ಭೀಣಿ ಹಾಗೂ ಜನನದ ನಂತರ 6 ತಿಂಗಳವರೆಗೆ ತಾಯಿ ಮತ್ತು ಮಗುವಿಗೆ ಅಂಗನವಾಡಿ ಮೂಲಕ ಪೌಷ್ಟಿಕ ಆಹಾರ ನೀಡಬೇಕು. 6 ರಿಂದ 14 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಬೇಕು ಎಂದು ಕಾಯ್ದೆಯಲ್ಲಿ ತಿಳಿಸಿದ್ದು, ಇದರ ಪಾಲನೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹೊಣೆ ಎಂದರು.
ನ್ಯಾಯ ಹಾಗೂ ಮಾನವ ಹಕ್ಕು ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎಚ್.ಕೆ. ಜಗದೀಶ್, ಆಹಾರ ಭದ್ರತೆ ಅನುಷ್ಠಾನದಲ್ಲಿ ಯಾವುದೇ ಲೋಪ ಕಂಡು ಬಂದರೂ ಆಯಾಯ ಜಿಲ್ಲೆಯ ದೂರು ನಿರ್ವಹಣಾ ಘಟಕಗಳಿಗೆ ದೂರು ನೀಡಬಹುದು. ರಾಜ್ಯ ಮಟ್ಟದಲ್ಲಿ ಇಂತಹ ವೇದಿಕೆಯನ್ನು ಇನ್ನು ಸ್ಥಾಪಿಸಿಲ್ಲ ಎಂದ ಅವರು, ಕಾಯ್ದೆಯ ಸಮರ್ಪಕ ಬಳಕೆಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಆಶಿಸಿದರು.
ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್, ಪ್ರಾಂಶುಪಾಲ ಕೆ.ಬಿ. ವಾಸುದೇವ ಇದ್ದರು. ನಂತರ ತಜ್ಞರಿಂದ ವಿಚಾರ ಗೋಷ್ಠಿ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

